“ಕರ್ನಾಟಕವು ನೈಸರ್ಗಿಕ ಹಾಗೂ ಪಾರಂಪರಿಕ ಸಂಪತ್ತಿನಿಂದ ಶ್ರೀಮಂತವಾಗಿದೆ. ಹಂಪಿ, ಬೇಲೂರು, ಮಲೆನಾಡು, ಮೈಸೂರು, ಕರಾವಳಿ ಹಾಗೂ ಕೊಡಗಿನಂತಹ ಪ್ರವಾಸಿ ತಾಣಗಳನ್ನು ಮತ್ತಷ್ಟು ಆಕರ್ಷಕಗೊಳಿಸಲು ಮತ್ತು ಹೊಸ ತಾಣಗಳನ್ನು ಪರಿಚಯಿಸಲು ನಮ್ಮ ಸರ್ಕಾರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ ಮೆಜೆಸ್ಟಿಕ್ ಮತ್ತು ಕೆಂಗೇರಿ ರೈಲು ನಿಲ್ದಾಣಗಳಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಗೋಲ್ಡನ್ ಚಾರಿಯಟ್ ಮೂಲಕ ಜನರಿಗೆ ಕರ್ನಾಟಕದ ಪ್ರವಾಸಿ ತಾಣಗಳನ್ನು ಪರಿಚಯಿಸುವುದು ಹಾಗೂ ಉದ್ಯೋಗ ಸೃಷ್ಟಿಸುವುದು ನಮ್ಮ ಗುರಿಯಾಗಿದೆ. ಇದರಿಂದ ನಮಗೆ ಲಾಭದ ನಿರೀಕ್ಷೆಯಿಲ್ಲ, ಆದರೆ ನಷ್ಟವೂ ಆಗಬಾರದು. ನಷ್ಟವಾಗದಂತೆ ನೋಡಿಕೊಳ್ಳಲು ಎಲ್ಲರ ಸಹಕಾರ ಅಗತ್ಯ” ಎಂದರು.
ಗೋಲ್ಡನ್ ಚಾರಿಯಟ್ ಕರ್ನಾಟಕದ ಹೆಮ್ಮೆ:
“ಪ್ರವಾಸೋದ್ಯಮ ಇಲಾಖೆಯ ‘ಕರ್ನಾಟಕ ದರ್ಶನ’ ಯೋಜನೆ ಮಧ್ಯದಲ್ಲಿ ಸ್ಥಗಿತಗೊಂಡಿತ್ತು. ನಮ್ಮ ಸರ್ಕಾರ ಬಂದ ನಂತರ, ಸಚಿವ ಕೆ.ಜೆ. ಜಾರ್ಜ್ ಅವರ ಮುಂದಾಳತ್ವದಲ್ಲಿ ಈ ಯೋಜನೆಗೆ ಹೊಸ ರೂಪ ನೀಡಿ ‘ಗೋಲ್ಡನ್ ಚಾರಿಯಟ್’ ಅನ್ನು ಮರುಪ್ರಾರಂಭಿಸಲಾಗಿದೆ. ಹೊಸ ಪ್ರವಾಸಿ ಮಾರ್ಗಗಳನ್ನು ನಿಗದಿಪಡಿಸಿ ಐಷಾರಾಮಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಈಗಾಗಲೇ 75 ಮಂದಿ ಪ್ರಯಾಣಿಸುತ್ತಿದ್ದಾರೆ” ಎಂದು ವಿವರಿಸಿದರು.
”ರಾಜ್ಯವನ್ನು ಸಂಪೂರ್ಣವಾಗಿ ನೋಡದವರಿಗೆ ಪ್ರವಾಸ ಮಾಡಲು ಉತ್ತೇಜನ ನೀಡುವ ದೃಷ್ಟಿಯಿಂದ, ರಾಜ್ಯ ಸರ್ಕಾರ ವಿಶೇಷ ರೈಲ್ವೆ ಬೋಗಿಗಳನ್ನು ನಿರ್ಮಿಸಿ ರೈಲ್ವೆ ಇಲಾಖೆಯ ಮಾರ್ಗಗಳನ್ನು ಬಳಸಿಕೊಂಡು ಈ ಯೋಜನೆಗೆ ಮರುಚಾಲನೆ ನೀಡಿದೆ. ದಕ್ಷಿಣ ಭಾರತದ ತಾಣಗಳನ್ನು ಪರಿಚಯಿಸಲು ‘ಜ್ಯೂಯಲ್ಸ್ ಆಫ್ ಸೌತ್’ ಎಂಬ ಮತ್ತೊಂದು ಯೋಜನೆಯನ್ನು ರೂಪಿಸಲಾಗಿದೆ. ಇದು ಹಂಪಿ, ಮಹಾಬಲಿಪುರಂ, ಮೈಸೂರು, ಬೆಂಗಳೂರು, ಕೊಚ್ಚಿ ಹಾಗೂ ಚೆಟ್ಟಿನಾಡು ಸಂಪರ್ಕಿಸುವ ಮಾರ್ಗವನ್ನು ಒಳಗೊಂಡಿದೆ. ನಾಲ್ಕು ದಿನಗಳ ‘ಡ್ರೀಮ್ಸ್ ಆಫ್ ಕರ್ನಾಟಕ’ ಪ್ರವಾಸಿ ಯೋಜನೆಯೂ ಸಿದ್ಧವಾಗಿದ್ದು, ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು” ಎಂದು ತಿಳಿಸಿದರು.
