ರಾಜ್ಯದಲ್ಲಿ ಈ ಬಾರಿಯ ಪೂರ್ವ ಮುಂಗಾರಿನ ಆರ್ಭಟ ಜೋರಾಗಿದ್ದು, ಮಳೆ, ಸಿಡಿಲಾಘಾತಗಳು ಕರ್ನಾಟಕದ ಹಲವು ಜಿಲ್ಲೆಗಳಿಗೆ ತೀವ್ರ ಹೊಡೆತ ನೀಡಿವೆ. ಇದು ಸಾಮಾನ್ಯ ಮಳೆಯೆಂದೇ ನಿರೀಕ್ಷಿಸಲಾಗಿದ್ದರೂ, ಹಲವೆಡೆ ಮಳೆ ಪ್ರಮಾಣವು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿ ದಾಖಲಾಗಿದೆ. ಸಿಡಿಲಿನಿಂದ ಸಾವು, ಬೆಳೆಹಾನಿ, ಪರಿಸರದ ಮೇಲೆ ದುಷ್ಪರಿಣಾಮ, ಮೂಲ ಸೌಕರ್ಯಗಳ ಹಾನಿ ಸೇರಿ ಜನಜೀವನ ಅಸ್ತವ್ಯಸ್ತಕ್ಕೆ ಕರ್ನಾಟಕ ಸಾಕ್ಷಿಯಾಗಿದೆ.
ನಿನ್ನೆ (ಮೇ.15) ರಂದು ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದ್ದು, ಪುಲಕೇಶಿ ನಗರದಲ್ಲಿ ರಾತ್ರಿ 9.15ರ ಹೊತ್ತಿಗೆ 29.5 ಮಿಮೀ ಮಳೆ ದಾಖಲಾಗಿದೆ. ಜಕ್ಕೂರು 25 ಮಿಮೀ, ಪೂರ್ವ ಬಾಣಸವಾಡಿ 16.5 ಮಿಮೀ ಮತ್ತು ಹೊರಮಾವು 13.5 ಮಿಮೀ ಮಳೆ ಆಗಿದೆ. ವಿಮಾನ ನಿಲ್ದಾಣಕ್ಕೆ ಪ್ರಮುಖ ಮಾರ್ಗವಾದ ಬಳ್ಳಾರಿ ರಸ್ತೆಯಲ್ಲಿ 27 ಮಿಮೀ ಮಳೆಯಾಗಿದೆ. ಪರಿಣಾಮ ರಸ್ತೆಗಳು ನದಿಗಳಂತಾಗಿ ಹರಿದು ಭಾರೀ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ವಿದ್ಯಾನಗರ ಅಂಡರ್‌ಪಾಸ್, ಎಂ ಜಿ ರಸ್ತೆ ಪೂರ್ತಿ ನೀರು ತುಂಬಿ ವಾಹನಗಳು ಕೆಲಕಾಲ ನಿಂತಲ್ಲೇ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು.

ಸಿಡಿಲಾಘಾತಕ್ಕೆ ಜನ-ಜಾನುವಾರು ಸಾವು:
ಮೇ 13ರಂದು ರಾಜ್ಯದ ವಿವಿಧ ಭಾಗಗಳಲ್ಲಿ ಸುರಿದ ಭಾರಿ ಮಳೆ ಮತ್ತು ಸಿಡಿಲಾಘಾತಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ಕುಟುಂಬದ ಇಬ್ಬರು, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಯಲ್ಲಿ ತಲಾ ಇಬ್ಬರು ಹಾಗೂ ವಿಜಯಪುರ ಜಿಲ್ಲೆಯ ಒಬ್ಬರು ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಜಮೀನಿನಲ್ಲಿದ್ದ ಬೀರಪ್ಪ (45) ಹಾಗೂ ಅವರ ಸಹೋದರನ ಮಗ ಸುನೀಲ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ಬಸನಗೌಡ (40) ಹಾಗೂ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದ ಯಂಕಪ್ಪ ಜಾಡಿ (45) ಸಿಡಿಲಿಗೆ ಬಲಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಲ್ಲಪ್ಪ ಗುರಶಾಂತಪ್ಪ ತಾಳಿಕೋಟಿ (47), ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ರೇವನೂರ ಗ್ರಾಮದ ಶ್ರೀನಾಥ ದತ್ತಪ್ಪ (26) ಸಿಡಿಲು ಬಡಿದು ಮೃತಪಟ್ಟಿರುವ ವರದಿಯಾಗಿದೆ.

