ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವ ಬೆಳವಣಿಗೆ ಬಗ್ಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪದಲ್ಲಿ ಗಂಭೀರ ಚರ್ಚೆ ನಡೆಯಿತು. ಇದು ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೂ ಕಾರಣವಾಯಿತು.
ವಿಧಾನಸಭೆಯ ಬೆಳಗಿನ ಕಲಾಪದಲ್ಲಿ ಕೆ ಎನ್ ರಾಜಣ್ಣ ವಜಾಗೊಳಿಸಿರುವ ಕಾರಣ ತಿಳಿಸಿ ಎಂದು ಪ್ರತಿಪಕ್ಷಗಳು ಆಗ್ರಹಿಸಿದರೆ, ವಿಧಾನ ಪರಿಷತ್‌ನ ಮಧ್ಯಾಹ್ನ ಕಲಾಪದಲ್ಲಿ ಇದೇ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರಾಜಣ್ಣ ವಜಾಗೆ ಕಾರಣ ತಿಳಿಸಿ ಎಂದು ಒತ್ತಾಯಿಸಿದರು.
ಸರ್ಕಾರದ ಕಡೆಯಿಂದ ಎರಡೂ ಸದನಗಳಲ್ಲಿ ಒಂದೇ ಉತ್ತರ ವ್ಯಕ್ತವಾಗಿದ್ದು, ‘ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಮತ್ತು ಕೈಬಿಡುವುದು ಮುಖ್ಯಮಂತ್ರಿಗಳ ವಿವೇಚನೆ. ಹೈಕಮಾಂಡ್ ಸುಮ್ಮನೇ ಎಳೆದು ತರಬೇಡಿ. ನಮ್ಮ ಪಕ್ಷದ ಉಸಾಬರಿ ನಿಮಗ್ಯಾಕೆ? ಯತ್ನಾಳ್ ಅವರನ್ನು ನೀವು ಉಚ್ಚಾಟಿಸಿದಾಗ ನಾವು ಏನಾದ್ರೂ ಪ್ರಶ್ನೆ ಮಾಡಿದ್ವಾʼ ಎಂದು ಕಾಂಗ್ರೆಸ್ ಸದಸ್ಯರು, ಸಚಿವರು ಕೇಳಿದರು.
ವಿಧಾನಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಜೋರುಧ್ವನಿಯಲ್ಲಿ ಮಾತನಾಡಿ, “ಮಾಜಿ ರಾಷ್ಟ್ರಪತಿ ಜಗದೀಪ್ ಧನಕನ್, ವಿಜಯಪುರ ಶಾಸಕ ಯತ್ನಾಳ್ ಬಗ್ಗೆಯೂ ಬಿಜೆಪಿಯವರು ಚರ್ಚೆ ಮಾಡಲಿ” ಎಂದರು.
ಚಿಂತಕರ ಚಾವಡಿ ಎಂದೇ ಕರೆಯುವ ವಿಧಾನ ಪರಿಷತ್‌ನ ಈ ಬಗ್ಗೆ ವಿಶೇಷವಾಗಿ ಚರ್ಚೆ ನಡೆಯಿತು. ಬಿಜೆಪಿ ಸದಸ್ಯ ಎಚ್ ವಿಶ್ವನಾಥ್ ಮಾತನಾಡಿ, “ಕರ್ನಾಟಕದಲ್ಲಿ ರಾಕ್ಷಸ ರಾಜಕಾರಣ ಇದೆ ಎಂದು ನಾನು ಜೆಡಿಎಸ್ ಬಿಡುವಾಗಲೇ ಹೇಳಿದ್ದೆ. ವರಿಷ್ಠರ ಬಗ್ಗೆ ಮಾತನಾಡಿದರೆ ಅಲ್ಲಿಗೆ ಅವರ ಕಥೆ ಮುಗಿಯಿತು. ಇದು ಕಾಂಗ್ರೆಸ್‌ನಲ್ಲಿ ಮಾತ್ರವಲ್ಲದೇ ಜೆಡಿಎಸ್, ಬಿಜೆಪಿಯಲ್ಲೂ ಇದೆ. ನಮ್ಮ ನಮ್ಮ ನಾಯಕರು ಮಾಡಿದ್ದೆಲ್ಲ ಸರಿಯೇ? ಇದೇನು ಹೌದಪ್ಪನ ಸರ್ಕಾರವಾ” ಎಂದು ಪ್ರಶ್ನಿಸಿದರು.
ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, “ರಾಹುಲ್ ಗಾಂಧಿ ವಿರುದ್ಧ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಕೆ ಎನ್ ರಾಜಣ್ಣ ಅವರನ್ನು ವಜಾ ಮಾಡಲಾಗಿದೆ. ಇದನ್ನು ಒಪ್ಪಿಕೊಳ್ಳಿ” ಎಂದರು.
