ರನ್ಯಾ ರಾವ್ ಕೇಸ್‌ | ಕಾಂಗ್ರೆಸ್‌ನ ಇಬ್ಬರು ಮಂತ್ರಿ ಸೇರಿ ಹಲವು ರಾಜಕಾರಣಿಗಳಿಗೆ ಭೀತಿ ಶುರು!

Date:

Advertisements

ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಣೆ ಸಂಬಂಧ ಬಂಧಿತರಾದ ‘ಮಾಣಿಕ್ಯ’ ನಟಿ, ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳು ರನ್ಯಾ ರಾವ್ ಅವರಿಂದ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಇಬ್ಬರು ಮಂತ್ರಿಗಳು ಸೇರಿ ಹಲವು ರಾಜಕಾರಣಿಗಳಿಗೆ ಭೀತಿ ಶುರುವಾಗಿದೆ.

ನಟಿ ರನ್ಯಾ ರಾವ್‌ ನಿರ್ದೇಶಕಿಯಾಗಿರುವ ಕಂಪನಿಗೆ 2023ನೇ ಸಾಲಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯಿಂದ ಶಿರಾ ಕೈಗಾರಿಕಾ ಪ್ರದೇಶದಲ್ಲಿ 12 ಎಕರೆ ಜಮೀನು ಮಂಜೂರು ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

ಚಿತ್ರನಟಿ ರನ್ಯಾ ರಾವ್ ಚಿನ್ನದ ಅಕ್ರಮ ಸಾಗಾಟ ಪ್ರಕರಣಕ್ಕೆ ಕಾಂಗ್ರೆಸ್ ಸಚಿವರ ಸಪೋರ್ಟ್ ಇದೆ ಎಂದು ಆರೋಪಿಸಿ ಬಿಜೆಪಿ ಮತ್ತು ಜೆಡಿಎಸ್‌ ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬೀಳಲು ಆರಂಭಿಸಿವೆ. “ಕಾಂಗ್ರೆಸ್ ಪ್ರಭಾವಿ ಸಚಿವರುಗಳಿಗೆ ರನ್ಯಾ ರಾವ್ ಫೋನ್ ಕರೆ ಮಾಡಿದ್ದಾರೆ, ಅದು ಬಹಿರಂಗವಾಗಲಿ” ಎಂದು ಬಿಜೆಪಿ ಶಾಸಕರು ಸದನದಲ್ಲಿ ಆಗ್ರಹಿಸಿದ್ದಾರೆ.

Advertisements

ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಬಿಜೆಪಿ ಶಾಸಕ ಭರತ್ ಶೆಟ್ಟಿ, “ಇದೊಂದು ಕ್ರಿಮಿನಲ್ ಕೇಸ್. ಕಾಂಗ್ರೆಸ್ ಸಚಿವರುಗಳಿಗೆ ರನ್ಯಾ ರಾವ್ ಕರೆ ಮಾಡಿದ್ದಾಳೆ ಅನ್ನೋದು ಗೊತ್ತಾಗಿದೆ. ಮೂವರು ಸಚಿವರ ಸಂಪರ್ಕದ ಬಗ್ಗೆಯೂ ಸಾರ್ವಜನಿಕವಾಗಿ ಮಾತನಾಡ್ತಿದ್ದಾರೆ. ಸಿಬಿಐ ತನಿಖೆ ನಡೆಯುತ್ತಿದೆ, ಎಲ್ಲರ ವಿಚಾರವೂ ತನಿಖೆಯಿಂದ ಹೊರಬರಲಿ. ಆಕೆಗೆ ಸೈಟ್ ಕೊಟ್ಟಿರೋ ಆರೋಪ‌ ಇದೆ. ಅದು ಬೇಗ ಪ್ರೊಸೆಸ್ ಆಗಿದೆ ಕೆಐಡಿಬಿನಲ್ಲಿ. ತಪ್ಪಿದ್ರೆ ಹೇಳಿ. ಲೀಗಲ್ ಆಗಿ ಅಪ್ಲೈ ಮಾಡಿದ್ರೆ ಅದು ಪ್ರೊಸೆಸ್ ಆಗಿರುತ್ತೆ. ಅದ್ರಲ್ಲಿ ಭ್ರಷ್ಟಾಚಾರ ಆಗಿದ್ರೆ ತನಿಖೆಯಾಗಲಿ” ಎಂದರು.

