"ದಲಿತ, ಆದಿವಾಸಿ ವಿದ್ಯಾರ್ಥಿಗಳ ಮೇಲೆ ವಿವಿಗಳಲ್ಲಿ ಆಗುತ್ತಿರುವ ಕಿರುಕುಳಗಳನ್ನು ತಡೆಗಟ್ಟಿ, ಸಾಂಸ್ಥಿಕ ಹತ್ಯೆಗಳನ್ನು ನಿಲ್ಲಿಸಬೇಕಾದರೆ ರೋಹಿತ್ ಕಾಯ್ದೆ ಜಾರಿಯಾಗಬೇಕು"
“ಬಿಜೆಪಿಯ ಕಾರಣದಿಂದಾಗಿ ನನ್ನ ಮಗ ರೋಹಿತ್ ವೇಮುಲಾನಿಗೆ ನ್ಯಾಯ ಸಿಗಲಿಲ್ಲ” ಎಂದು ರೋಹಿತ್ ತಾಯಿ ರಾಧಿಕಾ ವೇಮುಲಾ ಸಂಕಟ ವ್ಯಕ್ತಪಡಿಸಿದರು.
ದಲಿತ, ಆದಿವಾಸಿ ಸಮುದಾಯದ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಗಳಲ್ಲಿ ಎದುರಿಸುತ್ತಿರುವ ಜಾತಿ ತಾರತಮ್ಯ ಮತ್ತು ಇನ್ನಿತರೆ ಸಮಸ್ಯೆಗಳನ್ನು ಪರಿಹರಿಸಲು ‘ರೋಹಿತ್ ಕಾಯ್ದೆ’ ಜಾರಿಗೆ ತರಬೇಕು ಎಂದು ಆಗ್ರಹಿಸಿ, ವಿವಿಧ ಜನಪರ ಸಂಘಟನೆಗಳು ಭಾಗಿಯಾಗಿ ಭಾನುವಾರ ಬೆಂಗಳೂರಿನ ಸಂತ ಜೋಸೆಫ್ ಕಾನೂನು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಸಮಾಲೋಚನಾ ಸಭೆ’ಯಲ್ಲಿ ಅವರು ಮಾತನಾಡಿದರು.
ಭಾಷಣದ ಉದ್ದಕ್ಕೂ ತಮ್ಮ ಮಗನ ಬದುಕನ್ನು ನೆನೆದ ತಾಯಿ ರಾಧಿಕಾ, ಗದ್ಗದಿತರಾಗುತ್ತಾ ಕಣ್ಣೀರು ಹಾಕಿದರು. ಸೆರಗಿನಲ್ಲಿ ಕಣ್ಣೀರು ವರಸೆಕೊಳ್ಳುತ್ತಲೇ ಮಾತು ಮುಂದುವರಿಸಿ, ತಾವು ಎದುರಿಸಿದ ಸಂಕಷ್ಟಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
“ರೋಹಿತ್ ವೇಮುಲಾ ದಲಿತನೇ ಅಲ್ಲ ಎಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸಿತು. ಗುಂಟೂರು ಸ್ಥಳೀಯ ಅಧಿಕಾರಿಗಳು ಸುಖಾಸುಮ್ಮನೆ ತನಿಖೆಗೆ ಕರೆದು ನಮ್ಮ ಸಮಯ ವ್ಯರ್ಥ ಮಾಡುತ್ತಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೂ ಸುಮ್ಮನೆ ಕೂರಿಸಿಕೊಂಡಿರುತ್ತಿದ್ದರು” ಎಂದು ಹೇಳಿದರು.
ರೋಹಿತ್ ಕುಟುಂಬ ಬದುಕಿನುದ್ದಕ್ಕೂ ಎದುರಿಸಿದ ಸವಾಲು ಒಂದು ಕಡೆಯಾದರೆ, ಆತನ ಸಾಂಸ್ಥಿಕ ಕೊಲೆಯ ಬಳಿಕ ಕುಟುಂಬಕ್ಕೆ ಎದುರಾದ ಅಧಿಕಾರಶಾಹಿಯ ಕಿರುಕುಳ ಭೀಕರವಾದದ್ದು ಎಂಬುದನ್ನು ರಾಧಿಕಾ ಮೇಮುಲಾ ಅವರು ಮಾತುಗಳು ವ್ಯಕ್ತಪಡಿಸಿದವು.
