ನಿವೃತ್ತ ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ನೇತೃತ್ವದಲ್ಲಿ ನಡೆಯುತ್ತಿರುವ ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಅವಧಿಯನ್ನು ಮತ್ತೆ ವಿಸ್ತರಿಸಲಾಗಿದೆ.
ಮೇ 5ರಿಂದ ಮನೆ ಮನೆ ಭೇಟಿ ಮೂಲಕ ಸಮೀಕ್ಷೆ ಆರಂಭಗೊಂಡಿತ್ತು. ಈವರೆಗೆ ರಾಜ್ಯದಾದ್ಯಂತ ಸಮೀಕ್ಷೆಯಲ್ಲಿ ಶೇಕಡ 91 ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇಕಡ 50ರಷ್ಟು ಪ್ರಗತಿ ಆಗಿದೆ. ಸಮೀಕ್ಷೆಯಲ್ಲಿ ಭಾಗವಹಿಸದೇ ಇರುವ ಕುಟುಂಬಗಳಿಗೆ ಅಂತಿಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಸಮೀಕ್ಷೆಯ ಕೊನೆಯ ದಿನಾಂಕವನ್ನು ಜೂನ್ 23ರಿಂದ 30ರವರೆಗೆ ವಿಸ್ತರಿಸಲಾಗಿದೆ.
ಬಿಬಿಎಂಪಿಯ ವ್ಯಾಪ್ತಿಯಲ್ಲಿ ಅಂದಾಜು 13.62 ಲಕ್ಷ ಪರಿಶಿಷ್ಟ ಜಾತಿ ಸಮುದಾಯ ಇರಬಹುದೆಂದು ಅಂದಾಜಿಸಲಾಗಿದೆ. ಆದರೆ, ಈವರೆಗೂ ಕೇವಲ 6.70 ಲಕ್ಷ ಜನರ ಮಾಹಿತಿ ಮಾತ್ರ ಲಭ್ಯವಾಗಿದೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2.50 ಲಕ್ಷ ಜನ ಇರಬಹುದೆಂದು ಅಂದಾಜಿಸಿತ್ತು. ಆದರೆ, 2.25 ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಕೋಲಾರದಲ್ಲಿ ಅಂದಾಜು 4.93 ಲಕ್ಷ ಜನರ ಪೈಕಿ 4.60 ಲಕ್ಷ ಜನ ಸಮೀಕ್ಷೆಯಲ್ಲಿ ದಾಖಲಾಗಿದ್ದಾರೆ.
ಆನ್‌ಲೈನ್ ಮೂಲಕ ಕುಟುಂಬದ ಸದಸ್ಯರ ವಿವರಗಳನ್ನು ದಾಖಲಿಸುವ ಸೌಲಭ್ಯವನ್ನು ಬಳಸಿಕೊಂಡು ಸುಮಾರು ಆರು ಸಾವಿರ ಕುಟುಂಬಗಳು ಸಮೀಕ್ಷೆಯಲ್ಲಿ ಭಾಗಿಯಾಗಿವೆ. ಸುಮಾರು 25 ಸಾವಿರ ಜನರ ವಿವರಗಳು ದಾಖಲಾಗಿವೆ ಎನ್ನಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಿತಿಯೊಳಗಿನ ಸಮೀಕ್ಷಾ ಕಾರ್ಯ ಶೇ.100ರಷ್ಟು ಖಚಿತಪಡಿಸಲು ಸಮೀಕ್ಷೆ ನಡೆಸಿದ ಪ್ರತೀ ಮನೆಗೆ ಸ್ಟಿಕ್ಕರ್‌ಗಳನ್ನು ಅಂಟಿಸಲು ಪ್ರಾರಂಭಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಭಾನುವಾರ ಸೂಚನೆ ನೀಡಿದ್ದಾರೆ.