ಭೋವಿ ಜನಾಂಗಕ್ಕೆ ಸೇರಿದ ಯುವತಿ ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ ಯುವಕನನ್ನು ಪ್ರೀತಿಸಿದ್ದು, ಪ್ರೀತಿಸಿದವನ ಜೊತೆಯೇ ಮದುವೆ ಮಾಡಿದ್ದಕ್ಕೆ ಅಪ್ಪ-ಅಮ್ಮನಿಗೆ ಬಹಿಷ್ಕಾರ ಹಾಕಿದ್ದಾರೆ ಎನ್ನಲಾದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿಯ ಭೋವಿ ಕಾಲೋನಿಯಲ್ಲಿ ನಡೆದಿದೆ.
ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಭೋವಿ ಕಾಲೋನಿಯ ಜಯಮ್ಮ ಎಂಬುವರಿಗೆ ನಾಲ್ಕು ಜನ ಹೆಣ್ಣು ಮಕ್ಕಳು. ಓರ್ವ ಗಂಡು ಮಗ. ನಾಲ್ಕರಲ್ಲಿ ಮೂರು ಜನ ಹೆಣ್ಣು ಮಕ್ಕಳಿಗೆ ಭೋವಿ ಜನಾಂಗಕ್ಕೆ ಸೇರಿದ ಯುವಕರಿಗೆ ಕೊಟ್ಟು ಮದುವೆ ಮಾಡಿದ್ದರು. ಆದರೆ, ಕೊನೆಯ ಮಗಳನ್ನು ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ ಯುವಕನಿಗೆ, ಮನೆಯವರು ಎಲ್ಲರೂ ಒಪ್ಪಿ ಮದುವೆ ಮಾಡಿದ್ದರು.
ಆದರೆ, ಭೋವಿ ಜನಾಂಗದ ಹುಡುಗಿಯನ್ನು ಆದಿ ಕರ್ನಾಟಕದ ಯುವಕನಿಗೆ ಏಕೆ ಕೊಟ್ಟಿರಿ ಎಂದು ಕಳೆದೊಂದು ವರ್ಷದಿಂದ ಜಯಮ್ಮ ಕುಟುಂಬಕ್ಕೆ ಅದೇ ಭೋವಿ ಜನಾಂಗದವರು ಬಹಿಷ್ಕಾರ ಹಾಕಿದ್ದಾರೆ ಎನ್ನಲಾಗಿದೆ. ಮಗಳನ್ನು ಆದಿ ಕರ್ನಾಟಕದ ಜನಾಂಗದ ಯುವಕನಿಗೆ ಕೊಟ್ಟಿದ್ದಕ್ಕೆ ತಮ್ಮ ಜನಾಂಗದ ಜನ ನಮಗೇ ಬಹಿಷ್ಕಾರ ಹಾಕಿದ್ದಾರೆ ಎಂದು ನೊಂದ ಮಹಿಳೆ ಜಯಮ್ಮ ಜಿಲ್ಲಾಧಿಕಾರಿಗೆ ದೂರು ನೀಡಲು ಅರ್ಜಿ ಹಿಡಿದು ಅಲೆದಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಂತು ಬೇಸಿಗೆ, ತತ್ವಾರ ತಂತು ನೀರಿಗೆ, ಅನುಕೂಲ ಅವಕಾಶವಾದಿಗಳಿಗೆ!
ಇನ್ನು ಬಹಿಷ್ಕಾರ ಹಾಕಿರೋದು ಓರ್ವ ಶಿಕ್ಷಕನಂತೆ. ಅಲ್ಲದೆ, ಜಯಮ್ಮ ಅವರನ್ನು ಊರಿನ ಭೋವಿ ಜನಾಂಗದ ಜನ ಮಾತನಾಡಿಸುವುದನ್ನೇ ಬಿಟ್ಟಿದ್ದಾರೆ ಎನ್ನಲಾಗಿದೆ. ಜಯಮ್ಮ ಅವರನ್ನು ಯಾರು ಯಾವ ಕಾರ್ಯಕ್ರಮಕ್ಕೂ ಕರೆಯುವುದಿಲ್ಲ. ದೇವಸ್ಥಾನಕ್ಕೂ ಹೋಗುವಂತಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ.
ಇದೀಗ, ಭೀಮ್ ಆರ್ಮಿ ಸಂಘಟನೆ ಮಹಿಳೆಯ ನೆರವಿಗೆ ಬಂದಿದ್ದು, ಪ್ರೀತಿಸಿ ಮದುವೆಯಾಗುವುದು ತಪ್ಪೇನಲ್ಲ. ಯಾರು-ಯಾರನ್ನು ಬೇಕಾದರೂ ವಿವಾಹ ಆಗಬಹುದು. ಅದು ಅವರ ಸ್ವಾತಂತ್ರ್ಯ. ಆದರೆ, ಜಾತಿ ಬಣ್ಣ ಕಟ್ಟಿ ಈ ರೀತಿ ಬಹಿಷ್ಕಾರ ಹಾಕುವುದು ಸರಿಯಲ್ಲ. ಈ ಬಗ್ಗೆ ಎಸ್‌ಸಿ-ಎಸ್‌ಟಿ ದೌರ್ಜನ್ಯ ಸಭೆಯಲ್ಲಿ ಚರ್ಚಿಸಿ ಅವರಿಗೆ ಸೂಕ್ತ ನ್ಯಾಯ ಕೊಡಿಸುತ್ತೇವೆ. ಈ ಬಗ್ಗೆ ಊರಿನ ಜನರಿಗೂ ಮನವರಿಕೆ ಮಾಡೋದಾಗಿ ಭೀಮ್ ಆರ್ಮಿ ಸಂಘಟನೆ ಹೇಳಿದೆ.
