ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ 2025ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಶೋಷಿತರ ಪರವಾಗಿ ಕೆಲಸ ಮಾಡಿದವರು ಹಾಗೂ ದಲಿತ ಸಂವೇದನೆಯುಳ್ಳ ಹಿರಿಯ ಮತ್ತು ಉದಯೋನ್ಮುಖ ಪತ್ರಕರ್ತರು, ಹೋರಾಟಗಾರರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಂಘದ ವತಿಯಿಂದ ಡಾ. ಬಾಬಾಸಾಹೇಬ್ ಅಂಬೇಡ್ಕರ್, ಪ್ರೊ. ಬಿ. ಕೃಷ್ಣಪ್ಪ, ಬಿ. ರಾಚಯ್ಯ ಹಾಗೂ ಬಿ. ಬಸವಲಿಂಗಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ನಾಲ್ಕು ದತ್ತಿ ಪ್ರಶಸ್ತಿಗಳನ್ನು ಈ ಬಾರಿ ನೀಡಲಾಗುತ್ತಿದೆ.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿಗೆ ಮೈಸೂರಿನ ‘ವಿಜಯ ಕಾಲ’ ಕನ್ನಡ ದಿನಪತ್ರಿಕೆಯ ಸಂಪಾದಕ ಹಾಗೂ ಪ್ರಗತಿಪರ ಚಿಂತಕ ಕೆ. ದೀಪಕ್ ಆಯ್ಕೆಯಾಗಿದ್ದಾರೆ. ಪ್ರೊ. ಬಿ. ಕೃಷ್ಣಪ್ಪ ದತ್ತಿ ಪ್ರಶಸ್ತಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಅವರನ್ನು ಆಯ್ಕೆ ಮಾಡಲಾಗಿದೆ.
ಬಿ. ರಾಚಯ್ಯ ದತ್ತಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಹಾಗೂ ಮಾಹಿತಿ ಆಯುಕ್ತ ಬದ್ರುದ್ದೀನ್ ಕೆ. ಮತ್ತು ಬಿ. ಬಸವಲಿಂಗಪ್ಪ ದತ್ತಿ ಪ್ರಶಸ್ತಿಗೆ ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ ಆಯ್ಕೆಯಾಗಿದ್ದಾರೆ.
ಪ್ರತಿ ದತ್ತಿ ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರಲಿದೆ.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಾಧಕ ಪತ್ರಿಕಾ ಸಂಪಾದಕರನ್ನು ಗುರುತಿಸಿ ಸಂಘದ ವಾರ್ಷಿಕ ಗೌರವ ಪ್ರಶಸ್ತಿಗಳನ್ನೂ ಘೋಷಿಸಲಾಗಿದೆ. ‘ಕರ್ನಾಟಕ ಎಕ್ಸ್ಪ್ರೆಸ್’ ದಾವಣಗೆರೆಯ ಸಂಪಾದಕ ಚಂದ್ರಣ್ಣ, ‘ಬುದ್ಧಲೋಕ’ ಗುಲ್ಬರ್ಗಾದ ಸಂಪಾದಕ ದೇವೇಂದ್ರಪ್ಪ ಕಪ್ಪನೂರು, ‘ಜಗಳೂರು ವಾಯ್ಸ್’ ದಾವಣಗೆರೆಯ ಸಂಪಾದಕಿ ಬಿ.ಒ. ಕರಿಯಮ್ಮ, ‘ಸುದಿನ’ ಕನ್ನಡ ದಿನಪತ್ರಿಕೆ ಬಾಗಲಕೋಟೆಯ ಸಂಪಾದಕ ಸುಭಾಷ್ ಹೊದ್ಲೂರು ಹಾಗೂ ‘ಬಳ್ಳಾರಿ ಬೆಳಗಾಯಿತು’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅನೂಪ್ ಕುಮಾರ್ ಅವರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಹೇಮಾ ವೆಂಕಟ್, ಪ್ರೊ. ಪೂರ್ಣಾನಂದ, ಎ ನಾರಾಯಣ, ಸತೀಶ್ ಆಚಾರ್ಯ, ಸೋಮಶೇಖರ್ ಪಡುಕೆರೆ ಸೇರಿ ಹಲವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 17ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿರುವ ಸರ್ಕಾರಿ ನೌಕರರ ಸಂಘದ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಚೆಲುವರಾಜು ಹಾಗೂ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘವು ಕಳೆದ 26 ವರ್ಷಗಳಿಂದ ರಾಜ್ಯ ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿರುವ ದಲಿತ ಮಾಲೀಕತ್ವ ಅಥವಾ ಸಂಪಾದಕತ್ವದ ಪತ್ರಿಕೆಗಳ ಹಿತಾಸಕ್ತಿ ಕಾಪಾಡುವುದು, ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಸಹಭಾಗಿತ್ವ ಬಲಪಡಿಸುವುದು ಹಾಗೂ ದಲಿತ ಪತ್ರಕರ್ತರ ಬೌದ್ಧಿಕ ಉನ್ನತೀಕರಣಕ್ಕಾಗಿ ವಿವಿಧ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.





