ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸ ಮತ್ತು ಬೆಂಗಳೂರಿನ ಕೋರಮಂಗಲದಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಶುಕ್ರವಾರ ಮುಂಜಾನೆ ಆತ್ಮಹತ್ಯಾ ಬಾಂಬ್ ದಾಳಿ ಬೆದರಿಕೆ ಬಂದಿದೆ. ದೌಡಿ ಶಂಕರ್ ಜಿವಾಲ್’ ಎಂದು ಗುರುತಿಸಿಕೊಂಡಿರುವ ವ್ಯಕ್ತಿಯ ಹೆಸರಲ್ಲಿ ಬೆದರಿಕೆ ಇಮೇಲ್ ಬಂದಿದೆ. ಮಧ್ಯಾಹ್ನ 3:15ರ ಹೊತ್ತಿಗೆ ಬಾಂಬ್ ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು.
ಇನ್ನು ಇಮೇಲ್‌ನಲ್ಲಿ ಈ ಯೋಜಿತ ದಾಳಿಯನ್ನು ‘ಪವಿತ್ರ ಘಟನೆ’ ಎಂದು ಉಲ್ಲೇಖಿಸಲಾಗಿದೆ. ವಿವಾದಾತ್ಮಕ ತಮಿಳು ಯೂಟ್ಯೂಬರ್ ಸವುಕ್ಕು ಶಂಕರ್ ಬಂಧನ ಮತ್ತು 26/11 ಭಯೋತ್ಪಾದಕ ಅಜ್ಮಲ್ ಕಸಬ್‌ನ ಮರಣದಂಡನೆ ವಿರುದ್ಧವಾಗಿ ಈ ದಾಳಿ ನಡೆಸಲಾಗುತ್ತದೆ ಎಂದೂ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ತಿರುಪತಿ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ
ಇಮೇಲ್ ಬಂದ ಕೆಲವೇ ಸಮಯದಲ್ಲಿ ಕೋರಮಂಗಲ ಪೊಲೀಸರು ಪಾಸ್‌ಪೋರ್ಟ್ ಕಚೇರಿ ಆವರಣದಲ್ಲಿ ಶೋಧ ನಡೆಸಿದ್ದಾರೆ. ಹಾಗೆಯೇ ಇದು ಹುಸಿ ಬೆದರಿಕೆ ಎಂದಿದ್ದಾರೆ. ಸದ್ಯ ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ಮತ್ತು ಕಳುಹಿಸಿದವರ ಗುರುತು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ಮುನ್ನೆಚ್ಚರಿಕೆಯಾಗಿ ಮುಖ್ಯಮಂತ್ರಿಯವರ ನಿವಾಸ ಮತ್ತು ಪಾಸ್‌ಪೋರ್ಟ್ ಕಚೇರಿಯ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾಂಬ್ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ. 2024ರ ಮಾರ್ಚ್‌ನಲ್ಲಿ ಸಿದ್ದರಾಮಯ್ಯ ಮತ್ತು ಇತರ ಇಬ್ಬರು ಸಂಪುಟ ಸಚಿವರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಇಡೀ ನಗರವೇ ಸ್ಫೋಟದಿಂದ ನಡುಗುತ್ತದೆ ಎಂದು ಸಂದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
