ರಾಜ್ಯದಲ್ಲಿ ಹಿಂಗಾರು ಮತ್ತು ತಮಿಳುನಾಡು ಕರಾವಳಿಯಲ್ಲಾಗಿರುವ ಹವಾಮಾನ ಬದಲಾವಣೆಯ ಪ್ರಭಾವದಿಂದಾಗಿ ಮುಂದಿನ 5 ದಿನಗಳ ಕಾಲ (ಅಕ್ಟೋಬರ್ 27-28ರವರೆಗೆ) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ರಾಜ್ಯದ ಒಟ್ಟು 12 ಜಿಲ್ಲೆಗಳಲ್ಲಿ ಹಗುರದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಪ್ರಭಾವ ಹೆಚ್ಚಿರಲಿದ್ದು, ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರಿಯಲಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 3ರಿಂದ 5 ದಿನಗಳ ಕಾಲ ಸಾಧಾರಣದಿಂದ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಎರಡು ದಿನ ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ (ಗಂಟೆಗೆ 30-40 ಕಿ.ಮೀ ವೇಗ) ಮಳೆಯಾಗುವ ಸಾಧ್ಯತೆಯಿದೆ. ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.
ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಬಹುದಾಗಿದ್ದು, ಉಳಿದ ಜಿಲ್ಲೆಗಳಾದ (ಬಾಗಲಕೋಟೆ, ಕಲಬುರಗಿ, ವಿಜಯಪುರ, ರಾಯಚೂರು, ಯಾದಗಿರಿ) ಭಾಗಗಳಲ್ಲಿ ಮುಖ್ಯವಾಗಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಮಳೆ ಮತ್ತು ಸಿಡಿಲು ಬೀಳುವ ಸಂದರ್ಭದಲ್ಲಿ ಸಾರ್ವಜನಿಕರು, ರೈತರು ಸುಕ್ಷೇಮ ಸ್ಥಳಗಳಲ್ಲಿರಲು ಹಾಗೂ ವಿದ್ಯುತ್ ಕಂಬಗಳು ಅಥವಾ ಮರಗಳ ಕೆಳಗೆ ನಿಲ್ಲದಂತೆ ಹವಾಮಾನ ಇಲಾಖೆ ಸೂಚಿಸಿದೆ.