”ದೇಶದಲ್ಲಿ ಪ್ರವಾಸಕ್ಕಾಗಿ ಕೇವಲ 4 ವಿಶೇಷ ರೈಲುಗಳಿವೆ. ಐಷಾರಾಮಿ ಸೌಲಭ್ಯಗಳಿರುವ ಎರಡು ರೈಲುಗಳು ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಮಾತ್ರ ಇವೆ. ಇತ್ತೀಚೆಗೆ ನಡೆದ ಮೈಸೂರು ದಸರಾಕ್ಕೆ ದೇಶ-ವಿದೇಶಗಳಿಂದ ಪ್ರವಾಸಿಗರು ಮತ್ತು ರಾಯಭಾರಿಗಳು ಆಗಮಿಸಿದ್ದರು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಪ್ರವಾಸಿ ತಾಣಗಳಿಗೆ ಹೊಸ ರೂಪ ನೀಡಲು ಸರ್ಕಾರ ಹಲವು ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ” ಎಂದು ಹೇಳಿದರು.
ಜನಸಾಮಾನ್ಯರಿಗೂ ಕೈಗೆಟುಕಲಿ:
“ಐಷಾರಾಮಿ ರೈಲು ಪ್ರಯಾಣ ಕೇವಲ ಶ್ರೀಮಂತರಿಗೆ ಸೀಮಿತವಾಗಬಾರದು. ರಾಜ್ಯದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಸೌಂದರ್ಯವನ್ನು ಆನಂದಿಸಲು ಸಾಮಾನ್ಯ ಪ್ರವಾಸಿಗರಿಗೂ ಅವಕಾಶ ಸಿಗಬೇಕು. ಈ ಉದ್ದೇಶದಿಂದ ‘ಆಫ್ ಸೀಸನ್’ನಲ್ಲಿ ಕಡಿಮೆ ದರದಲ್ಲಿ ಪ್ರವಾಸಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ” ಎಂದು ಸಿಎಂ ತಿಳಿಸಿದರು.
ಐಷಾರಾಮಿ ಅನುಭವ ಎಲ್ಲರಿಗೂ ಸಿಗಲಿ:
“ಗೋಲ್ಡನ್ ಚಾರಿಯಟ್‌ನಲ್ಲಿ ಎರಡು ರೆಸ್ಟೋರೆಂಟ್‌ಗಳಿದ್ದು, 80 ಪ್ರಯಾಣಿಕರಿಗೆ ವ್ಯವಸ್ಥೆ ಇದೆ. ಇವರ ಸೇವೆಗೆ 60 ಸಿಬ್ಬಂದಿ ಇದ್ದಾರೆ. ಸ್ಪಾ, ಜಿಮ್, ಸಸ್ಯಹಾರಿ ಮತ್ತು ಮಾಂಸಾಹಾರಿ ಊಟ ಹಾಗೂ ಸುಸಜ್ಜಿತ ತಂಗುದಾಣದ ಸೌಲಭ್ಯಗಳಿವೆ. ನನಗೂ ಈ ರೈಲಿನಲ್ಲಿ ಪ್ರವಾಸ ಮಾಡುವ ಆಸೆ ಇದೆ. ಹಿಂದೆ ಸಮರ್ಪಕವಾಗಿ ಬಳಸಿಕೊಳ್ಳಲಾಗದಿದ್ದ ಈ ರೈಲಿಗೆ ಈಗ ಮರುಚಾಲನೆ ನೀಡಲಾಗಿದ್ದು, ಇದು ರಾಜ್ಯದ ಪ್ರವಾಸೋದ್ಯಮದ ಅಮೂಲ್ಯ ಆಸ್ತಿಯಾಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊರಗಿನವರಿಗಷ್ಟೇ ಅಲ್ಲ, ನಮ್ಮವರಿಗೂ ಇರಲಿ:
“ಐಷಾರಾಮಿ ರೈಲಾಗಿರುವುದರಿಂದ ಪ್ರಯಾಣದ ವೆಚ್ಚ ತುಸು ಹೆಚ್ಚಿದೆ. ಆದರೆ, ಕರ್ನಾಟಕದ ಪ್ರವಾಸಿಗರು ಇದರಿಂದ ವಂಚಿತರಾಗಬಾರದು. ಕಡಿಮೆ ದರದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಮೂಲಕ ಹೆಚ್ಚಿನ ಜನರನ್ನು ಆಕರ್ಷಿಸುವುದು ಸರ್ಕಾರದ ಉದ್ದೇಶ. ಈ ಕುರಿತು ರೈಲ್ವೆ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗಿದೆ” ಎಂದು ತಿಳಿಸಿದರು.
ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ:
“ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಭಾರತೀಯ ರೈಲ್ವೆ ಮತ್ತು ಐಆರ್‌ಸಿಟಿಸಿ ಸಹಯೋಗದಲ್ಲಿ ಗೋಲ್ಡನ್ ಚಾರಿಯಟ್ ಸೇವೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗುವುದರ ಜೊತೆಗೆ ಹೋಟೆಲ್ ಉದ್ಯಮ ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ” ಎಂದು ಮುಖ್ಯಮಂತ್ರಿಗಳು ಹೇಳಿದರು.
ಸಾಮಾನ್ಯ ರೈಲು ಸಂಚಾರಕ್ಕೆ ಧಕ್ಕೆಯಾಗದಂತೆ ಮಾರ್ಗ ವಿಸ್ತರಣೆ:
ಗೋಲ್ಡನ್ ಚಾರಿಯಟ್ ರೈಲಿನ ಮಾರ್ಗ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಸಾಮಾನ್ಯ ರೈಲುಗಳ ಸಂಚಾರಕ್ಕೆ ತೊಂದರೆಯಾಗದಂತೆ ಮಾರ್ಗವನ್ನು ಅಂತಿಮಗೊಳಿಸಲಾಗುವುದು” ಎಂದರು.
ಯಾತ್ರಿಕರಿಗೆ ಶುಭ ಹಾರೈಕೆ:
“ಗೋಲ್ಡನ್ ಚಾರಿಯಟ್ ಕರ್ನಾಟಕದ ಹೆಮ್ಮೆ. ಇದಕ್ಕೆ ಸಹಕರಿಸಿದ ರೈಲ್ವೆ ಅಧಿಕಾರಿಗಳಿಗೆ ಧನ್ಯವಾದಗಳು. ಈ ರೈಲಿನಲ್ಲಿ ಪ್ರಯಾಣಿಸುತ್ತಿರುವ ಎಲ್ಲರಿಗೂ ಶುಭವಾಗಲಿ” ಎಂದು ಸಿಎಂ ಹಾರೈಸಿದರು.
ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ಆಹ್ವಾನಿಸಿಲ್ಲವೇ ಎಂಬ ಪ್ರಶ್ನೆಗೆ, “ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಸೋಮಣ್ಣ ಅವರು ವಿಡಿಯೋ ಸಂವಾದದ ಮೂಲಕ ಭಾಗವಹಿಸಲಿದ್ದಾರೆ” ಎಂದು ಸ್ಪಷ್ಟಪಡಿಸಿದರು.
ಸೌದಿ ಅರೇಬಿಯಾ ಬಿಕ್ಕಟ್ಟು: ಕನ್ನಡಿಗರಿಗಾಗಿ ಸಹಾಯವಾಣಿ:
ಮೆಕ್ಕಾ ಮತ್ತು ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕನ್ನಡಿಗರ ಕುರಿತು ಪ್ರತಿಕ್ರಿಯಿಸಿದ ಸಿಎಂ, “ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ವಿದೇಶಾಂಗ ಸಚಿವರ ಸಂಪರ್ಕದಲ್ಲಿದ್ದೇನೆ. ಅಗತ್ಯವಿದ್ದರೆ ವಿಮಾನ ಸಂಪರ್ಕ ಭದ್ರತೆ ಒದಗಿಸುವಂತೆ ಕೋರಲಾಗಿದೆ. ತಾಂತ್ರಿಕ ತೊಂದರೆಯಿಂದ ವಿಮಾನ ಹಾರಾಟಕ್ಕೆ ಅಡಚಣೆಯಾಗಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ಆದರೆ ನಮ್ಮ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಕನ್ನಡಿಗರಿಗಾಗಿ ಸಹಾಯವಾಣಿ ತೆರೆಯಲಾಗಿದೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ನಿಮ್ಮ ಜೊತೆಗಿದೆ” ಎಂದು ಅಭಯ ನೀಡಿದರು.