“ಎರಡು ಮಕ್ಕಳ ತಾಯಿಯಾಗಿರುವ ನನ್ನ ಮಗಳು ನೀಲಿಮಾ ಒಮ್ಮೆ ನನ್ನೊಂದಿಗೆ ಬಂದಿದ್ದಳು. ತನಿಖಾ ಅಧಿಕಾರಿಗಳು ನಮಗೆ ಒಂದು ತುತ್ತು ಅನ್ನವನ್ನೂ ನೀಡದೆ ಹಸಿವಿನಿಂದ ಬಳಲಿಸಿದ್ದರು. ಎಂಆರ್‌ಒ ಆಗಿದ್ದ ಮಹೇಶ್ ಎಂಬಾತ ನನ್ನ ಮಗನಾದ ರಾಜಾನಿಗೆ ಥಳಿಸಿದ್ದ. ನೀವು ಹೇಗೆ ಎಸ್‌ಸಿ ಸರ್ಟಿಫಿಕೇಟ್ ಪಡೆದಿದ್ದೀರಿ ಎಂದು ಹೊಡೆದಿದ್ದ. ತನಿಖೆಗೆ ಬರುತ್ತಿದ್ದ ಅಧಿಕಾರಿಗಳು ನೋವುಂಟು ಮಾಡುವ ಪ್ರಶ್ನೆಗಳನ್ನು ಕೇಳಿ ಹಿಂಸೆ ನೀಡುತ್ತಿದ್ದರು” ಎಂದು ಸಂಕಟ ತೋಡಿಕೊಂಡರು.
ಇದನ್ನೂ ಓದಿರಿ: ಅಮಿತ್ ಶಾ ಹೇಳಿಕೆ ಖಂಡಿಸಿ ಜ. 23ರಂದು ಬೃಹತ್ ಪ್ರತಿಭಟನೆ: ದಸಂಸ
ರೋಹಿತ್ ವೇಮುಲಾನ ಬಾಲ್ಯವನ್ನು ಮೆಲುಕು ಹಾಕಿದ ಅವರು, “ರಾಜಾ, ರೋಹಿತ್ ಮತ್ತು ನೀಲಿಮಾ ನನ್ನ ಮೂವರು ಮಕ್ಕಳು. ರೋಹಿತ್ ಬಾಲ್ಯದಿಂದಲೂ ಚುರುಕಾಗಿದ್ದನು. ಚೆನ್ನಾಗಿ ಓದುತ್ತಿದ್ದನು. ಶಾಲೆಯಿಂದ ಮನೆಗೆ ಬಂದ ಬಳಿಕ ಯಾರ ಸಹಾಯವೂ ಇಲ್ಲದೆ ಹೋಮ್ ವರ್ಕ್ ಮುಗಿಸಿಯೇ ಊಟಕ್ಕೆ ಕೂರುತ್ತಿದ್ದನು” ಎಂದು ಮಗನ ಓದಿನ ಆಸಕ್ತಿಯನ್ನು ನೆನಪಿಸಿಕೊಂಡರು.
“ಕಾಲೇಜು ದಿನಗಳಲ್ಲೂ ಅಷ್ಟೇ. ಯಾರ ಮೇಲಾದರೂ ಕೋಪ ಮಾಡಿಕೊಂಡವಲ್ಲ, ಯಾರೊಂದಿಗೂ ಜಗಳ ಆಡಿದವನಲ್ಲ. ಆತ ಒಂದು ದಿನ ಹೀಗೆ ಸಾಯುತ್ತಾನೆ ಎಂದು ಕಲ್ಪನೆಯೂ ಇರಲಿಲ್ಲ” ಎಂದು ಕಣ್ಣೀರು ಹಾಕಿದರು.