ಉದ್ಯಮಿ ಪುತ್ರ ತರುಣ್ ರಾಜು ಬಂಧನ

ತನಿಖೆ ವೇಳೆ ಒಂದೊಂದಾಗಿ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ. ಈ ಗೋಲ್ಡ್ ಸ್ಮಗ್ಲಿಂಗ್​ನಲ್ಲಿ ಡಿಆರ್​​ಐ ಅಧಿಕಾರಿಗಳಿಂದ ಹೋಟೆಲ್ ಉದ್ಯಮಿ ಮಾಲೀಕನ ತಮ್ಮನ ಮಗ ತರುಣ್ ರಾಜು ಎಂಬುವವರನ್ನು ಬಂಧಿಸಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್​​ ಅವರೊಂದಿಗೆ ಉದ್ಯಮಿ ಪುತ್ರ ತರುಣ್ ಹೆಸರು ಕೇಳಿಬಂದಿತ್ತು. ಹೀಗಾಗಿ ವಿಚಾರಣೆ ಮಾಡಿದ ಅಧಿಕಾರಿಗಳು ನಂತರ ಬಂಧಿಸಿದ್ದಾರೆ. ಇನ್ನು ನಟಿ ರನ್ಯಾ ರಾವ್ ಮತ್ತು ತರುಣ್ ರಾಜು ಇಬ್ಬರು ವರ್ಷಗಳಿಂದ ಸ್ನೇಹಿತರಾಗಿದ್ದರು. ರನ್ಯಾ ರಾವ್​ರಿಂದ ತರುಣ್ ರಾಜು ಚಿನ್ನ ತರಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಭಾವಿ ರಾಜಕಾರಣಿಗಳ ಸಂಪರ್ಕ

ರನ್ಯಾ ‘ಕ್ಸಿರೋದಾ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ಗೆ ನಿರ್ದೇಶಕಿಯಾಗಿದ್ದಾರೆ. ಪ್ರಭಾವಿ ರಾಜಕಾರಣಿಗಳ ಸಂಪರ್ಕ ಇಲ್ಲದೆ ಸರ್ಕಾರಿ ಜಮೀನು ಪಡೆಯುವುದು ಅಷ್ಟು ಸುಲಭವಲ್ಲ. ರನ್ಯಾಗೆ ಪ್ರಭಾವಿ ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಸಂಪರ್ಕ ಇರುವುದರಿಂದಲೇ ಕಂಪನಿಗೆ ಸರ್ಕಾರಿ ಜಮೀನು ಪಡೆಯಲು ಸಾಧ್ಯವಾಗಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಚಿನ್ನ ಕಳ್ಳಸಾಗಣೆ ಹಿಂದೆ ಈ ಪ್ರಭಾವಿ ರಾಜಕಾರಣಿಗಳಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆ ಪ್ರಭಾವಿಗಳು ಯಾರೆಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಿಳಾ ದಿನ ಕೇವಲ ಆಚರಣೆ ಮಾತ್ರವಲ್ಲ ಹಿರಿಮೆ

ಕೆಐಎಡಿಬಿ ಸ್ಪಷ್ಟನೆ

ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ರನ್ಯಾ ರಾವ್ ಅವರ ಮೆಸರ್ಸ್ ಕ್ಸಿರೋದಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 12 ಎಕರೆ ಭೂಮಿ 2023ರ ಜನವರಿ 2ರಂದು ಮಂಜೂರಾಗಿದೆ. ಹಿಂದಿನ ಸರ್ಕಾರ ಅಧಿಕಾರದಲ್ಲಿದ್ದಾಗ, 2023ರ ಜನವರಿ 2ರಂದು ನಡೆದ 137ನೇ ರಾಜ್ಯಮಟ್ಟದ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಕಮಿಟಿ (ಎಸ್‌ಎಲ್‌ಎಸ್‌ಡಬ್ಲ್ಯೂಸಿಸಿ) ಸಭೆಯಲ್ಲಿ ತುಮಕೂರು ಜಿಲ್ಲೆ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಈ ಭೂಮಿ ಮಂಜೂರಾತಿಗೆ ಈ ಅನುಮೋದನೆ ನೀಡಲಾಗಿದೆ.

