“ಆದಿವಾಸಿಗಳಿಗೆ ಭೂಮಿಯನ್ನು ಮರಳಿಸುವುದೇ ನಿಜವಾದ ಪರಿಹಾರ. ಆ ನಿಟ್ಟಿನಲ್ಲಿ ವಿವಿಧ ದೇಶಗಳಲ್ಲಿ ಚರ್ಚೆಗಳಾಗುತ್ತಿವೆ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಸ್ವತಂತ್ರ ವಿಶೇಷ ತಜ್ಞರಾದ ಕೆ.ಪಿ.ಅಶ್ವಿನಿ ಹೇಳಿದರು.
ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಇಂಡಿಯನ್ ಸೋಶಿಯಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ’ಆದಿವಾಸಿ ಸಮುದಾಯಗಳು, ಸಂವಿಧಾನದ ಹಕ್ಕುಗಳು ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತ್ತು ನೀತಿಗಳ ಕುರಿತ ವಿಶೇಷ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.
ವರ್ಷದಲ್ಲಿ ಎರಡು ದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡುವುದು ನಮ್ಮ ಕೆಲಸವಾಗಿರುತ್ತದೆ. ಅಧಿಕೃತ ಪ್ರವಾಸದ ಭಾಗವಾಗಿ ಅಮೆರಿಕಕ್ಕೆ ಇತ್ತೀಚೆಗೆ ಹೋಗಿದ್ದೆ. ವರ್ಣಬೇಧ, ಜನಾಂಗೀಯ ಬೇಧದ ಬಗ್ಗೆ ಮಾಪನ ಮಾಡಿ, ಸರ್ಕಾರಗಳಿಗೆ ಶಿಫಾರಸ್ಸುಗಳನ್ನು ಕೊಡುತ್ತೇವೆ. ನಾಗರಿಕ ಗುಂಪುಗಳು, ಹೋರಾಟಗಾರರು ಮತ್ತು ಆದಿವಾಸಿಗಳ ಜೊತೆ ಚರ್ಚಿಸಿದೆ. ಆದಿವಾಸಿಗಳಿಗೆ ಪರಿಹಾರ ನೀಡುವ ಕುರಿತು ಅಮೆರಿಕ ಮತ್ತಿತ್ತರ ದೇಶಗಳಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ ಎಂದರು.
ಭಾರತ ಅಥವಾ ದಕ್ಷಿಣ ಏಷಿಯಾಗಳಲ್ಲಿ ಇಂತಹ ಪರಿಹಾರಗಳ ಬಗ್ಗೆ ಸರಿಯಾದ ಚರ್ಚೆಯೇ ಆಗುತ್ತಿಲ್ಲ. ಪರಿಹಾರವೆಂದರೆ ಹತ್ತು ಸಾವಿರ ರೂಪಾಯಿ ಕೊಟ್ಟು ಸುಮ್ಮನಿರುವುದಲ್ಲ. ಮುಟ್ಟುಗೋಲು ಹಾಕಿಕೊಂಡಿರುವ ಭೂಮಿಯನ್ನು ವಾಪಸ್ ಕೊಡಬೇಕು. ನಿಮಗೆ ಪಿಂಚಣಿ ಕೊಟ್ಟುಬಿಡುತ್ತೇವೆ ಎಂಬುದು ನಿಜವಾದ ಪರಿಹಾರವಲ್ಲ. ಮೈನಿಂಗ್‌ಗಾಗಿ ಕಬಳಿಸಿರುವ ಭೂಮಿಯನ್ನು ವಾಪಸ್ ಕೊಡುವುದೇ ಸರಿಯಾದ ಪರಿಹಾರವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಆದಿವಾಸಿಗಳ ವಿರುದ್ಧ ತಾರತಮ್ಯಗಳು ನಡೆಯುತ್ತಿವೆ ಎಂಬುದನ್ನು ಸಾಬೀತು ಮಾಡುವುದರಲ್ಲೇ ಸಮಯ ಹೊರಟು ಹೋಗುತ್ತಿದೆ. ಸವರ್ಣೀಯರು ಅಸಮಾನತೆ ಇದೆ ಎಂದು ಒಪ್ಪಲ್ಲ. ಮೂಲಭೂತ ಹಕ್ಕುಗಳಿವೆ ಎಂದು ವಾದ ಮಾಡುತ್ತಾರೆ ಎಂದರು.
ಸಾಮಾಜಿಕ ನ್ಯಾಯ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕರಾದ ಬಸವರಾಜ ಕೌತಾಳ್ ಮಾತನಾಡಿ, “ಸಂವಿಧಾನ ಪೂರ್ವ ಕಾಲಘಟ್ಟ ಹೇಗಿತ್ತು ಮತ್ತು ಸಂವಿಧಾನ ನಂತರ ನಮ್ಮ ಪರಿಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ಪುನರಾವಲೋಕನ ಮಾಡಬೇಕಿದೆ. ನಮಗೆ ಶಿಕ್ಷಣ, ಉದ್ಯೋಗ ಸಿಕ್ಕಿದೆ. ಗೌರವವಾಗಿ ಬದುಕಲು ಏನಾದರೂ ದೊರೆತಿದೆ ಎಂದರೆ ಅದಕ್ಕೆ ಸಂವಿಧಾನ ಕಾರಣ. ಸಂವಿಧಾನದಿಂದಾಗಿ ಹೊಸ ಹೊಸ ರೀತಿಯ ಕಾನೂನುಗಳು ಬಂದಿವೆ. ನಮ್ಮ ಇತಿಹಾಸ ಆರಂಭವಾಗಿರುವುದೇ ಸಂವಿಧಾನ ಬಂದ ನಂತರ” ಎಂದು ಅಭಿಪ್ರಾಯಪಟ್ಟರು.
ಹೊಸ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೇವೆ. ಈ ಹಿಂದಿನ ಸರ್ಕಾರ ನಮ್ಮ ವಿರುದ್ಧವಿತ್ತು. ಆದರೆ ಈ ಸರ್ಕಾರ ನಮ್ಮ ಪರವಾಗಿ ಕೆಲಸ ಮಾಡುತ್ತಾ, ನಮ್ಮ ಹಕ್ಕುಗಳನ್ನು ಕಾಪಾಡುತ್ತಾ ಎಂಬದನ್ನು ನೋಡಬೇಕಿದೆ ಎಂದು ಹೇಳಿದರು.
ದಿಡ್ಡಳ್ಳಿ ಚಳವಳಿಯ ಹೋರಾಟಗಾರ್ತಿ ಮುತ್ತಮ್ಮ ತಮ್ಮ ಹೋರಾಟದ ಕ್ಷಣಗಳನ್ನು ಹಂಚಿಕೊಂಡರು. ಈಗಲೂ ಆದಿವಾಸಿಗಳು ಎದುರಿಸುತ್ತಿರುವ ನೋವುಗಳನ್ನು ಬಿಚ್ಚಿಟ್ಟರು.
ಜೇಬುಕುರುಬ ಸಮುದಾಯದ ಶಿವು ಹಾಡು ಹಾಡಿದರು. ರಾಜ್ಯ ಮೂಲ ಆದಿವಾಸಿ ವೇದಿಕೆಯ ಅಧ್ಯಕ್ಷ ಕೆ.ಎನ್.ವಿಠಲ್, ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಬಿ.ಎಂ.ಯಶವಂತ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.