ಗದಗ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಮಳೆಗೆ ಹರಿಯುತ್ತಿದ್ದ ಹಳ್ಳ ದಾಟುವಾಗ ಬೈಕ್ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಬುಧವಾರ ಪತ್ತೆಯಾಗಿದೆ. ವಿಜಯನಗರದ ಹರಪನಹಳ್ಳಿ ತಾಲೂಕಿನಲ್ಲಿ ಸಿಡಿಲು ಬಡಿದು 7 ಕುರಿಗಳು ಸಾವನ್ನಪ್ಪಿವೆ.
ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ವರ್ಷ 2.6 ಮಿಮೀ ವಾಡಿಕೆ ಮಳೆ ಇದ್ದರೆ, ಮಂಗಳವಾರ (ಮೇ.13) ಒಂದೇ ದಿನ 11.8 ಮಿಮೀ ಮಳೆ ಸುರಿದಿದೆ. ತಾಲೂಕಿನ ಬಸಾಪುರದಲ್ಲಿ ಗಾಳಿ, ಮಳೆಗೆ ಶಾಲಾ ಕಟ್ಟಡದ ಮೇಲೆ ಮರ ಬಿದ್ದು ಚಾವಣಿ ಹಾಳಾಗಿ ಸುಮಾರು 60 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನೊಂದೆಡೆ ನೀರಾವರಿ ಪ್ರದೇಶದಲ್ಲಿ ಬೇಸಿಗೆ ಭತ್ತದ ಕೊಯ್ಲು ಪ್ರಕ್ರಿಯೆ ನಡೆಯುತ್ತಿದ್ದು ಮಳೆಯಿಂಂದ ತೊಂದರೆಯಾಗಿದೆ. ದಾವಣಗೆರೆ ತಾಲೂಕು ಜರೀಕಟ್ಟೆ, ಮಿಟ್ಟಕಟ್ಟೆ ಗ್ರಾಮಗಳಲ್ಲಿ ಕೊಯ್ಲಿಗೆ ಬಂದ ಭತ್ತ ನೆಲಕ್ಕೆ ಬಿದ್ದು ಹಾನಿಯಾಗಿದೆ. ದೇವರಬೆಳಕೆರೆ ಗ್ರಾಮದಲ್ಲಿ ರಾಶಿ ಮಾಡಿದ ಭತ್ತ ಮಳೆಯಿಂದ ನೆನೆದು ಮೊಳಕೆ ಒಡೆಯುವ ಆತಂಕ ಹುಟ್ಟಿಸಿದೆ.
ಬೆಳೆ ಹಾನಿ:
ಬೇಸಿಗೆ ಮಳೆಯಿಂದ ಬಿಸಿಲು ಪ್ರದೇಶದ ಜಿಲ್ಲೆಗಳಲ್ಲಿ ಹಿತವಾದರೆ, ಕರಾವಳಿ, ಮಲೆನಾಡು, ಒಳನಾಡುಗಳಲ್ಲಿ ವಿವಿಧೆಡೆ ಬೆಳೆಗಳಿಗೆ ಹಾನಿಯಾಗಿದೆ. ಜೋರು ಗಾಳಿ ಮಳೆಗೆ ಬೆಳೆಗಳು ನೆಲಕಚ್ಚಿವೆ.
ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಿರಂತರ ಮಳೆಯ ಕಾರಣದಿಂದ ಕಾಫಿ ಮತ್ತು ಮೆಣಸು ಬೆಳೆಗಳು 60% ಇಳುವರಿ ನಷ್ಟ ಅನುಭವಿಸುತ್ತಿವೆ. ಮಳೆಯ ಜತೆಗೆ ಬಿರುಗಾಳಿ ಮತ್ತು ತಂಪು ಹವಾಮಾನವು ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿದೆ.