“ಉಕ್ಕಿನಿಂದ ತಯಾರಿಸಲಾಗುವ ಟಿಎಂಟಿ ಪಟ್ಟಿ, ಸರಳು ಹಾಗೂ ಸಹ-ಉತ್ಪನ್ನಗಳ ಘಟಕವನ್ನು 138 ಕೋಟಿ ರು. ಹೂಡಿಕೆಯಲ್ಲಿ ಸ್ಥಾಪಿಸಲಾಗುವುದು. ಇದರಿಂದ ಸುಮಾರು 160 ಉದ್ಯೋಗ ಸೃಷ್ಟಿಯಾಗಲಿವೆ ಎಂದು ಕಂಪನಿ ಪ್ರಸ್ತಾವ ಸಲ್ಲಿಸಿತ್ತು‌. ಅದರಂತೆ ಕಂಪನಿಗೆ 12 ಎಕರೆ ಭೂಮಿ ಮಂಜೂರು ಮಾಡಲಾಗಿದೆ” ಎಂದು ಕೆಐಎಡಿಬಿ ಸಿಇಒ ಡಾ.ಮಹೇಶ್ ಸ್ಪಷ್ಟನೆ ನೀಡಿದ್ದಾರೆ.

ಹವಾಲ ನಂಟು

ರನ್ಯಾ ಅವರು ಸಿಕ್ಕಿಬಿದ್ದಿರುವ ಬಹು ಕೋಟಿ ಮೌಲ್ಯದ ಚಿನ್ನ ಕಳ್ಳ ಸಾಕಾಣಿಕೆ ಪ್ರಕರಣದಲ್ಲಿ ಹವಾಲ ನಂಟು ಕೂಡ ಬೆಸೆದುಕೊಂಡಿರುವುದು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿದೆ. ಹಲವು ಆಯಾಮಗಳಲ್ಲಿ ಸಿಲುಕಿಕೊಂಡಿರುವ ಈ ಪ್ರಕರಣದ ಬಗ್ಗೆ ಕೇಂದ್ರೀಯ ತನಿಖಾ ಸಂಸ್ಥೆಗಳು ತೀವ್ರ ಆಸಕ್ತಿ ವಹಿಸಿ ಪರಿಶೀಲನೆ ನಡೆಸುತ್ತಿವೆ. ಈ ನಡುವೆ ರನ್ಯಾ ಅವರನ್ನು ಗುಪ್ತಚರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿರುವ ಬೆನ್ನಲ್ಲೇ ಆಕೆಯ ಜತೆಗೆ ಸಂಪರ್ಕದಲ್ಲಿದ್ದ ರಾಜಕಾರಣಿಗಳು ನಡುಕ ಉಂಟಾಗಿದೆ.

ರನ್ಯಾ ಜೊತೆ ಸಂಪರ್ಕದಲ್ಲಿದ್ದ ರಾಜಕಾರಣಿಗಳು, ಚಿನ್ನಾಭರಣ ವ್ಯಾಪಾರಿಗಳು, ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಮಾಹಿತಿಯನ್ನು ಡಿಆರ್‌ಐ ಅಧಿಕಾರಿಗಳು ಕಲೆ ಹಾಕಿದ್ದಾರೆ. ರನ್ಯಾ ವಿಚಾರಣೆಯಲ್ಲಿ ಆಕೆಯ ಸಂಪರ್ಕದಲ್ಲಿರುವವರ ಮಾಹಿತಿ ಪಡೆಯಲಾಗಿದೆ, ಅಲ್ಲದೇ ಆಕೆಯ ಮೊಬೈಲ್ ನಲ್ಲಿ ಹೆಚ್ಚಿನ ಸಂಪರ್ಕವಿರುವವರ ವಿವರ ಪಡೆದು ಅವರುಗಳ ಪಾತ್ರದ ಬಗ್ಗೆ ಡಿಆರ್‌ಐ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ.

