ರೇಣುಕಾಸ್ವಾಮಿ ಪ್ರಕರಣ ಸಂಬಂಧ ಜಾಮೀನು ರದ್ದಾದ ಹಿನ್ನೆಲೆ ಎ2 ಆರೋಪಿ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮೀ ಅಪಾರ್ಟ್ ಮೆಂಟ್‌ನಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೋವಾ ಕಾರಿನಲ್ಲಿ ಹಿಂದಿನ ಗೇಟ್ ನಿಂದ ನಿವಾಸಕ್ಕೆ ಬಂದ ಅವರಿಗೆ ಪೊಲೀಸರು, ಬಂಧನಕ ವಿಚಾರ ತಿಳಿಸಿ, ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಐವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.
ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ಅವರು ತಕ್ಷಣದಿಂದಲೇ ಬಂಧಿಸಿ ಜೈಲಿಗೆ ಹಾಕಬೇಕು ಎಂದು ಸುಪ್ರೀಂಕೋರ್ಟ್ ತೀರ್ಪುನಲ್ಲಿ ಹೇಳಿದೆ. ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲಾ, ಆರ್. ಮಹಾದೇವನ್ ಅವರ ಪೀಠ ಮಹತ್ವದ ಆದೇಶ ಹೊರಡಿಸಿದೆ. ದರ್ಶನ್, ಪವಿತ್ರಾ ಗೌಡ ಅವರನ್ನು ತಕ್ಷಣದಿಂದಲೇ ಜೈಲಿಗೆ ಹಾಕಬೇಕು ಎಂದು ತೀರ್ಪಿನಲ್ಲಿ ಹೇಳಿದೆ.
ತೀರ್ಪು ಹೊರಬರುತ್ತಿದ್ದಂತೆ ಮನೆಯಲ್ಲಿ ಪವಿತ್ರಾ ಗೌಡ ತಾಯಿ ಎದುರು ಬಿಕ್ಕಳಿಸಿ ಅತ್ತಿದ್ದಾರೆ. ಈ ವೇಳೆ ಮನೆ ಬಳಿ ಪೊಲೀಸರು ಬಂಧನಕ್ಕೆ ಕಾದು ನಿಂತಿದ್ದರು. ಮನೆಯ ಬಾಗಿಲು ತೆರೆದಂತೆ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ತೀರ್ಪು ಹೊರಬರುವ ಮುನ್ನ ಪವಿತ್ರಾ ಗೌಡ ದೇವರ ಮೊರೆ ಹೋಗಿದ್ದರು. ಜೊತೆಗೆ ಮನೆಯಲ್ಲಿ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಕೂಡ ಹಂಚಿಕೊಂಡಿದ್ದರು.
ನಟ ದರ್ಶನ್ ಎಲ್ಲಿದ್ದರು
ನಟ ದರ್ಶನ್‌ಗೆ ಪೊಲೀಸರ ಮುಂದೆ ಶರಣಾಗಲು ಒಂದು ದಿನದ ಅವಕಾಶ ನೀಡಲಾಗಿತ್ತು. ಆದರೆ ಈಗ ದರ್ಶನ್ ಬೆಂಗಳೂರಿನಲ್ಲಿ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿತ್ತು. ಮೂಲಗಳ ಪ್ರಕಾರ ನಟ ದರ್ಶನ್ ತಮಿಳುನಾಡಿನ ಪ್ರಖ್ಯಾತ ದೇವಸ್ಥಾನಕ್ಕೆ ತೆರಳಿದ್ದರು. ದರ್ಶನ್ ಬೆಂಗಳೂರಿಗೆ ವಾಪಸ್ ಅದ ಹಿನ್ನೆಲೆಯಲ್ಲಿ ಬಂಧನವಾಗಿದೆ.