ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ | ಶೋಭಾ ಗೋಬ್ಯಾಕ್ ಅಭಿಯಾನ ರಾಜೀವ್ ಗೌಡರಿಗೆ ವರವಾಗಲಿದೆಯೆ?

Date:

Advertisements

ಹಲವು ರಾಜಕೀಯ ಇತಿಹಾಸ ಹೊಂದಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾ ರಣಾಂಗಣಕ್ಕೆ ವೇದಿಕೆ ಸಿದ್ದಗೊಂಡಿದೆ. 1952ರ ಮೊದಲ ಚುನಾವಣೆಯಿಂದ ಕೆಂಗಲ್ ಹನುಮಂತಯ್ಯ, ಸಿ ಕೆ ಜಾಫರ್ ಷರೀಫ್ ಅವರಂಥ ಘಟನಾಘಟಿ ನಾಯಕರನ್ನು ಚುನಾಯಿಸುವ ಮೂಲಕ ಕಾಂಗ್ರೆಸ್ ಭದ್ರಕೋಟೆಯನ್ನಾಗಿಸಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತದಾರರು, ಕಳೆದ ನಾಲ್ಕು ಲೋಕಸಭಾ ಚುನಾವಣೆಗಳಿಂದ ಕಮಲ ಪಕ್ಷದ ಅಭ್ಯರ್ಥಿಗಳಿಗೆ ಮಣೆ ಹಾಕುತ್ತಿದ್ದಾರೆ.

ಅಹಿಂದ ವರ್ಗಕ್ಕೆ ಸೇರಿದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಮುಸ್ಲಿಂ ಸಮುದಾಯದ ನಾಯಕರಾದ ಸಿ ಕೆ ಜಾಫರ್ ಷರೀಫ್ ಅವರನ್ನು 1977ರಿಂದ 1999ರವರೆಗೆ ಬೆಂಗಳೂರು ಉತ್ತರ ಕ್ಷೇತ್ರದ ಮತದಾರರು 7 ಬಾರಿ ಆಯ್ಕೆ ಮಾಡಿದ್ದರು.

ಕಾರ್ಮಿಕ ನಾಯಕ ಜಾರ್ಜ್ ಫರ್ನಾಂಡೀಸ್ ಹಾಗೂ ಅವರ ಇಬ್ಬರು ಸಹೋದರರಾದ ಮೈಖೇಲ್ ಫರ್ನಾಂಡೀಸ್ ಹಾಗೂ ಲಾರೆನ್ಸ್ ಫರ್ನಾಂಡೀಸ್ ಅವರನ್ನು ಸೋಲಿಸಿದ್ದ ಹೆಗ್ಗಳಿಕೆ ಜಾಫರ್ ಷರೀಫ್ ಅವರದು. ಹಲವು ಬಾರಿ ಗೆದ್ದ ಇವರನ್ನು ಕೇಂದ್ರ ಸರ್ಕಾರ ಎರಡು ಬಾರಿ ಮಂತ್ರಿಯನ್ನಾಗಿ ನೇಮಕ ಮಾಡಿತ್ತು. 2004 ಹಾಗೂ 2009ರಲ್ಲಿ ಕಡಿಮೆ ಅಂತರದಲ್ಲಿ ಸೋತ ನಂತರ ನೇಪಥ್ಯಕ್ಕೆ ಸರಿಯತೊಡಗಿದರು.

Advertisements

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಬಹುಪಾಲು ನಗರ ಹಾಗೂ ಒಂದಿಷ್ಟು ಗ್ರಾಮೀಣ ಸೊಗಡಿನ ಹಲವು ವೈಶಿಷ್ಟತೆಗಳಿಂದ ಕೂಡಿದೆ. ರಾಜ್ಯದ ವಿವಿಧ ಭಾಗಗಳು ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಿಂದ ಬಂದ ಜನರು ಬದುಕು ಕಟ್ಟಿಕೊಂಡಿರುವ ಪ್ರದೇಶ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ. ರಾಜಧಾನಿಯ ಇತರ ಕ್ಷೇತ್ರಗಳಾದ ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಹೋಲಿಸಿದರೆ ಬೆಂಗಳೂರು ಉತ್ತರವು ಅಭಿವೃದ್ದಿಯಲ್ಲಿ ಹಿಂದಿದೆ. ಗಾರ್ಮೆಂಟ್‌ ಕಾರ್ಖಾನೆಗಳು, ಗುಡಿ ಕೈಗಾರಿಕೆ, ಅರೆ ಕೈಗಾರಿಕೆಗಳಿರುವ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಕಾರ್ಮಿಕರಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ನಗರೀಕರಣ ಆರಂಭದಿಂದಾಗಿ ಒಂದಿಷ್ಟು ಕಡೆ ಅಭಿವೃದ್ಧಿ ಚಟುವಟಿಕೆ ಕಂಡುಬರುತ್ತಿದೆ. ಎಂಟು ವಿಧಾನಸಭಾ ಕ್ಷೇತ್ರಗಳಿರುವ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅಪಾರ್ಟ್ ಮೆಂಟ್‌ಗಳು ಹಾಗೂ ವಸತಿ ಸೌಲಭ್ಯಗಳಿಗೆ ಹೆಚ್ಚಿನ ಭೂಪ್ರದೇಶ ಬಳಕೆಯಾಗುತ್ತಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಕೆ ಆರ್ ಪುರಂ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಪುಲಕೇಶಿನಗರ(ಮೀಸಲು) ಕ್ಷೇತ್ರವನ್ನು ಒಳಗೊಂಡಿದೆ. 8 ವಿಧಾನಸಭಾ ಕ್ಷೇತ್ರಗಳಲ್ಲಿ 5ರಲ್ಲಿ ಬಿಜೆಪಿ, 3ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ | ಸರ್ವ ಜನಾಂಗದ ಬೀಡಿನಲ್ಲಿ ಬಿಜೆಪಿಗೆ ಈ ಬಾರಿ ಆಘಾತ ಸಾಧ್ಯತೆ?

