ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿ, ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮ ರಾವ್ ಅವರಿಗೆ 2025ನೇ ಸಾಲಿನ ಅರಸು ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಪ್ರಶಸ್ತಿ ಪ್ರದಾನ ಬಳಿಕಸ ಮಾತನಾಡಿದ ಸಿದ್ದರಾಮಯ್ಯ, “ದೇವರಾಜ ಅರಸು ಅವರ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ವರ್ಷ ಹಿರಿಯ ಪತ್ರಕರ್ತರಾದ ಕಲ್ಲೆ ಶಿವೋತ್ತಮ ರಾವ್ ಅವರು ಆಯ್ಕೆಯಾಗಿರುವುದು ಸಂತೋಷದ ವಿಚಾರ. ಅವರಿಗೆ ಬಹಳ ಹಿಂದೆಯೇ ಈ ಪ್ರಶಸ್ತಿ ದೊರೆಯಬೇಕಿತ್ತು. ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ನನಗೆ ಅತೀವ ಸಂತಸ ತಂದಿದೆ” ಎಂದರು.
“ಕಲ್ಲೆ ಶಿವೋತ್ತಮ ರಾವ್ ಅವರೂ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಅನೇಕ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ಸರ್ಕಾರವನ್ನು ಯಾವುದೇ ಮುಲಾಜಿಲ್ಲದೇ ನೇರವಾಗಿ ಟೀಕಿಸುತ್ತಿದ್ದರು. ನನ್ನನ್ನೂ ಕೂಡ ಟೀಕಿಸಿದ್ದಾರೆ. ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿ ಕಲ್ಲೆ ಶಿವೋತ್ತಮ ರಾವ್ ಅವರಿಗೆ 96 ವರ್ಷಗಳಾಗಿದ್ದು, ಅವರು ನೂರು ವರ್ಷಕ್ಕೂ ಹೆಚ್ಚು ಕಾಲ ಬಾಳಲಿ” ಎಂದು ಹಾರೈಸಿದರು.
“ದೇವರಾಜ ಅರಸು ಅವರು ತಮ್ಮ ಅಧಿಕಾರಾವಧಿಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಒದಗಿಸಲು ಪ್ರಾಮಾಣಿಕ ಪ್ರಯ ತ್ನ ಮಾಡಿದ್ದಾರೆ. ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ನಾಮಕಾರಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿ, ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸಲು ಶ್ರಮಿಸಿದ್ದರು” ಎಂದು ಸಿದ್ದರಾಮಯ್ಯ ತಿಳಿಸಿದರು.
“ದೇವರಾಜ ಅರಸು ಅವರು ಎಂಟು ವರ್ಷಗಳ ಕಾಲ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಅವರ ನಂತರ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದು ನಾನೇ. ಅವರಂತೆ ನಾನೂ ಮುಖ್ಯಮಂತ್ರಿಯಾಗಿ 5 ವರ್ಷಗಳನ್ನು ಪೂರೈಸಿದ್ದೇನೆ. ಈ ವಿಚಾರದಲ್ಲಿ ನಮ್ಮಿಬ್ಬರಿಗೂ ಸಾಮ್ಯತೆ ಇದೆ ಎಂದರು. ದೇವರಾಜ ಅರಸು ಅವರು ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರಲು ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ದೊರಕಬೇಕೆಂದು ನಂಬಿದ್ದರು. ಇವುಗಳಿಲ್ಲದೇ ರಾಜಕೀಯ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಹೇಳಿದ್ದರು. ಸಮಾಜದಲ್ಲಿ ಎಲ್ಲಿಯವರೆಗೆ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಸ್ವಾತಂತ್ರ್ಯ ಸೌಧ ಗಟ್ಟಿಯಾಗಿರಲು ಸಾಧ್ಯವಿಲ್ಲ. ಅಸಮಾನತೆಯಿಂದ ನರಳುವ ಜನ ಎಂದಾದರೂ ಸ್ವಾತಂತ್ರ್ಯ ಸೌಧವನ್ನು ಧ್ವಂಸ ಮಾಡುತ್ತಾರೆ ಎಂದು ಹೇಳಿದ್ದರು. ಈ ವಿಚಾರದಲ್ಲಿ ಅಪಾರವಾದ ನಂಬಿಕೆಯನ್ನಿಟ್ಟವರು ದೇವರಾಜ ಅರಸು” ಎಂದರು.