ದುಬೈನಿಂದ ಕೆಜಿ ಗಟ್ಟಲೇ ಚಿನ್ನ ಖರೀದಿಸಲು ಹಣ ಕೊಟ್ಟವರು ಯಾರೆಂದು ರನ್ಯಾ ಅವರು ಈವರೆಗೂ ಬಾಯ್ಬಿಟ್ಟಿಲ್ಲ. ತನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ತನಿಖೆಯ ಆರಂಭದಲ್ಲಿ ಹೇಳಿದ್ದ ರನ್ಯಾ, ಟ್ರ್ಯಾಪ್‌ ಮಾಡಿದವರು ಯಾರೆಂಬ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಈ ನಡುವೆ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿರುವ ಸಿಬಿಐ ಅಧಿಕಾರಿಗಳು ರನ್ಯಾ ಅವರನ್ನು ವಿಚಾರಣೆ ನಡೆಸುವ ಉದ್ದೇಶಕ್ಕೆ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಾ.3ರ ಸೋಮವಾರ ರಾತ್ರಿ 7 ಗಂಟೆ ಸುಮಾರಿಗೆ ಬಂದಿಳಿದ ರನ್ಯಾರವರನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ತಪಾಸಣೆಗೊಳಪಡಿಸಿದಾಗ 12 ಕೋಟಿ ರು. ಮೌಲ್ಯದ 14.8 ಕೆ.ಜಿ. ತೂಕದ ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿದ್ದವು. ತರುವಾಯ ರನ್ಯಾ ಮನೆ ಮೇಲೆ ದಾಳಿ ನಡೆಸಿ ಡಿಆರ್‌ಐ ಪರಿಶೀಲಿಸಿದಾಗ 2.06 ಕೋಟಿ ಮೌಲ್ಯದ ಚಿನ್ನ ಹಾಗೂ 2.16 ಕೋಟಿ ನಗದು ಪತ್ತೆಯಾಗಿತ್ತು. ಒಟ್ಟಾರೆ ನಟಿ ರನ್ಯಾ ಅವರಿಂದ 17.16 ಕೋಟಿ ಮೌಲ್ಯದ ವಸ್ತುಗಳು ಪತ್ತೆಯಾಗಿದ್ದವು. ಪ್ರಕರಣದ ತನಿಖೆಯನ್ನು ಡಿಆರ್‌ಐ ಅಧಿಕಾರಿಗಳು ಮುಂದುವರೆಸಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಸಿಬಿಐ ಸಹ ಪ್ರವೇಶವಾಗಿದೆ.

ಸಚಿವರ ಇನ್ವಾಲ್ವ್​ಮೆಂಟ್ ಇದ್ದರೆ ಸಿಬಿಐ ಬಯಲಿಗೆಳೆಯುತ್ತದೆ: ಪರಮೇಶ್ವರ್

ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ ಸದನದಲ್ಲಿ ಚರ್ಚೆಗೆ ಬಂದಾಗ ಉತ್ತರ ನೀಡಿದ ಗೃಹ ಸಚವ ಪರಮೇಶ್ವರ್‌, “ರನ್ಯಾ ರಾವ್ ಪ್ರಕರಣ ಮತ್ತು ರಾಜ್ಯ ಪೊಲೀಸ್ ನಡುವೆ ಸಂಬಂಧವೇ ಇಲ್ಲ. ನಟಿಯನ್ನು ಆದಾಯ ಗುಪ್ತಚರ ನಿರ್ದೇಶನಾಲಯದವರು ಬಂಧಿಸಿದ್ದಾರೆ. ಸಿಬಿಐ ತನಿಖೆಗೂ ಅವರೇ ನೀಡಿದ್ದಾರೆ. ರಾಜ್ಯದ ಇಬ್ಬರು ಸಚಿವರ ಇನ್ವಾಲ್ವ್​ಮೆಂಟ್ ಇದ್ದರೆ ಅದನ್ನೂ ಸಿಬಿಐ ಬಯಲಿಗೆಳೆಯುತ್ತದೆ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X