ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿರುವ ಸಿಐಡಿ ಅಧಿಕಾರಿಗಳು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಶಾಸಕ ಮುನಿರತ್ನ ಸೇರಿ 7 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಒಟ್ಟು 3 ಸಾವಿರ ಪುಟಗಳ ಚಾರ್ಜ್ಶೀಟ್ನಲ್ಲಿ ಮುನಿರತ್ನ, ಸುಧಾಕರ್, ಇನ್ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ, ಲೋಹಿತ್ ಗೌಡ, ಶ್ರೀನಿವಾಸ್, ಕಿರಣ್ ಕುಮಾರ್, ಮಂಜುನಾಥ್ ಹೆಸರುಗಳನ್ನು ಉಲ್ಲೇಖಿಸಲಾಗಿದೆ.
ಆರೋಪಿಗಳು ಪಿಐಗಳು, ಎಸಿಪಿಗಳ ಅಶ್ಲೀಲ ವಿಡಿಯೋ, ಫೋಟೊ ಮಾಡಿರುವುದು ಚಾರ್ಜ್ ಶೀಟ್ ನಲ್ಲಿ ಬಯಲಾಗಿದೆ. ತಮ್ಮ ಪರ ಕೆಲಸ ಮಾಡುವಂತೆ ಮಾಡಲು ಬ್ಲ್ಯಾಕ್ ಮೇಲ್ ಮಾಡಿ ಬೆದರಿಕೆ ಹಾಕುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ. ಎಚ್ಐವಿ ಸೋಂಕಿತ ಸಂತ್ರಸ್ತೆ, ನೊಂದ ಮಹಿಳೆಯಿಂದ ಸಿಐಡಿ ಅಧಿಕಾರಿಗಳು ಹೇಳಿಕೆಗಳನ್ನು ಪಡೆದಿದ್ದರು. ಜತೆಗೆ ಸಾಕ್ಷ್ಯಗಳ ಹೇಳಿಕೆಯನ್ನೂ ಪಡೆಯಲಾಗಿತ್ತು. ಶಾಸಕ ಮುನಿರತ್ನರನ್ನೂ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಬರೋಬ್ಬರಿ 63 ಪ್ರಶ್ನೆಗಳನ್ನು ಮುನಿರತ್ನ ಮುಂದಿಡಲಾಗಿತ್ತು.
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ ಆರೋಪ, ಜಾತಿ ನಿಂದನೆ ಹಾಗೂ ಅತ್ಯಾಚಾರ ಪ್ರಕರಣವನ್ನು ಶಾಸಕ ಮುನಿರತ್ನ ಎದುರಿಸುತ್ತಿದ್ದಾರೆ. ಈ ಪೈಕಿ ಅವರ ವಿರುದ್ಧದ ಅತ್ಯಾಚಾರ ಮತ್ತು ಹನಿಟ್ರ್ಯಾಪ್ ಯತ್ನದ ಆರೋಪ ಬಹಳ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಮುನಿರತ್ನ ನಾಯ್ಡು ಬಳಿ ಹಲವರ ಖಾಸಗಿ ಅಶ್ಲೀಲ ವಿಡಿಯೋಗಳಿವೆ. ಮುನಿರತ್ನ ಅನೇಕ ಮಂದಿಯ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಅವರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದರು. ರಾಜಕೀಯ ಎದುರಾಳಿಗಳನ್ನು ಮಣಿಸಲು ಅವುಗಳನ್ನು ಬಳಕೆ ಮಾಡುತ್ತಿದ್ದರು ಎಂದು ಸಂತ್ರಸ್ತೆ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪದಡಿ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 354(ಎ),354(ಸಿ), 376(2)(ಎನ್),308, 270,120ಬಿ,119,504,506,201,511, ರೆ/ವಿ 34 ಐಪಿಸಿ, ಕಲಂ 66ಇ, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕೇಸ್ ದಾಖಲಾಗಿತ್ತು.