ವಿಶೇಷವೆಂದರೆ ಮೊದಲ ಎರಡು ಬಾರಿ ಚುನಾಯಿತರಾಗಿದ್ದ ಕೇಶವ್ ಅಯ್ಯಂಗಾರ್ ಹೊರತುಪಡಿಸಿದರೆ ಹೊರಗಿನ ಅಭ್ಯರ್ಥಿಗಳೇ ಗೆಲುವು ಸಾಧಿಸಿರುವುದೇ ಇಲ್ಲಿಯ ವಿಶೇಷ.

ಜನಸಂಖ್ಯೆ ವಿಷಯಕ್ಕೆ ಬಂದರೆ ಅಹಿಂದ ಮತಗಳು ಹೆಚ್ಚಿದ್ದರೂ ಒಕ್ಕಲಿಗ ಸಮುದಾಯದ ಮತದಾರರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕವಾಗಿದ್ದಾರೆ. ಹಾಗಾಗಿ ಕಾಂಗ್ರೆಸ್ – ಬಿಜೆಪಿ ಪಕ್ಷಗಳು ಕೂಡ ಜಾತಿ ಲೆಕ್ಕಾಚಾರಲ್ಲಿ ಒಕ್ಕಲಿಗ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ.

ಬೆಂಕಿಯುಗುಳುವ ಶೋಭಾ – ಸುಶಿಕ್ಷಿತ ರಾಜೀವ್ ಗೌಡ

ಕಾಂಗ್ರೆಸ್ ಹಾಗೂ ಎನ್‌ಡಿಎ ಎರಡೂ ಪಕ್ಷಗಳು ಈಗಾಗಲೇ ಅಭ್ಯರ್ಥಿಗಳ ಘೋಷಣೆ ಮಾಡಿವೆ. ಕಾಂಗ್ರೆಸ್ ಪಕ್ಷದಿಂದ ರಾಜಕೀಯ ತಜ್ಞರಾದ ಪ್ರೊ. ಎಂ ವಿ ರಾಜೀವ್‌ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಮೂಲತಃ ಕೋಲಾರದ ಮುಳಬಾಗಿಲಿನವರಾದ ರಾಜೀವ್ ಗೌಡ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಚುನಾವಣಾ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗದಿದ್ದರೂ ಪ್ರಭಾವಿ ರಾಜಕೀಯ ಹಿನ್ನೆಲೆ ಹಾಗೂ ಸರ್ಕಾರದೊಂದಿಗೆ ಕೆಲಸ ಮಾಡಿದ ಹಿನ್ನೆಲೆಯಿದೆ. ತಂದೆ ಎಂ ವಿ ವೆಂಕಟಪ್ಪ ಮುಳಬಾಗಿಲು ಕ್ಷೇತ್ರದ ಶಾಸಕ, ವಿಧಾನಸಭೆಯ ಸ್ಪೀಕರ್ ಹಾಗೂ ವಿಧಾನ ಸಭಾಧ್ಯಕ್ಷರಾಗಿದ್ದರು. ದೊಡ್ಡಪ್ಪ ಎಂ ವಿ ಕೃಷ್ಣಪ್ಪ ಕೋಲಾರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯರಾಗಿದ್ದರು. ಅಲ್ಲದೆ ಎಸ್ ನಿಜಲಿಂಗಪ್ಪ ಹಾಗೂ ಎಸ್ ಆರ್ ಕಂಠಿ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು.

