ರಾಜ್ಯದಲ್ಲಿ ಮಳೆ ಅಭಾವದಿಂದ ಸೃಷ್ಟಿಯಾಗಿರುವ ಬರ ಪರಿಸ್ಥಿತಿಯನ್ನು ʻರಾಷ್ಟ್ರೀಯ ವಿಪತ್ತುʼ ಎಂದು ಘೋಷಿಸಿ ಆರ್ಥಿಕ ನೆರವು ನೀಡುವಂತೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ನೀರಿನ ಮೂಲಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಜಲಾಶಯಗಳು ಬರಿದಾಗಿದ್ದು, ಸಂಗ್ರಹವಾಗಿರುವ ನೀರನ್ನು ಕುಡಿಯಲು ಮಾತ್ರ ಬಳಸುವಂತೆ ಸರ್ಕಾರವು ರೈತರಿಗೆ ಹಾಗೂ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಜೂನ್‌ನಲ್ಲಿ ಶೇ. 42ರಷ್ಟು ಮತ್ತು ಜುಲೈನಲ್ಲಿ ಶೇ. 34ರಷ್ಟು ಮಳೆ ಕೊರತೆ ಉಂಟಾಗಿದ್ದು, ರಾಜ್ಯದ 157 ತಾಲೂಕುಗಳು ಮಳೆ ಅಭಾವದಿಂದ ಸಮಸ್ಯೆಗೆ ಸಿಲುಕಿವೆ. 14 ತಾಲೂಕುಗಳು ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿವೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಚಿವ ಪರಮೇಶ್ವರ್, “ರಾಜ್ಯದಲ್ಲಿ ಮಳೆ ಕೊರತೆಯಿಂದ ಬೆಳೆಗಳಿಗೆ ಭಾರೀ ಹಾನಿಯಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಕೃಷಿ ಹಾಗೂ ಗ್ರಾಮೀಣ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಗೆ ವಿಶೇಷ ನೆರವು ಕೋರಿ ಪತ್ರ ಬರೆಯಲಾಗಿದೆ” ಎಂದು ತಿಳಿಸಿದ್ದಾರೆ.
ಬಿತ್ತನೆ ಅವಧಿಯಲ್ಲಿ ತಲೆದೋರಿದ ಮಳೆ ಕೊರತೆಯನ್ನು ಬರ ಘೋಷಣೆಯ ಮಾನದಂಡವಾಗಿ ಪರಿಗಣಿಸಬೇಕು. ಋತುಮಾನ ಆಧಾರಿತ ಮಳೆ ಪ್ರಮಾಣವನ್ನು ಮಾತ್ರ ಆಧರಿಸದೆ, ಮಳೆ ಕೊರತೆಯನ್ನೂ ಪರಿಗಣನೆಗೆ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಬೆಳೆ ಬಿತ್ತನೆ ಅವಧಿ ಪೂರ್ಣಗೊಳ್ಳುವವರೆಗೂ ಕಾಯುವ ಬದಲು, ಆರಂಭಿಕ ಹಂತದಲ್ಲೇ ರಾಜ್ಯ ಸರ್ಕಾರಗಳು ಬರ ಪರಿಸ್ಥಿತಿ ಘೋಷಿಸುವ ಅವಕಾಶ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.




