ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರ ಹಲ್ಲೆಗೆ ಯತ್ನಿಸಿರುವ ಪಾಂಡವಪುರ ತಾಲ್ಲೂಕಿನ ಇಂಗಲಗುಪ್ಪೆ ಕೃಷ್ಣೇಗೌಡ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ರೈತ ಮುಖಂಡರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಮಂಗಳವಾರ ಮಂಡ್ಯದಲ್ಲಿ ನಡೆದಿರುವ ಘಟನೆಯನ್ನು ಖಂಡಿಸಿದ್ದಾರೆ.
ಮಂಡ್ಯದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಹೋಗುವಾಗ ಬಡಗಲಪುರ ನಾಗೇಂದ್ರ ಅವರ ಮೇಲೆ ಇಂಗಲಗುಪ್ಪೆ ಕೃಷ್ಣ ಮತ್ತು ಅವರ ತಂಡ ಹಲ್ಲೆಗೆ ಯತ್ನಿಸಿರುವ ಸಂಬಂಧ ಪ್ರಕರಣ ದಾಖಲಾಗಿದೆ. ಜೊತೆಗೆ ಕೃಷ್ಣ ಅವರೂ ಪ್ರತಿ ದೂರು ನೀಡಿದ್ದಾರೆ.
“ದರೋಡೆ, ಅಪಹರಣ, ವಂಚನೆ ಇತ್ಯಾದಿ ಆರೋಪಗಳನ್ನು ಹೊತ್ತು ರೌಡಿಶೀಟರ್‌ನಲ್ಲಿ ದಾಖಲಾಗಿರುವ ಇಂಗಲಗುಪ್ಪೆ ಕೃಷ್ಣೇಗೌಡರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು” ಪ್ರತಿಭಟನಾ ರೈತರು ಆಗ್ರಹಿಸಿದ್ದಾರೆ.
“ಕೃಷ್ಣೇಗೌಡ ಎಂಬವವರು ಹಸಿರು ಟವಲ್ ಧರಿಸಿದ ನಕಲಿ ರೈತ ಹೋರಾಟಗಾರರಾಗಿದ್ದಾರೆ. ಇವರು ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಯಾಗಿದ್ದು, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅಪಹರಣ, ದರೋಡೆ, ವಂಚನೆ ಇತ್ಯಾದಿಗೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ಠಾಣೆಯಲ್ಲಿ ಇವರ ವಿರುದ್ಧ ರೌಡಿಶೀಟರ್ ತೆರೆಯಲಾಗಿದೆ. ಇಷ್ಟೆಲ್ಲ ಪ್ರಕರಣಗಳಿದ್ದರೂ ತನ್ನ ದಂಧೆಯನ್ನು ಲಂಗುಲಗಾಮಿಲ್ಲದೆ ಮುಂದುವರಿಸುತ್ತಿದ್ದಾರೆ. ಇವರ ಸಹಪಾಠಿಗಳ ಬೆದರಿಕೆಯಿಂದ ಹಲವು ಬಡ ಕುಟುಂಬಗಳು ತೊಂದರೆಗೆ ಸಿಲುಕಿವೆ. ರೌಡಿ ಎಂಬ ಕಾರಣಕ್ಕೆ ಇವರ ವಿರುದ್ಧ ಜನರು ಮಾತನಾಡಲು ಹೆದರುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಮತ್ತು ಮಂಡ್ಯ ಘಟಕದ ಅಧ್ಯಕ್ಷರಾದ ಕೆಂಪೂಗೌಡ ಅವರು ಗೃಹ ಇಲಾಖೆಗೆ, ಮುಖ್ಯಕಾರ್ಯದರ್ಶಿಯವರಿಗೆ ಮತ್ತು ಡಿಜಿಪಿಯವರಿಗೆ ಪತ್ರ ಬರೆದಿದ್ದರು. ರೈತ ಮುಖಂಡರ ಒತ್ತಾಯದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೆಲವು ಕ್ರಮಗಳನ್ನು ಕೃಷ್ಣ ವಿರುದ್ಧ ಜರುಗಿಸಿದೆ. ಆದರೂ ಯಾವುದೇ ಲಂಗುಲಗಾಮು ಇಲ್ಲದೆ ಹಗರಣ, ಅಕ್ರಮಗಳನ್ನು ಕೃಷ್ಣ ಮುಂದುವರಿಸಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಗರಣಗಳಿಂದ ತಪ್ಪಿಸಿಕೊಳ್ಳಲು ತನ್ನನ್ನು ರೈತ ಸಂಘದ ಅಧ್ಯಕ್ಷನೆಂದು ಹೇಳಿಕೊಂಡು ಸ್ಕಾರ್ಪಿಯೊ ಕಾರನ್ನು ಉಪಯೋಗಿಸಿ ವಿಧಾನಸೌಧ ಮತ್ತು ಇತರೆ ಕಚೇರಿಗಳಿಗೆ ಕೃಷ್ಣ ಓಡಾಡುತ್ತಿದ್ದಾರೆ. ರಕ್ಷಣೆ ಪಡೆಯಲು ಹಸಿರು ಟವಲ್ ದುರುಪಯೋಗ ಮಾಡಿಕೊಂಡಿದ್ದಾರೆ. ಆ ಮೂಲಕ ಪವಿತ್ರ ಹೋರಾಟಕ್ಕೆ ಕಳಂಕ ತರುತ್ತಿದ್ದಾರೆ. ಇವರ ವಿರುದ್ಧ ರೈತ ಮುಖಂಡರು ದೂರು ನೀಡಿರುವುದನ್ನು ಸಹಿಸದೆ ನಾಗೇಂದ್ರ ಅವರ ಮೇಲೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ದೂರು ದಾಖಲಾಗಿದೆ. ಕೃಷ್ಣ ತಮ್ಮ ದ್ವೇಷವನ್ನು ಮುಂದುವರಿಸುತ್ತಿರುವುದು ಕಂಡುಬಂದಿದೆ. ಇವರ ವಿರುದ್ಧ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಕ್ತ ಕ್ರಮ ಜರುಗಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮಂಡ್ಯ ಜಿಲ್ಲಾಧ್ಯಕ್ಷ ಕೆಂಪೂಗೌಡ, ಯುವ ರೈತ ಮುಖಂಡ ಪ್ರಸನ್ನ ಎನ್.ಗೌಡ, ಕೊಡಗು ಜಿಲ್ಲಾಧ್ಯಕ್ಷ ಮನುಸೋಮಯ್ಯ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಮುಖಂಡರಾದ ಬನ್ನೂರು ಕೃಷ್ಣಪ್ಪ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿರಿ: ರೈತ ಮುಖಂಡ ಬಡಗಲಪುರ ನಾಗೇಂದ್ರರ ಮೇಲೆ ಹಲ್ಲೆಗೆ ಯತ್ನ; ಪ್ರಕರಣ ದಾಖಲು