“ಆತ ಕಾಲೇಜು ಬಿಟ್ಟು, ಬೇರೆ ಏನಾದರೂ ಬಿಸಿನೆಸ್ ಮಾಡಿ ದುಡಿಯಬೇಕೆಂದು ಯೋಚಿಸಿದ್ದ. ಆದರೆ ಚೆನ್ನಾಗಿ ಓದಿ, ಒಂದು ಒಳ್ಳೆಯ ಉದ್ಯೋಗ ಪಡೆದುಕೋ ಎಂದಿದ್ದೆ. ಆತ ಮೂರು ವಿಶ್ವವಿದ್ಯಾನಿಲಯಗಳಿಗೆ ಪ್ರವೇಶಾತಿಯ ಅರ್ಹತೆ ಪಡೆದಿದ್ದ. ಒಂದು ದೆಹಲಿ ವಿವಿ, ಇನ್ನೊಂದು ಕೇರಳಾ ವಿವಿ, ಮೂರನೆಯದು ಹೈದ್ರಾಬಾದ್ ಯೂನಿವರ್ಸಿಟಿ. ಕೇರಳಾ ವಿವಿಗೆ ಸೇರಬೇಕೆಂಬುದು ನನ್ನ ಸಲಹೆಯಾಗಿತ್ತು. ಆದರೆ ಇದಕ್ಕಿಂತ ಹೈದ್ರಾಬಾದ್ ವಿವಿ ತುಂಬಾ ಚೆನ್ನಾಗಿದೆ ಎಂದು ಆತ ಹೇಳಿದ್ದ. ಜೆಆರ್‌ಎಫ್ ಪೂರ್ಣಗೊಳಿಸಿದ್ದರಿಂದ ಮಾಸಿಕವಾಗಿ 25 ಸಾವಿರ ವಿದ್ಯಾರ್ಥಿವೇತನ ಸಂಶೋಧನೆಗೆ ದೊರಕುತ್ತದೆ ಎಂದು ಪಿಎಚ್‌ಡಿಗೆ ಸೇರಿಕೊಂಡ. ಸಿಂಗಾಪುರದಲ್ಲಿ ಪಿಎಚ್‌ಡಿ ಮಾಡಲು ಅವಕಾಶವಿತ್ತು. ಆದರೆ ಆತ ಹೈದ್ರಾಬಾದ್ ವಿವಿಯಲ್ಲೇ ಓದಲು ಬಯಸಿದ” ಎಂದರು.
“ಆತನ ಬಳಿ ಹಣವಿಲ್ಲದಿದ್ದಾಗ ಪ್ರತಿ ತಿಂಗಳು ಕಷ್ಟಪಟ್ಟು ಖರ್ಚಿಗೆ ಹಣ ಕಳುಹಿಸುತ್ತಿದೆ. ಟೈಲರಿಂಗ್ ಕೆಲಸ ಮಾಡುತ್ತಿದ್ದೆ. ತಮ್ಮೆಲ್ಲ ಕಷ್ಟಗಳನ್ನು ರೋಹಿತ್ ನಿವಾರಿಸುತ್ತಾನೆ ಎಂಬ ಭರವಸೆ ಇತ್ತು. ಆದರೆ ಇಂದು ಆತನಿಲ್ಲ. ವಿದ್ಯಾರ್ಥಿವೇತನ ಸಿಗದೆ ಆತ ಬಿಕ್ಕಟ್ಟು ಎದುರಿಸಿದ” ಎಂದು ಮಗನ ಸಾವಿನ ದಿನಗಳನ್ನು ನೆನಪಿಸಿಕೊಂಡರು.
“ದಲಿತ ವಿದ್ಯಾರ್ಥಿ ವೇತನ ತಡೆದು, ಅವರ ಓದಿಗೆ ಮಾರಕವಾಗುತ್ತಿದ್ದಾರೆ. ಶಿಕ್ಷಣವೇ ಇದಕ್ಕೆಲ್ಲ ಉತ್ತರವಾಗಬೇಕು” ಎಂದು ವಿನಂತಿಸಿದರು.
ವೇಮುಲಾ ಕಾಯ್ದೆಯ ಅಗತ್ಯತೆ ವಿವರಿಸಿದ ರೋಹಿತ್ ಸಹಪಾಠಿ ಪ್ರಶಾಂತ್
ರೋಹಿತ್ ವೇಮುಲಾನ ಸಹಪಾಠಿ ದೊಂಥ ಪ್ರಶಾಂತ್ ಮಾತನಾಡಿ, “ರೋಹಿತ್ ಸಾಂಸ್ಥಿಕ ಕೊಲೆಯಾದ ಬಳಿಕ ರೋಹಿತ್ ಕಾಯ್ದೆಗೆ ಆಗ್ರಹ ಕೇಳಿ ಬಂದಿತು. ದಲಿತ ವಿದ್ಯಾರ್ಥಿಗಳು ತರಗತಿ ಕೊಠಡಿಗಳಲ್ಲಿ ನಿಂದನಾತ್ಮಕ ಮಾತುಗಳನ್ನು ಕೇಳುತ್ತಿದ್ದಾರೆ. ಕ್ಯಾಂಪಸ್‌ಗಳು ಎಲ್ಲರೂ ಒಟ್ಟಿಗೆ ಸೇರುವಂತಹ ಸ್ಥಿತಿಯಲ್ಲಿ ಇಲ್ಲ. ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಮೇಲಿರುವವರು ಹೆಚ್ಚಿನ ನೇಮಕವಾಗುತ್ತಿದ್ದಾರೆ. ದಲಿತ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ಗಾಗಿ ಒದ್ದಾಡುವಂತಾಗಿದೆ. ಮೀಸಲಾತಿ ಇದ್ದರೂ ಬಲಾಢ್ಯ ಜಾತಿಯ ಪರ ಹಿತಾಸಕ್ತಿ ಇದ್ದರೆ ಮಾತ್ರ ಆಯ್ಕೆಗಳಾಗುತ್ತಾರೆ. ಶೋಷಿತ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿಯುವುದನ್ನು ತಡೆಯುವುದಕ್ಕಾಗಿ, ಸಮಾನ ಶಿಕ್ಷಣಕ್ಕಾಗಿ ಈ ಕಾಯ್ದೆ ಬೇಕಾಗಿದೆ” ಎಂದು ಆಗ್ರಹಿಸಿದರು.