ಆರ್ಥಿಕ, ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಪ್ರಾಮಾಣಿಕ ಯತ್ನ
“ಅರಸು ಅವರು ಆರ್ಥಿಕ, ಸಾಮಾಜಿಕ ಅಸಮಾನತೆಯನ್ನು ಅನುಭವಿಸದಿದ್ದರೂ ಈ ವಿಚಾರಗಳಲ್ಲಿ ನಂಬಿಕೆ ಇರಿಸಿಕೊಂಡಿದ್ದರಲ್ಲದೇ ಅದನ್ನು ಜಾರಿ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರು. ಅವರು ಮುಖ್ಯಮಂತ್ರಿಯಾದಾಗ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕೆಂದು ಪ್ರತಿಪಾದಿಸಿದ್ದರು. ಜಾತಿ, ವರ್ಗ ವ್ಯವಸ್ಥೆಯಿರುವ ಸಮಾಜದಲ್ಲಿ ಎಲ್ಲರಿಗೂ ಆರ್ಥಿಕ ಸಾಮಾಜಿಕ ಶಕ್ತಿ, ಸ್ವಾವಲಂಬನೆ ಬರಬೇಕು. ಅದಿಲ್ಲದೇ ಜಾತಿ, ವರ್ಗ ಯಾವುದೂ ಹೋಗುವುದಿಲ್ಲ” ಎಂದು ಹೇಳಿದರು.
ಉಳುವವನಿಗೆ ಭೂಮಿ- ಭೂ ಸುಧಾರಣೆ ಕಾಯ್ದೆ ಜಾರಿ ಸುಲಭದ ಮಾತಾಗಿರಲಿಲ್ಲ
“ವಿರೋಧದ ನಡುವೆಯೂ ಭೂ ಸುಧಾರಣೆ ಕಾಯ್ದೆಯ ಉಳುವವನಿಗೆ ಭೂಮಿ ಎನ್ನುವ ಕಾನೂನನ್ನು ಜಾರಿ ಮಾಡುವುದು ಸುಲಭದ ಮಾತಾಗಿರಲಿಲ್ಲ. ಹಾವನೂರು ಆಯೋಗವನ್ನು ರಚಿಸಿ ಹಿಂದುಳಿದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಜಾರಿ ಮಾಡಿದ್ದನ್ನು ಮೆಚ್ಚಲೇಬೇಕಾದ ಕೆಲಸ. ವಿಧಾನಸೌಧ ಕೆಲವೇ ಜನರ ಪ್ರಾತಿನಿಧಿಕ ಸಭೆಯಾಗಿರುವುದನ್ನು ಮನಗಂಡ ಅರಸುರವರು ಹಿಂದುಳಿದವರೂ ವಿಧಾನಸೌದದ ಮೆಟ್ಟಿಲನ್ನು ಹತ್ತುವಂತೆ ಮಾಡಿದರು. ಜೀತಪದ್ಧತಿ ಹಾಗೂ ಮಲಹೊರುವ ಪದ್ಧತಿ ನಿಷೇಧ, ಋಣಪರಿಹಾರ ಕಾಯ್ದೆ ಜಾರಿಗೆ ತಂದರು” ಎಂದು ಹೇಳಿದರು.
ಇಡೀ ದೇಶದಲ್ಲಿ ಕರ್ನಾಟಕ ತಲಾ ಆದಾಯದಲ್ಲಿ ಒಂದನೇ ಸ್ಥಾನ
ಗ್ಯಾರಂಟಿಗಳಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಹಲವು ಟೀಕೆಗಳು ಕೇಳಿಬಂದವು. ಬಡವರಿಗೆ ತಿಂಗಳಿಗೆ 5 ರಿಂದ 6 ಸಾವಿರ ನೀಡುತ್ತಿರುವುದು ಅಭಿವೃದ್ಧಿಯಲ್ಲವೇ? ಹೆಣ್ಣುಮಕ್ಕಳಿಗೆ ಸ್ವಾವಲಂಬನೆ ನೀಡುವ ಉದ್ದೇಶದಿಂದ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. 2013-14 ರಲ್ಲಿ 1,04,000 ರೂ. ಇದ್ದ ತಲಾದಾಯ, 2024-25 ರಲ್ಲಿ 2,05,000 ರೂ.ಗಳಾಗಿದೆ.ಇಡೀ ದೇಶದಲ್ಲಿ ಕರ್ನಾಟಕ ತಲಾ ಆದಾಯದಲ್ಲಿ ಒಂದನೆ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಗಳಿಂದ ಇಂತಹ ಸಾಧನೆ ಸಾಧ್ಯವಾಗಿದೆ ಎಂದರು.
ಹಿಂದುಳಿದ ವರ್ಗಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಗ್ಯಾರಂಟಿ ಯೋಜನೆಗಳ ರಾಜ್ಯ ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್, ಶಾಸಕರಾದ ರಿಜ್ವಾನ್ ಅರ್ಷದ್, ವಿಯಾನಂದ ಕಾಶಪ್ಪನವರ್, ಎ.ಆರ್ .ಕೃಷ್ಣಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಸೂರಜ್ ಹೆಗಡೆ, ಮಾಜಿ ಶಾಸಕ ಕೊಂಡಜ್ಜಿ ಮೋಹನ್ ಉಪಸ್ಥಿತರಿದ್ದರು.