ಹಲವೆಡೆ ನಿರಂತರ ಮಳೆಯಿಂದ ಬೆಳೆ ಹಾನಿಯಾದರೆ, ಕೆಲವೆಡೆ ಬೇಸಿಗೆಯ ಬಿರುಸಿಗೆ ಇಳುವರಿ ಕಳೆಗುಂಡುತ್ತಿದೆ. ಚಿಕ್ಕಬಳ್ಳಾಪುರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಮತ್ತು ನೀರಿನ ಕೊರತೆಯಿಂದ ದಾಳಿಂಬೆ ಬೆಳೆಗಳು ಹಾನಿಗೊಳಗಾಗಿವೆ. ಹಣ್ಣುಗಳು ಕಪ್ಪಾಗುತ್ತಿದ್ದು, ತಾಜಾತನ ಕಳೆದುಕೊಂಡಿವೆ ಎಂದು ವರದಿಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ಮತ್ತು ನೀರಿನ ಕೊರತೆಯಿಂದ ತೆಂಗಿನ ಮರಗಳು ಹಾನಿಗೊಳಗಾಗಿದ್ದು, ಎಳನೀರು ಇಳುವರಿಯಲ್ಲಿ ಕುಸಿತ ಕಂಡುಬಂದಿದೆ . ಮಂಗಳೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಮತ್ತು ನೀರಿನ ಕೊರತೆಯಿಂದ ಅಡಿಕೆ ಮತ್ತು ಒಣದ್ರಾಕ್ಷಿ ಬೆಳೆಗಳು ಹಾನಿಗೊಳಗಾಗಿವೆ. ಇವುಗಳ ಇಳುವರಿ ಶೇ.50ರಷ್ಟು ಕುಸಿತ ಕಂಡುಬಂದಿದೆ.

ಬುಧವಾರ ರಾತ್ರಿ ಮತ್ತು ನಿನ್ನೆ(ಮೇ.14&15) ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಚಾಮರಾಜನಗರದ ವಡಗೆರೆಯಲ್ಲಿ ಬಿರುಗಾಳಿ ಅಬ್ಬರಕ್ಕೆ ಆಲದ ಮರದ ಕೊಂಬೆ ಬಿದ್ದು ಯುವಕನೊಬ್ಬನ ಕಾಲು ಮೂಳೆ ಮುರಿದಿದೆ ಎಂದು ವರದಿಯಾಗಿದೆ. ಮೈಸೂರಿನ ಎಚ್ ಡಿ ಕೋಟೆಯಲ್ಲಿ ನಿನ್ನೆ ಸತತ ಒಂದು ಗಂಟೆ ಕಾಲ ಮಳೆಯಾಗಿದ್ದು, ಪಟ್ಟಣದ ತಾಯಿ ಮಕ್ಕಳ ಆಸ್ಪತ್ರೆ, ಆಯುರ್ವೇದಿಕ್ ಆಸ್ಪತ್ರೆ ಹಾಗೂ ಸಿಬ್ಬಂದಿ ವಸತಿಗೃಹದ ಆವರಣಕ್ಕೆ ನೀರು ನುಗ್ಗಿದೆ. ಇದರಿಂದ ರೋಗಿಗಳು ಆಸ್ಪತ್ರೆಗೆ ತೆರಳಲು ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ ಓಡಾಡಲು ಕಷ್ಟವಾಗಿದೆ.

