ಕೊಪ್ಪಳ ಜಿಲ್ಲೆಯಲ್ಲಿ ಅತ್ಯಾಚಾರಕ್ಕೊಳಗಾದ ವಿದೇಶಿ ಮತ್ತು ಭಾರತೀಯ ಮಹಿಳೆಯರ ಹೆಸರನ್ನು ಭಾನುವಾರ (ಮಾ.9) ಬಹಿರಂಗಪಡಿಸಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸ್ವತಃ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲಂಘನೆ ಮಾಡಿದ್ದಾರೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಯಸ್ಕ ಮಹಿಳೆಯ ಗುರುತನ್ನು ಲಿಖಿತ ಅನುಮತಿಯಿಲ್ಲದೆ ಬಹಿರಂಗಪಡಿಸುವುದು ಭಾರತೀಯ ಕಾನೂನಿನಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಆದರೆ, ಅತ್ಯಾಚಾರಕ್ಕೊಳಗಾದ ವಿದೇಶಿ ಮತ್ತು ಭಾರತೀಯ ಮಹಿಳೆಯ ವಿವರವನ್ನು ಗೃಹ ಸಚಿವ ಪರಮೇಶ್ವರ್ ಅವರು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳುವ ಮೂಲಕ ಕಾನೂನು ನಿಯಮ ಉಲ್ಲಂಘಿಸಿ, ಅಸೂಕ್ಷ್ಮತೆ ಮೆರೆದಿದ್ದಾರೆ.
ಬೆಂಗಳೂರಿನಲ್ಲಿರುವ ತಮ್ಮ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುವಾಗ ಅತ್ಯಾಚಾರ ಅಪರಾಧದ ಬಗ್ಗೆ ಮಾತನಾಡುವಾಗ ಬದುಕುಳಿದವರ ಮತ್ತು ಅತ್ಯಾಚಾರಕ್ಕೆ ಒಳಗಾದವರ ಹೆಸರುಗಳನ್ನು ಉಲ್ಲೇಖಿಸಿ ಮಾತನಾಡಿ, “ಮಾರ್ಚ್ 6ರಂದು ನಾಲ್ವರು ತುಂಗಾಭದ್ರಾ ನದಿ ಸಮೀಪದ ಹೋಮ್ ಸ್ಟೇನಲ್ಲಿ ಉಳಿದುಕೊಂಡಿದ್ರು. ಇಬ್ಬರು ವಿದೇಶಿಯರು, ಇಬ್ಬರು ಭಾರತೀಯರಿದ್ದರು. ಊಟವಾದ ಮೇಲೆ ರಾತ್ರಿ ನಕ್ಷತ್ರ ವೀಕ್ಷಣೆಗೆ ತುಂಗಭದ್ರಾ ಎಡದಂಡೆ ನಾಲೆಯ ಬಳಿ ಹೋಗಿದ್ದಾರೆ. ಗಿಟಾರ್ ಬಾರಿಸಿಕೊಂಡು, ಗಾಯನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮೂವರು ವ್ಯಕ್ತಿಗಳು ಮೋಟಾರ್ ಬೈಕಿನಲ್ಲಿ ಅಲ್ಲಿಗೆ ಬಂದು, ಪೆಟ್ರೋಲ್ ಸಿಗುತ್ತಾ ಅಂತ ಕೇಳಿ ಬಳಿಕ ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ” ಎಂದು ಪರಮೇಶ್ವರ್ ತಿಳಿಸಿದ್ದರು.
“ಆರೋಪಿಗಳಾದ ಮಲ್ಲೇಶ್ ಮತ್ತು ಚೇತನಾ ಸಾಯಿರಾಮ್ ಎಂಬವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಮೂರನೇ ಆರೋಪಿ ಸಿಕ್ಕಿಲ್ಲ. ಶೋಧ ನಡೆಯುತ್ತಿದೆ. ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಓರ್ವ ಪ್ರವಾಸಿಗನ ಮೃತದೇಹ ಸಿಕ್ಕಿದೆ. ವಿದೇಶಿ ಪ್ರವಾಸಿಗರಿಗೆ ಚಿಕಿತ್ಸೆ, ನೆರವು, ಅವರ ದೇಶದ ರಾಯಭಾರ ಕಚೇರಿಗೆ ತಿಳಿಸುವ ಕೆಲಸವಾಗುತ್ತಿದೆ” ಎಂದು ಹೇಳಿದ್ದರು.