ತಂದೆ ಹಾಗೂ ದೊಡ್ಡಪ್ಪನ ರಾಜಕೀಯ ಗರಡಿಯಲ್ಲಿ ಬೆಳೆದವರು ಎಂ ವಿ ರಾಜೀವ್ ಗೌಡ ಬೆಂಗಳೂರಿನ ಸೇಂಟ್ ಜೋಸೆಫ್ ವಿವಿ, ಅಮೆರಿಕದ ಕ್ಯಾಲಿಫೋರ್ನಿಯಾ ವಿವಿ ಸೇರಿದಂತೆ ಹಲವು ವಿವಿಗಳಿಂದ ಎಂಎ ಪಿಹೆಚ್.ಡಿ ಪದವಿ ಪಡೆದು ಬೆಂಗಳೂರಿನ ಐಐಎಂ ಸೇರಿದಂತೆ ವಿದೇಶಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

2004ರಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದ ರಾಜೀವ್ ಗೌಡ ಅವರು ಎಐಸಿಸಿ, ಕೆಪಿಸಿಸಿಯಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. 2014 ರಿಂದ 2020ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದು ಚುನಾವಣಾ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ.

ಎನ್‌ಡಿಎ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಪಡೆದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಈಗಾಗಲೇ ಸ್ವಪಕ್ಷೀಯರಿಂದಲೇ ಬಹಿರಂಗವಾಗಿ ಅಪಸ್ವರಗಳು ಕೇಳಿಬಂದಿವೆ. ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದರೂ ಅಭಿವೃದ್ಧಿ ಮಾಡುವುದಿರಲಿ, ಕ್ಷೇತ್ರದ ಕಡೆಗೂ ಕಾಲಿಟ್ಟಿಲ್ಲ. ಜನರ ಕಷ್ಟಸುಖಗಳನ್ನು ವಿಚಾರಿಸಿಲ್ಲ. ಪಕ್ಷಕ್ಕಾಗಿ ವರ್ಷಾನುಗಟ್ಟಲೆ ಶ್ರಮವಹಿಸಿದ ಕಾರ್ಯಕರ್ತರನ್ನು ಕಡೆಗಣಿಸಿದ ಪರಿಣಾಮ ಶೋಭಾ ಕರಂದ್ಲಾಜೆ ವಿರುದ್ಧ ಸ್ವಕ್ಷೇತ್ರದಲ್ಲಿ ಗೋಬ್ಯಾಕ್ ಅಭಿಯಾನ ಶುರುವಾಗಿ ಬೆಂಗಳೂರು ಉತ್ತರಕ್ಕೆ ವಲಸೆ ಬಂದಿದ್ದಾರೆ.

2008ರಲ್ಲಿ ಬೆಂಗಳೂರು ಉತ್ತರದ ಯಶವಂತಪುರ ಕ್ಷೇತ್ರದಿಂದ ಮೊದಲ ಬಾರಿ ಸಂಭವಿಸಿದ ಬಿಜೆಪಿ ಪರ ಅಲೆಯಿಂದಾಗಿ ಶಾಸಕಿಯಾಗಿ ಶೋಭಾ ಕರಂದ್ಲಾಜೆ ಆಯ್ಕೆಯಾಗಿ ಸಚಿವೆಯೂ ಆಗಿದ್ದರು. ತೂಕದ ಖಾತೆಯ ಸಚಿವೆಯಾಗಿದ್ದರೂ ಐದು ವರ್ಷಗಳ ಕಾಲ ಕ್ಷೇತ್ರದ ಕಡೆ ಕಾಲಿಡದೆ 2013ರಲ್ಲಿ ಕಾಲ್ಕಿತ್ತಿದ್ದರು.

ಈಗ ಶೋಭಾ ಅವರು ಬೆಂಗಳೂರು ಉತ್ತರಕ್ಕೆ ವಲಸೆ ಬಂದಿರುವುದು ಸ್ಥಳೀಯ ನಾಯಕರಿಗೆ ಇರುಸುಮುರುಸು ಉಂಟಾಗಿದೆ. ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿಯೂ ಕೂಡ ಹಲವು ಕಡೆ ಗೋಬ್ಯಾಕ್ ಅಭಿಯಾನ ಶುರುವಾಗಿದೆ.