ಹುಣಸೂರಿನ ಹನಗೋಡು ಹೋಬಳಿ ಹೊಸೂರು ಗೇಟ್ ಗ್ರಾಮದ ಗೋವಿಂದಯ್ಯ ಎಂಬುವವರ ಹೆಂಚಿನ ಮನೆಗೆ ಭಾಗಶಃ ಹಾನಿಯಾಗಿದೆ. ಯಶೋಧಪುರದ ನಾಗಮ್ಮ ಎಂಬುವವರ ಮನೆ ಮೇಲ್ಛಾವಣಿ ಬಿರುಗಾಳಿಗೆ ಹಾರಿ ಹೋಗಿದ್ದು, ಮನೆಯಲ್ಲಿದ್ದ ಆಹಾರ ಪದಾರ್ಥ, ದಿನಸಿ, ಇತರ ವಸ್ತುಗಳು ನಾಶವಾಗಿವೆ ಎನ್ನಲಾಗಿದೆ.
ಕಸಬಾದ ರೈತ ವಿಠಲ್ ರಾವ್ ಅವರ ಒಂದು ಎಕರೆ ಬಾಳೆ ತೋಟ ಭಾರೀ ಮಳೆ ಮತ್ತು ಗಾಳಿಗೆ ನೆಲಕ್ಕುರುಳಿದೆ. ಅಂದಾಜು 40 ಸಾವಿರ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಪಿರಿಯಾಪಟ್ಟಣ, ಕುಕ್ಕರಿಹಳ್ಳಿ ಕೆರೆ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆ ಪರಿಣಾಮ ಅಲ್ಲಲ್ಲಿ ಮರಗಳ ಕೊಂಬೆಗಳು ಮುರಿದು ಬಿದ್ದು, ರಸ್ತೆಗಳಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿತ್ತು.
ವಾಡಿಕೆಗಿಂತ ಮೊದಲೇ ಮುಂಗಾರಿನ ಮುನ್ಸೂಚನೆ:
ರಾಜ್ಯಾದ್ಯಂತ ಈಗಾಗಲೇ ಪೂರ್ವ ಮುಂಗಾರು ಅಬ್ಬರಿಸಿದೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಕಷ್ಟು ಮಳೆಯಾಗಿದೆ. ಇದೀಗ ಮೇ ಅಂತ್ಯಕ್ಕೆ ಅಥವಾ ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಆಗಮಿಸುವ ಸೂಚನೆ ನೀಡಿದೆ ಐಎಂಡಿ. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಅದು ಇನ್ನೂ ಎರಡ್ಮೂರು ದಿನಗಳಿಗೆ ಮುಂದುವರೆಯಲಿದೆ ಎಂದು ಇಲಾಖೆ ತಿಳಿಸಿದೆ.
ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಈ ಬಾರಿ ವಾಡಿಕೆಗಿಂತ ಶೇ. 105ರಷ್ಟು ಹೆಚ್ಚು ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ನೈಋತ್ಯ ಮುಂಗಾರು ಮಾರುತಗಳು ಮೇ ತಿಂಗಳ ಕಡೆಯ ವಾರದಿಂದಲೇ ಕೇರಳದ ಮೂಲದ ಭಾರತವನ್ನು ಪ್ರವೇಶಿಸಲಿದ್ದು, ಸೆಪ್ಟೆಂಬರ್ ಮಧ್ಯ ಭಾಗದವರೆಗೂ ಮುಂಗಾರು ಮಾರುತಗಳ ಪ್ರಭಾವ ಭಾರತದಾದ್ಯಂತ ಇರಲಿದೆ. ಸೆಪ್ಟೆಂಬರ್ ಮಧ್ಯಭಾಗದ ನಂತರ ಮಾರುತಗಳ ಪ್ರಮಾಣ ಕಡಿಮೆಯಾಗಲಿದೆ. ಆದರೆ ಅಲ್ಲಿಯವರೆಗೆ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಉತ್ತಮ ಮಳೆ ಬೀಳಲಿದೆ ಎಂದು ಐಎಂಡಿ ತಿಳಿಸಿದೆ.