ಹೆಸರು ಹೇಳಲು ಇಚ್ಛಿಸಿದ ಸಿಐಡಿ ಹಿರಿಯ ಅಧಿಕಾರಿಯೊಬ್ಬರು ‘ಈ ದಿನ.ಕಾಂ‘ ಜೊತೆ ಮಾತನಾಡಿ, “ಅತ್ಯಾಚಾರ ಮತ್ತು ಪೋಕ್ಸೋ ವಿಚಾರದಂತಹ ಗಂಭೀರ ಪ್ರಕರಣಗಳಲ್ಲಿ ಸಂತ್ರಸ್ತರ ಹೆಸರನ್ನು ಬಹಿರಂಗಪಡಿಸವುದು ಅಪರಾಧವಾಗಿದೆ. ಪೋಕ್ಸೋ ಪ್ರಕರಣವಾಗಿದ್ದರಂತೂ ಸಂತ್ರಸ್ತೆಯ ಹೆಸರು ಬಿಡಿ ಅವರ ಊರು ಸಹ ಹೇಳುವಂತಿಲ್ಲ. ವಯಸ್ಕ ಮಹಿಳೆಯರಾಗಿದ್ದಾರೆ ಅವರ ಹೆಸರು ಮತ್ತು ಊರನ್ನು ಸಮಜಾದಲ್ಲಿ ಗೌಪ್ಯವಾಗಿ ಈಡಲಾಗುತ್ತದೆ. ಸುಪ್ರೀಂ ಕೋರ್ಟ್ ಸಹ ಈ ಬಗ್ಗೆ ಗಂಭೀರವಾಗಿಯೇ ಹೇಳಿದೆ” ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಮದನ್ ಲೋಕೂರ್ ಮತ್ತು ದೀಪಕ್ ಗುಪ್ತಾ ಅವರಿದ್ದ ದ್ವೀಸದಸ್ಯ ಪೀಠ 2018ರಲ್ಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ತೀರ್ಪು ನೀಡಿ, “ಅತ್ಯಾಚಾರಕ್ಕೆ ಒಳಗಾದ ವಯಸ್ಕ ಸಂತ್ರಸ್ತರ ಗುರುತನ್ನು ರಕ್ಷಿಸಬೇಕು. ಇದರಿಂದ ಸಮಾಜದಲ್ಲಿ ಅವರನ್ನು ದೂಷಿಸುವುದು ತಪ್ಪಲಿದೆ” ಎಂದು ನಿರ್ದೇಶಿಸಿದ್ದನ್ನು ಇಲ್ಲಿ ಗಮನಿಸಬಹುದು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪರೇಶ್ ಮೇಸ್ತಾ ಟು ಫರಂಗಿಪೇಟೆ- ಸಂಘಪರಿವಾರದ ಪಿತೂರಿ ಬಯಲು!
ಪ್ರವಾಸಿಗರಿಗೆ ಹೆಚ್ಚು ಸುರಕ್ಷತೆ ನೀಡಲು ಕ್ರಮ
“ಈ ದುರಂತ ಆಗಬಾರದಿತ್ತು. ಇಂಥದ್ದೆಲ್ಲಾ ನಡೆದಾಗ ಪ್ರವಾಸಿಗರು ಬರಲು ಹಿಂಜರಿಯುತ್ತಾರೆ. ಪ್ರವಾಸಿಗರಿಗೆ ಹೆಚ್ಚಿನ ಸುರಕ್ಷತೆ ನೀಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಆರೋಪಿಗಳಾದ ಮಲ್ಲೇಶ, ಚೇತನ್ ಗಂಗಾವತಿಯವರು. ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಮಾದಕ ವಸ್ತುಗಳ ಬಳಕೆ ಕಂಡುಬಂದಿಲ್ಲ. ನಕ್ಷತ್ರ ವೀಕ್ಷಣೆಗೆ ಯಾರಿಗೂ ಹೇಳದೇ ಪ್ರವಾಸಿಗರು ಹೋಗಿದ್ದಾರೆ. ಅದು ನಿರ್ಜನ ಪ್ರದೇಶವಾಗಿತ್ತು” ಎಂದು ವಿವರಿಸದ್ದರು.
ಮೂರನೇ ಆರೋಪಿ ಬಂಧನ: ಸಚಿವ ಶಿವರಾಜ ತಂಗಡಗಿ
“ಹಂಪಿ ಸಮೀಪ ಇತ್ತೀಚೆಗೆ ನಡೆದಿದ್ದ ವಿದೇಶಿ ಮಹಿಳೆ ಸೇರಿದಂತೆ ಇಬ್ಬರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಯನ್ನು ಬಂಧಿಸಲಾಗಿದೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಮಾರ್ಚ್ 6 ರಂದು ತುಂಗಭದ್ರ ಎಡದಂಡೆ ಕಾಲುವೆ ಬಳಿ ತಡರಾತ್ರಿಯವರೆಗೆ ಸಂಗೀತ ಕೇಳುತ್ತಾ ಕುಳಿತುಕೊಂಡಿದ್ದ ಇಸ್ರೇಲಿ ಮಹಿಳೆ ಮತ್ತು ಹೋಮ್ ಸ್ಟೇ ಮಾಲಕಿ ಮೇಲೆ 3 ಜನರು ಹಲ್ಲೆ ನಡೆಸಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅಲ್ಲದೆ ಈ ವೇಳೆ ಸ್ಥಳದಲ್ಲಿದ್ದ ಇತರೆ ಮೂರು ಪುರುಷರ ಮೇಲೂ ಹಲ್ಲೆ ಮಾಡಿ ಕಾಲುವೆಗೆ ತಳ್ಳಿದ್ದರು. ಈ ಪೈಕಿ ನಾಪತ್ತೆಯಾಗಿದ್ದ ಪ್ರವಾಸಿಯ ಶವ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಪತ್ತೆಯಾಗಿದೆ. ಮೃತನನ್ನು ಒರಿಸ್ಸಾ ಮೂಲದ ಬೀಬಾಷಾ ಎಂದು ಗುರುತಿಸಲಾಗಿದೆ” ಎಂದು ಹೇಳಿದರು.
“ಈ ಪೈಶಾಚಿಕ ಕೃತ್ಯದಲ್ಲಿ ಮೂವರು ವ್ಯಕ್ತಿಗಳು ಭಾಗಿಯಾಗಿದ್ದು, ಮಾರ್ಚ್ 8 ರಂದು ಇಬ್ಬರನ್ನು ಬಂಧಿಸಿದರೆ, ಮೂರನೇ ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಪ್ರವಾಸಿಗರಿಗೆ ಭದ್ರತೆ ಹೆಚ್ಚಿಸುವಂತೆ ಪೊಲೀಸರಿಗೆ ಸೂಚನೆ ನೀಡಿರುವೆ” ಎಂದು ಶಿವರಾಜ ತಂಗಡಗಿ ತಿಳಿಸಿದರು.