ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಮಂತ್ರಿ ಡಾ. ಜಿ ಪರಮೇಶ್ವರ್ ಅವರಿಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ ಆರೋಪದ ಪದ್ಮನಾಭ ಅಲಿಯಾಸ್ ಪದ್ದು ಎಂಬುವರ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
“ಪದ್ಮನಾಭ ಅಲಿಯಾಸ್ ‘ಪದ್ದು’ ಎಂಬುವನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲಾ ಖಾನ್ ಎಂದು ನಿಂದಿಸಿ ಹಾಗೂ ಗೃಹ ಮಂತ್ರಿ ಜಿ ಪರಮೇಶ್ವರ್ ರವರಿಗೂ ಸಹ ಅವಾಚ್ಯ ಶಬ್ದಗಳನ್ನು ಬಳಸುವ ಮೂಲಕ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು, ತೂರಾಟ ಮಾಡಿರುವ ಘಟನೆಯನ್ನು ಉಲ್ಲೇಖಿಸಿ ಧರ್ಮಗಳ ನಡುವೆ ಸೌಹಾರ್ಧತೆಗೆ ದಕ್ಕೆ ಹಾಗೂ ದ್ವೇಷವನ್ನು ಉಂಟುಮಾಡುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ನಿಂದಿಸಿದ್ದಾನೆ” ಎಂದು ಆರೋಪಿಸಿ ಸುಂಕದಕಟ್ಟೆಯ ನಿವಾಸಿ, ಸಾಮಾಜಿಕ ಕಾರ್ಯಕರ್ತ ನವೀನ್ ಕುಮಾರ್ ದೂರು ನೀಡಿದ್ದಾರೆ.
ದಿನಾಂಕ 17/02/2025 ರಂದು ಸಂಜೆ 07-00 ಗಂಟೆ ಸಮಯದಲ್ಲಿ ನಾನು ಮೊಬೈಲ್ ನೋಡುತ್ತಿರುವಾಗ ವಾಟ್ಸ್ ಆಫ್ ಗ್ರೂಪ್‌ನಲ್ಲಿ ನನ್ನ ಸ್ನೇಹಿತರು ಒಂದು ವಿಡಿಯೋ ಕಳಿಸಿದ್ದು, ಸದರಿ ವಿಡಿಯೋ ನೋಡಿದಾಗ ಅದರಲ್ಲಿರುವ ಪದ್ದು ಎಂಬ ವ್ಯಕ್ತಿ ಸಮುದಾಯದ ವ್ಯಕ್ತಿಗಳನ್ನು ಪ್ರಚೋದಿಸಿರುತ್ತಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಮಂತ್ರಿ ಜಿ.ಪರಮೇಶ್ವರ್ ರವರ ವಿರುದ್ಧ ಅವಾಚ್ಯವಾಗಿ ನಿಂದಿಸಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಕೋಮುಗಲಭೆ ಉಂಟುಮಾಡುವ ಪ್ರಯತ್ನ ನಡೆಸಿರುವ ಪದ್ಮನಾಭ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ನವೀನ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

“ಪದ್ಮನಾಭ ಅಲಿಯಾಸ್ ಪದ್ದು ಎಂಬ ವ್ಯಕ್ತಿ ಆರ್‌ಎಸ್‌ಎಸ್ ವಿಚಾರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದೇ ಈತನ ಕೆಲಸವಾಗಿದೆ. ಈ ಹುಡುಗನನ್ನು ಬಳಸಿಕೊಂಡು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡ ಆರ್‌ಎಸ್‌ಎಸ್ ಕೆಟ್ಟ ಪದಗಳಲ್ಲಿ ನಿಂದಿಸುತ್ತಿದೆ. ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟದ ಹಿಂದೆಯೂ ಆರ್‌ಎಸ್‌ಎಸ್ ಇದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಇಂತವರ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ದೂರು ನೀಡಿದ್ದೇನೆ” ಎಂದು ನವೀನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.