ಸಚಿವ ಎಂ ಬಿ ಪಾಟೀಲ್ ಎದ್ದು ನಿಂತು, “ರಾಹುಲ್ ಗಾಂಧಿ ಹೆಸರು ಎಳೆದು ತರಬೇಡಿ. ಇದು ಮುಖ್ಯಮಂತ್ರಿಗಳ ವಿವೇಚನೆ. ನಿಮ್ಮ ಪಕ್ಷದ ನಿರ್ಧಾರಗಳ ಬಗ್ಗೆ ನಾವೂ ಹೀಗೆ ಮಾತನಾಡುತ್ತೇವಾ” ಎಂದು ಪ್ರಸ್ನಿಸಿದರು.
ಎಚ್ ವಿಶ್ವನಾಥ್ ಮಧ್ಯ ಪ್ರವೇಶಿಸಿ, “ಎಂ ಬಿ ಪಾಟೀಲರೇ, ಇದು ಬರೀ ರಾಹುಲ್ ಗಾಂಧಿ ಒಬ್ಬರದ್ದೇ ಕಥೆಯಲ್ಲ. ಈಗ ನಿಮ್ಮ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಹೇಳಿದ ಕಾರಣಕ್ಕೆ ಕೆ ಎನ್ ರಾಜಣ್ಣ ಅವರನ್ನು ತೆಗೆದು ಹಾಕಿದ್ದು ಅಂತ ಸಾರ್ವಜನಿಕವಾಗಿ ಹೇಳುತ್ತಾರಾ? ಹೇಳಿದರೆ ಅಲ್ಲಿಗೆ ಸಿಎಂ ಕಥೆಯೂ ಮುಗೀಯಿತು” ಎಂದರು.
ಮುಂದುವರಿದು, “ನನ್ನ ಉದ್ದೇಶ ಕೆ ಎನ್ ರಾಜಣ್ಣ ಪರವಾಗಿ ಮಾತನಾಡುವುದಲ್ಲ. ಪಕ್ಷ್ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದ್ದೇನೆ. ಸಂವಿಧಾನ ಬಗ್ಗೆ ಮಾತನಾಡುವ ನಾವೇ ಸಂವಿಧಾನ ಉಲ್ಲಂಘಿಸಿ ಮಾತನಾಡುತ್ತೇವೆ. ಇದು ಎಲ್ಲ ಪಕ್ಷದಲ್ಲೂ ಇದೆ. ಯಾವುದೇ ಪಕ್ಷ ತೆಗೆದುಕೊಳ್ಳಿ ಆಂತರಿಕ ಪ್ರಜಾಪ್ರಭುತ್ವ ಇಂದು ಎಲ್ಲಿದೆ? ಸದನಗಳು ಏನು ಆಗುತ್ತಿವೆ? ಹೀಗೆ ಏಕಾ ಏಕಿ ಯಾವ ಕಾರಣವೂ ನೀಡದೇ ರಾಜಣ್ಣ ಅವರನ್ನು ತೆಗದಿರುವ ಕ್ರಮ ಸರಿಯೇ? ಸಂಸದೀಯ ವ್ಯವಸ್ಥೆ ಬಗ್ಗೆ ಇದು ಅವಮಾನ” ಎಂದು ಹೇಳಿದರು.
ಎಂ ಬಿ ಪಾಟೀಲ್ ಅವರು ಮಧ್ಯಪ್ರವೇಶಿಸಿ, “ಆಪರೇಷನ್ ಕಮಲ ನಡೆದಾಗ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು” ಎಂದು ಕೇಳಿದರು. ವಿಶ್ವನಾಥ್ ಉತ್ತರಿಸಿ, ನಾನು ಮೂರು ಪಕ್ಷದಲ್ಲಿ ಇದ್ದು ಬಂದವ. ನಿಮ್ಮ ಜೊತೆಗೆಯೇ 40 ವರ್ಷ ಇದ್ದೇನೆ. ನನ್ನ ಅಜೆಂಡಾ ಒಂದೇ, ನನ್ನ ಝೇಂಡಾ, ಬದಲಾಗಬಹುದು, ಅಜೆಂಡಾ ಅಲ್ಲ” ಎಂದರು.
ಸಲೀಂ ಅಹಮ್ಮದ್ ಎದ್ದು ನಿಂತು, ‘ನೀವಿರುವ ಪಕ್ಷದ ಅಜೆಂಡಾ ಒಪ್ಪಿದ್ದೀರಾ?’ ಎಂದು ಕೇಳಿದರು. ಕಾಂಗ್ರೆಸ್ ಏನು ಜನಸಾಮಾನ್ಯರ ಕಣ್ಣೀರು ಒರೆಸುತ್ತಿದೆಯಾ? ಎಂದು ಪ್ರತ್ಯುತ್ತರ ನೀಡಿದರು.