ಯಶವಂತಪುರ ಬಿಜೆಪಿ ಶಾಸಕ ಎಸ್‌ ಟಿ ಸೋಮಶೇಖರ್, ತಮ್ಮ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಒಂದೇ ಒಂದು ಗಲಭೆ ನಡೆದಿಲ್ಲ. ಆದರೆ ಈ ಸಲ ಟಿಕೆಟ್ ಗಿಟ್ಟಿಸಿರುವ ಶೋಭಾ ಕರಂದ್ಲಾಜೆ ಅಲ್ಲಿಂದ ಗೆಲ್ಲುವ ಮೊದಲೇ ಅಸಂಬದ್ಧ ಮತ್ತು ಮತೀಯ ಗಲಾಟೆಗಳಿಗೆ ಉತ್ತೇಜನ ನೀಡುವ ಹೇಳಿಕೆ ನೀಡುತ್ತಿದ್ದಾರೆ. ಬೆಂಗಳೂರು ಶಾಂತಿಪ್ರಿಯ ನಗರವೆನ್ನುವುದನ್ನು ಶೋಭಾ ಮನಗಾಣಬೇಕು. ಅವರ ಹೇಳಿಕೆಗಳಿಂದಾಗಿ ಖುದ್ದು ತನಗೆ ಕ್ಷೇತ್ರದಲ್ಲಿ ಓಡಾಡಲು ಭಯವಾಗುತ್ತಿದೆ, ಯಾವ ಸಮಯದಲ್ಲಿ ಏನು ನಡೆಯಲಿದೆಯೋ ಅಂತ ಆತಂಕ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದ್ದರು. ಇವೆಲ್ಲವೂ ಚುನಾವಣೆಯಲ್ಲಿ ಶೋಭಾ ವಿರೋಧಿ ಅಲೆಗೆ ಕಾರಣವಾಗಬಹುದು.

ಎರಡು ಬಾರಿ ಸಂಸದರಾಗಿದ್ದ ಮಾಜಿ ಸಿಎಂ ಡಿ ವಿ ಸದಾನಂದಗೌಡರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡುವ ಅವಕಾಶವನ್ನು ಬಳಸಿಕೊಂಡಿಲ್ಲ ಎಂಬ ಮಾತುಗಳಿವೆ. ತಮ್ಮ ದುಃಖದುಮ್ಮಾನ ಕೇಳಲಿಲ್ಲ ಎಂಬ ನೋವು ಬಿಜೆಪಿ ಕಾರ್ಯಕರ್ತರಿಗಿದ್ದರೆ, ಕ್ಷೇತ್ರದಲ್ಲಿ ಯಾವುದೇ ರಸ್ತೆ, ಮೂಲಭೂತ ಸೌಕರ್ಯ ಒದಗಿಸಲಿಲ್ಲ ಎಂಬ ಬೇಸರ ಜನಸಾಮಾನ್ಯರಲ್ಲಿದೆ.

ಕೇಂದ್ರದಲ್ಲಿ ಸಚಿವರಾಗಿ ಕ್ಷೇತ್ರಕ್ಕೆ ಯಾವುದೇ ಮಹತ್ವದ ಯೋಜನೆ ತರಲಿಲ್ಲ. ಕುಡಿಯುವ ನೀರು, ಒಳಚರಂಡಿ, ರಸ್ತೆ, ಆಸ್ಪತ್ರೆ ಹಾಗೂ ಕಾರ್ಮಿಕ ಸಮುದಾಯಗಳ ಕಷ್ಟ ಸುಖ ಆಲಿಸಲು ಡಿವಿಎಸ್ ವಿಫಲರಾಗಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದ ಹಲವು ಕಡೆ ಕೇಳಿ ಬಂದಿದೆ. ಇದು ಹಾಲಿ ಬಿಜೆಪಿ ಅಭ್ಯರ್ಥಿ ಶೋಭಾಗೆ ತೊಡಕುಂಟಾಗಬಹುದು ಎಂಬ ಲೆಕ್ಕಾಚಾರವಿದೆ.

ಈಗ ಟಿಕೆಟ್ ಪಡೆದಿರುವ ಶೋಭಾ ಅವರನ್ನು ಆಯ್ಕೆ ಮಾಡಿದರೆ ಕೋಮುದಳ್ಳುರಿಗೆ ಅನುಮತಿ ಕೊಟ್ಟು ಮತ್ತೆ ನಮ್ಮ ಕ್ಷೇತ್ರವು ಅಭಿವೃದ್ಧಿಯಿಂದ ವಂಚಿತವಾಗುವ ಸಾಧ್ಯತೆಯಿರುವುದರಿಂದ ಸುಶಿಕ್ಷಿತರಾದ ಎಂ ವಿ ರಾಜೀವ್‌ ಗೌಡರನ್ನು ಆಯ್ಕೆ ಮಾಡುವುದು ವಾಸಿ ಎಂಬ ಲೆಕ್ಕಾಚಾರ ಮತದಾರರಲ್ಲಿ ಮನೆ ಮಾಡಿದೆ. ಇದರ ಜೊತೆ ಯಶಸ್ವಿಯಾಗಿರುವ ರಾಜ್ಯ ಸರ್ಕಾರದ ಪಂಚ ಭಾಗ್ಯಗಳು ಕಾಂಗ್ರೆಸ್‌ ಅಭ್ಯರ್ಥಿಯನ್ನು ಕೈಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.

 

Bangalore north caste

Bangalore north caste 2

Bangalore north caste 3

 

 

 

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X