“ಶ್ರೇಣಿಕೃತ ವ್ಯವಸ್ಥೆಯನ್ನು ಎತ್ತಿ ಹಿಡಿಯುವಂತೆ ವಿಶ್ವವಿದ್ಯಾನಿಲಯಗಳು ಇವೆ. ಶೋಷಿತ ಸಮುದಾಯಗಳಿಗೆ ಸಮಸ್ಯಾತ್ಮಕವಾಗಿದೆ. ಸ್ಕಾಲರ್‌ಶಿಪ್ ಕೊಡದೆ ಇರುವುದು, ಪೀಸ್ ಕಟ್ಟಿಲ್ಲ ಎನ್ನುವುದು, ಮೀಸಲಾತಿಯನ್ನು ಹಂಗಿಸುವುದು- ಇಂತಹ ತಾರತಮ್ಯ ದಿನೇ ದಿನೇ ಹೆಚ್ಚುತ್ತಿವೆ. ಇಂಗ್ಲಿಷ್ ಭಾಷೆಯ ಕಲಿಕೆ ಬೇಕಾದರೆ ವಿವಿಗಳು ಸಹಕಾರ ನೀಡುವುದಿಲ್ಲ. ಪ್ರಬಲವಾಗಿರುವವರ ಮಾತು ಕೇಳದಿದ್ದರೆ ದಲಿತ ವಿದ್ಯಾರ್ಥಿಗಳ ದಮನ ಮಾಡುತ್ತಾರೆ” ಎಂದು ಕಳವಳ ವ್ಯಕ್ತಪಡಿಸಿದರು.
ಬರಹಗಾರರಾದ ವಿಕಾಸ್ ಆರ್. ಮೌರ್ಯ ಅವರು ಅಂಕಿ-ಅಂಶಗಳ ಸಹಿತ ದಲಿತ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ವಿವರಿಸಿದರು. ಆಲ್ ಇಂಡಿಯಾ ವಿಧ್ಯಾರ್ಥಿ ಸಂಘಟನೆಯ ಲೇಖಾ ಅಡವಿ ರೋಹಿತ್ ಆಕ್ಟ್ ಅಗತ್ಯತೆಯ ಕುರಿತು ವಿಸ್ತೃತವಾಗಿ ಮಾತನಾಡಿದರು. ಹಿರಿಯ ದಲಿತ ಹೋರಾಟಗಾರ ಮಾವಳ್ಳಿ ಶಂಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವ ರಂಗಕರ್ಮಿ ಕೆ.ಪಿ.ಲಕ್ಷ್ಮಣ್ ಅವರು ರೋಹಿತ್ ವೇಮುಲಾ ಬರೆದ ಡೆತ್ ನೋಟ್ ಓದಿದರು. ಕರ್ನಾಟಕ ವಿದ್ಯಾರ್ಥಿ ಸಂಘದ (ಕೆವಿಎಸ್) ಗುರು ಬಸವ ಅವರು ಪ್ರತಿರೋಧದ ಗೀತೆಗಳನ್ನು ಹಾಡಿದರು. ಪರ್ಯಾಯ ಕಾನೂನು ವೇದಿಕೆಯ ವಿನಯ್ ಶ್ರೀನಿವಾಸ್, ಚಿಂತಕರಾದ ಶಿವಸುಂದರ್, ಬಿ.ಶ್ರೀಪಾದ ಭಟ್, ಹುಲಿಕುಂಟೆ ಮೂರ್ತಿ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
