ಕೊಪ್ಪಳ ಮತ್ತು ತುಮಕೂರು ಕಾರ್ಖಾನೆಗಳಲ್ಲಿ ನಡೆದ ಪ್ರತ್ಯೇಕ ಅವಘಡಗಳಲ್ಲಿ ಮೂವರು ಕಾರ್ಮಿಕರು ಮಂಗಳವಾರ ಮೃತಪಟ್ಟಿದ್ದಾರೆ.
ಕೊಪ್ಪಳ ತಾಲ್ಲೂಕಿನ ಅಲ್ಲಾನಗರ ಸಮೀಪದಲ್ಲಿರುವ ಹೊಸಪೇಟೆ ಇಸ್ಪಾಥ್ ಸ್ಟೀಲ್ ಕಾರ್ಖಾನೆಯಲ್ಲಿ (ಕಾಮಿನಿ ಇಂಡಸ್ಟ್ರೀಸ್) ಮಂಗಳವಾರ ಸಂಜೆ ಅನಿಲ ಸೋರಿಕೆಯಾಗಿದ್ದು ಒಬ್ಬ ಕಾರ್ಮಿಕ ಮೃತಪಟ್ಟಿದ್ದಾನೆ. ಅಲ್ಲಾ ನಗರ ನಿವಾಸಿ ಮಾರುತಿ ಕೊರಗಲ್ (24) ಮೃತ ಕಾರ್ಮಿಕ.
ಇನ್ನೊರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಏಳು ಜನ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಗೆಯೇ ತುಮಕೂರು ನಗರ ಹೊರವಲಯದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಪರಿಮಳಾ ಆಟ್ರೊ ಫುಡ್ ಕಾರ್ಖಾನೆಯಲ್ಲಿ ಮಂಗಳವಾರ ಸಂಜೆ ಬಾಯರ್ ಸ್ಪೋಟವಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಬಿಹಾರದ ಸಂತೋಷ್ (22), ಚಂದನ್ ಶರ್ಮಾ (26) ಮೃತರು. ಕಾರ್ಖಾನೆಯಲ್ಲಿ ಒಟ್ಟು ಐದು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾರ್ಖಾನೆಯಲ್ಲಿ ಭತ್ತದ ಹೊಟ್ಟು ಬಳಸಿ ಎಣ್ಣೆ ತಯಾರಿಸಲಾಗುತ್ತಿದೆ.
ಮೃತಪಟ್ಟ ಇಬ್ಬರು ಏಣಿ ಹತ್ತಿ ಖಾಲಿ ಬಾಟ್ಲರ್ ಸಿದ್ದಪಡಿಸುತ್ತಿದ್ದರು. ಅದರ ಪಕ್ಕದಲ್ಲಿ ಎಣ್ಣೆ ತುಂಬಿದ್ದ ಮತ್ತೊಂದು ಬಾಟ್ಲರ್ ಸ್ಫೋಟಗೊಂಡಿದೆ. ಸ್ಫೋಟ ಶಬ್ದದಿಂದ ಆತಂಕಗೊಂಡು ಏಣಿಯಿಂದ ಕೆಳಗೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.