ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ವಿಳಂಬ ಪರೀಕ್ಷೆ ನಡೆಸುವಲ್ಲಿ ಎಡವಟ್ಟು, ವ್ಯವಸ್ಥೆಯ ವೈಫಲ್ಯದ ಆರೋಪದ ಕುರಿತ ವಿಚಾರ ವಿಧಾನಸಭೆಯಲ್ಲಿ ಮಂಗಳವಾರ ಚರ್ಚೆ ನಡೆಯಿತು.
ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ನಿಲುವಳಿ ಸೂಚನೆ ಪೂರ್ವಭಾವಿಯಾಗಿ ಮಾತನಾಡಿ, “2 ಲಕ್ಷ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿಯಿಂದ ತೊಂದರೆಯಾಗಿದೆ. ಸರ್ಕಾರದ 30 ಕೋಟಿ ರೂ. ಹಣ ಖರ್ಚಾಗಿದೆ. ಕನ್ನಡ ಭಾಷೆಗೆ ಅಪಮಾನವಾಗಿದೆ” ಎಂದು ಆರೋಪಿಸಿದರು.
“ನಿರುದ್ಯೋಗ ಪದವೀಧರರ ಪಾಲಿಗೆ ಆಶಾಕಿರಣವಾಗಬೇಕಿದ್ದ ಕೆಪಿಎಸ್‌ಸಿ ಅವ್ಯವಸ್ಥೆಗಳ ಆಗರವಾಗಿದೆ. ಕೆಎಎಸ್ ಪರೀಕ್ಷೆ ಮತ್ತು ಮರುಪರೀಕ್ಷೆ ನಡೆಸುವಲ್ಲಿ ಪದೇಪದೆ ಎಡವಟ್ಟು ಮಾಡಿದೆ. ಪ್ರಶ್ನೆಪತ್ರಿಕೆಗಳ ತಯಾರಿಕೆ ಮತ್ತು ಅನುವಾದ ಮಾಡುವಲ್ಲಿ ಆಗುತ್ತಿರುವ ತಪ್ಪುಗಳಿಂದ ಪರೀಕ್ಷೆ ಸಂದರ್ಶನ ನಡೆಸಿ ಅಂತಿಮ ಆಯ್ಕೆ ಪ್ರಕಟಿಸುವಲ್ಲೂ ವಿಳಂಬವಾಗುತ್ತಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳು ತೊಂದರೆಗೊಳಗಾಗುತ್ತಿದ್ದಾರೆ. ಸರ್ಕಾರದ ರಾಜಕೀಯ ಹಸ್ತಕ್ಷೇಪ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಈ ಎಲ್ಲ ಗೊಂದಲಗಳಿಗೆ ಮೂಲ ಕಾರಣವಾಗಿದೆ. ಪ್ರತಿಯೊಂದು ಹುದ್ದೆಗೂ ದರ ನಿಗದಿ ಮಾಡಲಾಗಿದೆ” ಎಂದು ಆರೋಪಿಸಿದರು.
“ಪ್ರತೀ ಪರೀಕ್ಷೆಗೆ 15 ಕೋಟಿ ರೂ. ವೆಚ್ಚವಾಗಿದೆ. ಬರಗಾಲ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತೀ ರೂಪಾಯಿ ಅನುದಾನಕ್ಕೂ ನಾವು ಮುಖ್ಯಮಂತ್ರಿಗಳ ಮನೆಗೆ ಹೋಗುತ್ತೇವೆ. 2 ಲಕ್ಷ ಅಭ್ಯರ್ಥಿಗಳು ಕೆಪಿಎಸ್‌ಸಿ ವ್ಯವಸ್ಥೆ ವೈಫಲ್ಯದಿಂದ ಬೀದಿಗೆ ಬಂದಿದ್ದಾರೆ. ಹೀಗೇ ಮುಂದುವರೆದರೆ ಎಷ್ಟು ಮಂದಿ ಉದ್ಯೋಗಾಕಾಂಕ್ಷಿಗಳು ಆತಹತ್ಯೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಈ ವಿಚಾರದ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕೆಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಕೆಪಿಎಸ್‌ಸಿ ವಿರುದ್ಧ ರಸ್ತೆ ತಡೆ, ಪ್ರತಿಭಟನೆ ಆಗುತ್ತಿದೆ. ಸಭಾಧ್ಯಕ್ಷರೂ ಪತ್ರ ಬರೆದಿದ್ದಾರೆ. ಕೆಪಿಎಸ್‌ಸಿಯಿಂದ ಕನ್ನಡದ ಕೊಲೆಯಾಗಿದೆ. ಕನ್ನಡ ಉಳಿಯಬೇಕಲ್ಲವೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಎಚ್ ಕೆ ಪಾಟೀಲ್ ಮಧ್ಯ ಪ್ರವೇಶಿಸಿ, “ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಜಾಗೃತೆ ಇರಲಿ. ಜನರಲ್ ಆಗಿ ಮಾತನಾಡುವುದು ಬೇಡ. ಆರೋಪಗಳನ್ನು ದಾಖಲೆ ಸಮೇತ ಮಾಡಲಿ” ಎಂದರು. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತನಾಡಿ, “ಕೆಪಿಎಸ್‌ಸಿ ಹಣೆಬರಹ ನಿಮಗೂ ಗೊತ್ತು, ನಮಗೂ ಗೊತ್ತು. ಸುಮ್ಮನೇ ಸರ್ಕಾರದ ಮೇಲೆ ಆರೋಪ ಬೇಡ. ಕೆಪಿಎಸ್‌ಸಿ ರದ್ದು ಮಾಡಿ ಎಂದು ಚರ್ಚೆ ಮಾಡಿ” ಎಂದು ಹೇಳಿದರು.
ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, “ಈ ವಿಚಾರವನ್ನು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲೂ ಪ್ರಸ್ತಾಪಿಸಲು ಅವಕಾಶವಿದೆ” ಎಂದರು. ಆಗ ಅಶೋಕ್ ಮಾತನಾಡಿ, “ನಿಮ್ಮ ಸಲಹೆಯನ್ನು ಒಪ್ಪುತ್ತೇವೆ. ಆದರೆ ಈ ವಿಚಾರದ ಬಗ್ಗೆ ನಿರ್ದಿಷ್ಟವಾದ ಉತ್ತರ ಸರ್ಕಾರದಿಂದ ಸಿಗುವುದಿಲ್ಲ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸರ್ಕಾರ ಒಟ್ಟಾರೆ ಉತ್ತರವನ್ನು ನೀಡುತ್ತದೆ. ಹೀಗಾಗಿ ನಿಲುವಳಿ ಚರ್ಚೆಯಡಿ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.
ಮತ್ತೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷರು ನಿಲುವಳಿ ಸೂಚನೆಯಡಿ ವಿರೋಧಪಕ್ಷದ ನಾಯಕರು ಮಾಡಿರುವ ಪ್ರಸ್ತಾಪವನ್ನು ಮಾರ್ಪಾಡು ಮಾಡಿ ನಿಯಮ 69 ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿ, ಸದನದ ಕಾರ್ಯಕಲಾಪವನ್ನು ಭೋಜನದ ವಿರಾಮಕ್ಕೆ ಮುಂದೂಡಿದರು.