ಕೊಡಗಿನಲ್ಲಿ ಮುಂಗಾರಿಗೆ ಸಿದ್ಧತೆ:
ಈ ಬಾರಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗುವ ನಿರೀಕ್ಷೆಯಿದ್ದು, ಕೊಡಗು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಾಕೃತಿಕ ವಿಪತ್ತಿನಿಂದ ಸುಮಾರು 10,922 ಮಂದಿ ತೊಂದರೆಗೆ ಸಿಲುಕಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಮಳೆ, ಭೂಕುಸಿತ ಸಂಭವನೀಯತೆ ಇರುವ 102 ಸ್ಥಳಗಳನ್ನು ಗುರುತಿಸಲಾಗಿದೆ, ಮತ್ತು ಅಲ್ಲಿ ವಾಸಿಸುತ್ತಿರುವ 2,953 ಕುಟುಂಬಗಳ ಮಾಹಿತಿ ಕೂಡ ಕಲೆಹಾಕಲಾಗಿದೆ. ವಿಪತ್ತಿನ ಸಂದರ್ಭಗಳಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲು 90 ರಕ್ಷಣಾ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ.
ಮಡಿಕೇರಿ ನಗರ ಸೇರಿದಂತೆ ತಾಲೂಕಿನಲ್ಲಿ 44 ವಸತಿನ ಪ್ರದೇಶಗಳಲ್ಲಿ ಪ್ರಾಕೃತಿಕ ವಿಪತ್ತು ಸಂಭವಿಸುವ ಸಾಧ್ಯತೆ ಇದೆ. ಕುಶಾಲನಗರದಲ್ಲಿ 30, ವಿರಾಜಪೇಟೆಯಲ್ಲಿ 18 ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ 10 ಪ್ರದೇಶಗಳನ್ನು ಅಪಾಯದ ಭಾಗವೆಂದು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ.
ಮೈಸೂರು, ದಾವಣಗೆರೆ, ಬೆಳಗಾವಿ, ಚಿಕ್ಕಮಗಳೂರು, ಬೀದರ್, ಬಾಗಲಕೋಟೆ, ಧಾರವಾಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿಯೂ ಸಾಧಾರಣಕ್ಕೂ ಮೀರಿ ಮಳೆಯಾಗಿ ಗ್ರಾಮೀಣ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.
ಈ ಬಾರಿಯ ಪೂರ್ವ ಮುಂಗಾ ರಾಜ್ಯದ ಹಲವೆಡೆ ಪ್ರತಾಪ ಮೆರೆದಿದ್ದು, ಬರಲಿರುವ ಮುಂಗಾರಿನ ತೀವ್ರತೆಯನ್ನು ಚಿತ್ರಿಸಿದೆ. ಮಳೆ, ಸಿಡಿಲು, ಭೂಕುಸಿತ, ಹಾಗೂ ಬೆಳೆ ಹಾನಿಗಳಿಗೆ ಈಗಿನಿಂದಲೇ ಪೂರ್ವ ತಯಾರಿ ಅತ್ಯಗತ್ಯ. ಸರ್ಕಾರ ತಕ್ಷಣದ ಪರಿಹಾರ ಹಾಗೂ ಪುನರ್ವಸತಿ ಕ್ರಮಗಳನ್ನು ಜಾರಿಗೆ ತರಬೇಕಿದೆ. ರಾಜ್ಯ ಮಟ್ಟದಿಂದ ಗ್ರಾಮ ಮಟ್ಟದ ತನಕ ವ್ಯವಸ್ಥಿತ ಮುನ್ನೆಚ್ಚರಿಕೆಯಾದರೆ ಮಾತ್ರ ಜನಜೀವನ, ಬೆಳೆ ಮತ್ತು ಆಸ್ತಿಪಾಸ್ತಿಗೆ ರಕ್ಷಣೆ ಸಾಧ್ಯ. ಮುಂದುವರೆದು ದೀರ್ಘಕಾಲೀನ ತಂತ್ರಗಳು ಮತ್ತು ತಂತ್ರಜ್ಞಾನ ಆಧಾರಿತ ಮುನ್ನೆಚ್ಚರಿಕಾ ವ್ಯವಸ್ಥೆಗಳ ಅಗತ್ಯತೆ ಅನಿವಾರ್ಯವಾಗಿದೆ.