ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಜನರು ಮತ್ತು ಬಿಎಲ್ಒಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಲಿಖಿತ ಸ್ಪಷ್ಟನೆ ನೀಡುವಂತೆ ಚುನಾವಣಾ ಆಯೋಗದ ಕಚೇರಿಗೆ ಮನವಿ ಸಲ್ಲಿಸಲು ತೆರಳಿದ್ದ ‘ಜಾಗೃತ ಕರ್ನಾಟಕ’ದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಂತಿಯುತವಾಗಿ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸುವುದಕ್ಕೂ ಅವಕಾಶ ನೀಡದೆ ಮುಖಂಡರನ್ನು ತಡೆದಿರುವ ಕ್ರಮಕ್ಕೆ ಜಾಗೃತ ಕರ್ನಾಟಕ ಸಂಘಟನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳನ್ನು ನಡೆಸಿರುವ ಜಾಗೃತ ಕರ್ನಾಟಕ, ಸುಮಾರು 200 ವಿಧಾನಸಭಾ ಕ್ಷೇತ್ರಗಳಲ್ಲಿ SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ಜನರೊಂದಿಗೆ ಕೆಲಸ ಮಾಡಿದೆ. ತಳಮಟ್ಟದಲ್ಲಿ ಮತದಾರರು ಅನುಭವಿಸುತ್ತಿರುವ ಸಮಸ್ಯೆಗಳು, ದಾಖಲೆಗಳ ಗೊಂದಲ, ಅರ್ಹ ಮತದಾರರ ಹೆಸರು ಕೈತಪ್ಪುವ ಆತಂಕ ಹಾಗೂ ಬಿಎಲ್ಒಗಳಿಗೆ ಸಮರ್ಪಕ ಮಾರ್ಗದರ್ಶನ ಸಿಗದಿರುವುದನ್ನು ಗಮನಿಸಿರುವ ಸಂಘಟನೆ, ಈ ಬಗ್ಗೆ ನಿರಂತರವಾಗಿ ಚುನಾವಣಾ ಆಯೋಗದ ಗಮನಕ್ಕೆ ತಂದಿದೆ. ಆದರೂ, ಆಯೋಗದಿಂದ ಯಾವುದೇ ಉತ್ತರ ಬಂದಿರಲಿಲ್ಲ ಎಂದು ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಶನಿವಾರ, ಚುನಾವಣಾ ಆಯೋಗದ ಕಚೇರಿಗೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಲು ಜಾಗೃತ ಕರ್ನಾಟಕ ನಿರ್ಧರಿಸಿತ್ತು. “ಉತ್ತರ ಬೇಕಿರುವುದು ನಮಗಷ್ಟೇ ಅಲ್ಲ; ಸಾವಿರಾರು ಬಿಎಲ್ಒಗಳಿಗೆ ಮತ್ತು ಲಕ್ಷಾಂತರ ಮತದಾರರಿಗೆ” ಎಂಬ ಸಂದೇಶದೊಂದಿಗೆ ನಿಯೋಗವು ಆಯೋಗದ ಅಧಿಕಾರಿಗಳನ್ನು ಭೇಟಿಯಾಗಲು ಮುಂದಾಗಿತ್ತು. ಆದರೆ, ಮನವಿ ಸಲ್ಲಿಸುವ ಮುನ್ನವೇ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ಆಯೋಗದ ಮುಂದೆ ಪ್ರಶ್ನೆಗಳನ್ನು ಮಂಡಿಸಲು ಅವಕಾಶ ನೀಡಲಿಲ್ಲ ಎಂದು ಸಂಘಟನೆ ಹೇಳಿದೆ.
“ಲಕ್ಷಾಂತರ ಜನರ ಮತದಾನದ ಹಕ್ಕನ್ನು ಬಾಧಿಸುವ ಪ್ರಶ್ನೆಗಳಿಗೆ ಲಿಖಿತ ಉತ್ತರ ಏಕೆ ನೀಡುತ್ತಿಲ್ಲ?” ಎಂದು ಜಾಗೃತ ಕರ್ನಾಟಕ ಆರೋಪಿಸಿದೆ. “ಅಧಿಕಾರಿಗಳ ಮೌಖಿಕ ಉತ್ತರಗಳು ರಾಜ್ಯದ ಎಲ್ಲ ಬಿಎಲ್ಒಗಳು ಮತ್ತು ಚುನಾವಣಾ ನೋಂದಣಾಧಿಕಾರಿಗಳಿಗೆ ತಲುಪುವುದಿಲ್ಲ. ಆದರೆ, ಆಯೋಗವು ಲಿಖಿತ ಸ್ಪಷ್ಟನೆ ನೀಡಿದರೆ, ಅದು ರಾಜ್ಯದಾದ್ಯಂತ ಮಾರ್ಗಸೂಚಿಯಾಗಿ ಬಳಕೆಯಾಗುತ್ತದೆ. ಅರ್ಹ ಮತದಾರರು ದಾಖಲೆ ಅಥವಾ ತಾಂತ್ರಿಕ ಗೊಂದಲಗಳಿಂದ ಮತದಾರರ ಪಟ್ಟಿಯಿಂದ ಹೊರಗುಳಿಯುವುದನ್ನು ತಡೆಯಲು ಇದು ಅಗತ್ಯ” ಎಂದು ಸಂಘಟನೆ ಪ್ರತಿಪಾದಿಸಿದೆ.
“SIR ಪ್ರಕ್ರಿಯೆಯಲ್ಲಿನ ಸಮಸ್ಯೆಗಳಿಗೆ ಉತ್ತರ ಕೇಳುವವರನ್ನು ತಡೆಯುವುದಕ್ಕಿಂತ, ಆಯೋಗವು ಸಾರ್ವಜನಿಕವಾಗಿ ಮತ್ತು ಲಿಖಿತವಾಗಿ ಸ್ಪಷ್ಟನೆ ನೀಡಬೇಕು. ಮನವಿ ಸ್ವೀಕರಿಸಿ ಸಂವಾದ ನಡೆಸಬೇಕಾದ ಸಾಂವಿಧಾನಿಕ ಸಂಸ್ಥೆಯು ಪ್ರಶ್ನೆಗಳನ್ನು ಎದುರಿಸಲು ಹಿಂದೇಟು ಹಾಕುತ್ತಿರುವುದೇಕೆ. ರಾಜ್ಯದ ಲಕ್ಷಾಂತರ ಅರ್ಹ ಮತದಾರರು ಹೊರಗುಳಿದರೆ, ಅದಕ್ಕೆ ಚುನಾವಣಾ ಆಯೋಗವೇ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ” ಎಂದು ಸಂಘಟನೆ ಹೇಳಿದೆ.




