ಧರ್ಮಸ್ಥಳ ವ್ಯಾಪ್ತಿಯಲ್ಲಿನ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದಾರೆ.
ಧರ್ಮಸ್ಥಳ ಸರಣಿ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ರಚಿಸುವಂತೆ ಒತ್ತಾಯಿಸಿ ಹಿರಿಯ ವಕೀಲರಾದ ಸಿಎಸ್ ದ್ವಾರಕನಾಥ್ ಮತ್ತು ಎಸ್ ಬಾಲನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಸಿಎಂ ಎಸ್‌ಐಟಿ ರಚನೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಸಾವು ಪ್ರಕರಣ: ವಿಶೇಷ ತನಿಖಾ ತಂಡ ರಚಿಸುವಂತೆ ಕೋರಿ ಸಿಎಂಗೆ ಮಹಿಳಾ ಆಯೋಗ ಪತ್ರ
ಎಸ್‌ಐಟಿ ರಚಿಸುವಾಗ ಬಹಳ ದಕ್ಷ ಐಪಿಎಸ್ ಅಧಿಕಾರಿಯನ್ನು ನೇಮಿಸಬೇಕು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಸುಪರ್ದಿಯಲ್ಲಿ ಈ ತನಿಖೆ ನಡೆಯಬೇಕು. ಕ್ರಿಮಿನಲ್ ಕೃತ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವ ಪ್ರಾಸಿಕ್ಯೂಟರ್ ಅನ್ನು ನೇಮಿಸಬೇಕು ಎಂದು ದ್ವಾರಕನಾಥ್ ತಂಡವು ಸಿಎಂಗೆ ಮನವಿ ಮಾಡಿದ್ದಾರೆ.
ಇನ್ನು ಧರ್ಮಸ್ಥಳದಲ್ಲಿ ಹೂತಿಟ್ಟಿರುವ ಮೃತದೇಹಗಳನ್ನು ಹೊರತೆಗೆಯುವ ವೇಳೆ ಎಲ್ಲವನ್ನೂ ವಿಡಿಯೋ ಚಿತ್ರೀಕರಣ ಮಾಡಬೇಕು. ವಿಧಿವಿಜ್ಞಾನ ತಂಡ(ಎಫ್‌ಎಸ್‌ಎಲ್) ಕಡ್ಡಾಯವಾಗಿ ಇರಲೇಬೇಕು ಎಂದು ವಕೀಲರು ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಈ ವಿಚಾರದಲ್ಲಿಯೇ ನಾಳೆ(ಜುಲೈ 17) ಬೆಳಿಗ್ಗೆ 10:30 ಗಂಟೆಗೆ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಮತ್ತು ದ್ವಾರಕನಾಥ್ ಅವರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸುವಂತೆ ಮಹಿಳಾ ಆಯೋಗ ಒತ್ತಾಯಿಸಿದೆ. ಇನ್ನು ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಎಸ್ಐಟಿ ರಚನೆಯಾಗಲಿ ಎಂದು ದೂರುದಾರರ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಒತ್ತಾಯಿಸಿದ್ದಾರೆ.
