ರಾಜ್ಯದಲ್ಲಿ ಮತದಾರರು, ಸಾರ್ವಜನಿಕರು ತಳಮಟ್ಟದಲ್ಲಿ ಎದುರಿಸುತ್ತಿರುವ ಎಸ್ಐಆರ್ ತಾಂತ್ರಿಕ, ಆಡಳಿತಾತ್ಮಕ ಸಮಸ್ಯೆಗಳಿಗೆ ಲಿಖಿತ ರೂಪದ ಪರಿಹಾರ ಮತ್ತು ಮಾರ್ಗಸೂಚಿಗಳನ್ನು ನೀಡುವಂತೆ ಒತ್ತಾಯಿಸಿ ‘ಜಾಗೃತ ಕರ್ನಾಟಕ’ ಸಂಘಟನೆಯು ಜುಲೈ 18ರ ಶನಿವಾರದಂದು ಚುನಾವಣಾ ಆಯೋಗದ ಮುಖ್ಯ ಕಚೇರಿಗೆ ಮಹತ್ವದ ನಿಯೋಗವನ್ನು ಕೊಂಡೊಯ್ಯಲು ನಿರ್ಧರಿಸಿದೆ.
ಈ ಬಗ್ಗೆ ಸಂಘಟನೆಯ ಮುಖಂಡ ಮುತ್ತುರಾಜು ಮಾಹಿತಿ ನೀಡಿದ್ದು, “ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚು ತರಬೇತಿ ಶಿಬಿರಗಳನ್ನು ಆಯೋಜಿಸಿ, ಸುಮಾರು 200 ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್ಐಆರ್ ವಿಚಾರಕ್ಕೆ ಸಂಬಂಧಿಸಿದಂತೆ ಸಕ್ರಿಯವಾಗಿ ಸಂಘಟನೆ ಕೆಲಸ ಮಾಡಿದೆ. ಈ ಸುದೀರ್ಘ ಕಾರ್ಯಕ್ಷೇತ್ರದ ಅನುಭವದಲ್ಲಿ ತಳಮಟ್ಟದ ಲಕ್ಷಾಂತರ ಮತದಾರರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಸಂಘಟನೆಯು ನಿರಂತರವಾಗಿ ಚುನಾವಣಾ ಆಯೋಗದ ಗಮನಕ್ಕೆ ತರುತ್ತಲೇ ಬಂದಿದೆ. ಆದರೆ, ಚುನಾವಣಾ ಆಯೋಗದಿಂದ ಯಾವುದೇ ಉತ್ತರ ದೊರೆತಿಲ್ಲ” ಎಂದು ಆರೋಪಿಸಿದ್ದಾರೆ.
“ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸುವ BLOಗಳಿಗೆ ತಮಗೆ ಎದುರಾಗುತ್ತಿರುವ ಜಟಿಲ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕೆಂಬ ಎಂಬುದಕ್ಕೆ ಪೂರಕವಾದ ಸೂಕ್ತ ತರಬೇತಿಯೇ ದೊರೆತಿಲ್ಲ ಎಂಬ ಆತಂಕಕಾರಿ ವಿಷಯ ತಳಮಟ್ಟದ ಪರಿಶೀಲನೆಯ ವೇಳೆ ನಮ್ಮ ಗಮನಕ್ಕೆ ಬಂದಿದೆ. ಇಂತಹ ವಿಚಾರಗಳನ್ನು ಚರ್ಚಿಸಲು ತೆರಳಿದಾಗ, ಆಯೋಗದ ಅಧಿಕಾರಿಗಳು ಎಸ್ಐಆರ್ ವಿಚಾರದಲ್ಲಿ ಸೌಜನ್ಯದಿಂದ ಮಾತುಕತೆ ನಡೆಸುತ್ತಾರೆ. ಆದರೂ, ಸಾರ್ವಜನಿಕರು ಎದುರಿಸುತ್ತಿರುವ ಯಾವುದೇ ಗಂಭೀರ ಪ್ರಶ್ನೆಗಳಿಗೆ ಇದುವರೆಗೂ ಅವರು ಅಧಿಕೃತವಾಗಿ ಲಿಖಿತ ರೂಪದ ಉತ್ತರಗಳನ್ನು ನೀಡಿಲ್ಲ” ಎಂದು ದೂರಿದ್ದಾರೆ.
“ಸಮಸ್ಯೆಗಳನ್ನು ಪ್ರಸ್ತಾಪಿಸಿದಾಗಲೆಲ್ಲ ನಿರ್ದಿಷ್ಟ ಪ್ರಕರಣಗಳನ್ನು ಉದಾಹರಿಸುವಂತೆ ಚುನಾವಣಾ ಆಯೋಗದ ಅಧಿಕಾರಿಗಳು ಕೇಳುತ್ತಾರೆ. ಆದರೆ, ಅಂತಹ ನಿರ್ದಿಷ್ಟ ಪ್ರಕರಣಗಳನ್ನು ಮುಂದಿಟ್ಟಾಗಲೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಇದರ ನಡುವೆ, ತಳಮಟ್ಟದಲ್ಲಿ ಅಸಹಾಯಕರಾಗಿ ಕೆಲಸ ಮಾಡುತ್ತಿರುವ ಬಿಎಲ್ಒಗಳ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ಅನಗತ್ಯವಾಗಿ ಇಲಾಖೆಯ ಸಂಕಷ್ಟಕ್ಕೆ ಸಿಲುಕಬಹುದು ಎನ್ನುವ ನೈತಿಕ ಸಂಕಟವೂ ನಮ್ಮನ್ನು ಕಾಡುತ್ತಿದೆ” ಎಂದು ಮುತ್ತುರಾಜ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
“ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ಲಿಖಿತ ಉತ್ತರವೇ ಏಕೈಕ ಮಾರ್ಗವಾಗಿದೆ. ಆಯೋಗವು ಅಧಿಕೃತವಾಗಿ ಲಿಖಿತ ಉತ್ತರ ನೀಡಿದರೆ, ಅದು ರಾಜ್ಯದ ಎಲ್ಲ ಬಿಎಲ್ಒ ಮತ್ತು ಇಆರ್ಒ ಅಧಿಕಾರಿಗಳಿಗೆ ಭವಿಷ್ಯದಲ್ಲಿ ಸೂಕ್ತ ಮಾರ್ಗದರ್ಶಿಯಾಗುತ್ತದೆ ಎಂಬುದು ಸಂಘಟನೆಯ ಸ್ಪಷ್ಟ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ, ಜುಲೈ 18ರ ಶನಿವಾರ ಬೆಳಿಗ್ಗೆ 11.30ಕ್ಕೆ ಜಾಗೃತ ಕರ್ನಾಟಕದ ಪದಾಧಿಕಾರಿಗಳ ನಿಯೋಗವು ಬೆಂಗಳೂರಿನಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ತೆರಳಿ ಮನವಿ ಸಲ್ಲಿಸಲಿದೆ” ಎಂದು ಮಾಹಿತಿ ನೀಡಿದ್ದಾರೆ.



