ಬೆಂಗಳೂರಿನ ಗಾಲ್ಫ್ ಮೈದಾನ ರಸ್ತೆಯಲ್ಲಿರುವ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಸರ್ಕಾರಿ ನಿವಾಸಕ್ಕೆ ಮಂಗಳವಾರ ರೂಪೇಶ್ ರಾಜಣ್ಣ ಮತ್ತು ತಂಡ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದವೂ ನಡೆಯಿತು.
ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರು ರೂಪೇಶ್ ರಾಜಣ್ಣ ವಿರುದ್ದ ಬ್ಲ್ಯಾಕ್ ಮೇಲ್ ಆರೋಪ ಮಾಡಿದ್ದರು. ಇದಕ್ಕಾಗಿ ಸರ್ಫರಾಜ್ ಖಾನ್ ವಿರುದ್ದ ಜಮೀರ್ ಮನೆ ಮುಂದೆ ಪ್ರತಿಭಟನೆಗೆ ರೂಪೇಶ್ ರಾಜಣ್ಣ ಮುಂದಾಗಿದ್ದರು.
ಪ್ರತಿಭಟನೆ ವೇಳೆ ಸ್ಥಳದಲ್ಲಿದ್ದ ಪೊಲೀಸರು ರೂಪೇಶ್ ರಾಜಣ್ಣ ಅವರನ್ನು ತಡೆದರು. ಅಲ್ಲದೆ, ರೂಪೇಶ್ ರಾಜಣ್ಣ ಸೇರಿ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.
“ಸರ್ಫರಾಜ್ ಖಾನ್ ಅವರು ನನ್ನ ಮೇಲಿನ ಸುಳ್ಳು ಆರೋಪ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಸತ್ಯ ತಿಳಿಸದೆ ನಾ ಹಿಂದೆ ಸರಿಯೋಲ್ಲ. ನೀವು ಹೇಳಿರೋದು ಸತ್ಯ ಅಂತ ದಾಖಲೆ ಸಮೇತ ನಿರೂಪಿಸಿ. ನಾಳೆ ನಿಮ್ಮ ಕಚೇರಿಗೆ ಬರುತ್ತಿರುವೆ ದಯವಿಟ್ಟು ಅಲ್ಲಿಯೇ ಇರಿ” ಎಂದು ಪ್ರತಿಭಟನೆಗೂ ಮೊದಲು ತಮ್ಮ ಫೇಸ್ ಬುಕ್ ಖಾತೆಯಲ್ಲಿ ರೂಪೇಶ್ ರಾಜಣ್ಣ ಬರೆದುಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | 1180 ದಿನಗಳ ಚನ್ನರಾಯಪಟ್ಟಣ ಚಳವಳಿಗೆ ಸರ್ಕಾರ ಸ್ಪಂದಿಸಲಿ
ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಅವರು ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರ ಜೊತೆಗೆ ಫೋನ್‌ನಲ್ಲಿ ನಡೆಸಿದ್ದ ಮಾತುಕತೆ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ವಸತಿ ಇಲಾಖೆಯಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಬಿ ಆರ್ ಪಾಟೀಲ್ ಆರೋಪ ಮಾಡಿದ್ದರು. ಇದನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಸರ್ಫರಾಜ್ ಖಾನ್ ತಿಳಿಸಿದ್ದರು.
ಇದರ ಬೆನ್ನಲ್ಲೇ ಅವರ ವಿರುದ್ದ ಕೆಲವೊಂದು ಆರೋಪಗಳು ಕೇಳಿಬಂದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿದ್ದ ಅವರು, ರೂಪೇಶ್ ರಾಜಣ್ಣ ವಿರುದ್ಧನೂ ಆರೋಪ ಮಾಡಿದ್ದರು. ಆದರೆ ಇದೀಗ ಅದಕ್ಕೆ ರೂಪೇಶ್ ರಾಜಣ್ಣ ಜಮೀರ್ ಅವರ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದರು.