ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಹಕ್ಕಿಪಿಕ್ಕಿ ಸಮುದಾಯದ ಮಹಿಳೆಯೊಬ್ಬರು ತನ್ನ 20 ವರ್ಷದ ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ನಲ್ಲಿ ಹಣಕ್ಕಾಗಿ ಮಾರಾಟ ಮಾಡಿರುವುದಾಗಿ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಆಕೆಯ ಮಗಳನ್ನು ರಕ್ಷಿಸಿದ್ದಾರೆ.
ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ನಾಯಕರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಎಸ್ಪಿ ಕಚೇರಿಗೆ ಲಿಖಿತ ದೂರು ಸಲ್ಲಿಸಿದ್ದರು. ಈ ದೂರಿನನ್ವಯ ಚಿಕ್ಕಮಗಳೂರು ಮಹಿಳಾ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.
“ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರಕ್ಷಿಸಲ್ಪಟ್ಟ ಯುವತಿ ಎರಡು ಅಥವಾ ಮೂರು ದಿನಗಳಲ್ಲಿ ಭಾರತಕ್ಕೆ ಮರಳುವ ನಿರೀಕ್ಷೆಯಿದೆ. ಬಳಿಕ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆಯನ್ನು ದಾಖಲಿಸಲಾಗುವುದು” ಎಂದು ತಿಳಿಸಿದ್ದಾರೆ.
“ಯುವತಿ ರಕ್ಷಿಸಲ್ಪಡುವ ಮೊದಲು, ʼತನಗೆ ಚಿತ್ರಹಿಂಸೆ ನೀಡಲಾಗುತ್ತಿದ್ದು, ನನ್ನ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆʼ ಎಂದು ಆರೋಪಿಸಿ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾಳೆ. ಈ ವೀಡಿಯೊಗಳನ್ನು ಆಕೆಯ ಕುಟುಂಬಕ್ಕೆ ಕಳುಹಿಸಲಾಯಿಗಿತ್ತು. ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ” ಎಂದು ಎಸ್ಪಿ ಹೇಳಿದ್ದಾರೆ.
“ಆರೋಪಿತ ಕುಟುಂಬವು ಸಾಂಪ್ರದಾಯಿಕ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ಆಗಾಗ್ಗೆ ಆಫ್ರಿಕನ್ ದೇಶಗಳಿಗೆ ಪ್ರಯಾಣಿಸುತ್ತಿದ್ದು, ತಮ್ಮ ಮಗಳನ್ನು ಕರೆದುಕೊಂಡು ಹೋಗುತ್ತಿತ್ತು. ಅಂತಹ ಒಂದು ಭೇಟಿಯ ಸಮಯದಲ್ಲಿ, ಮಹಿಳೆ ಹಣಕ್ಕಾಗಿ ತನ್ನ ಮಗಳನ್ನು ಸೆನೆಗಲ್ನ ಒಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾಳೆ” ಎಂದು ಹಕ್ಕಿಪಿಕ್ಕಿ ವೇದಿಕೆ ಆರೋಪಿಸಿದೆ.
ಇದನ್ನೂ ಓದಿದ್ದೀರಾ? SIR ಗೊಂದಲ | ಉತ್ತರಿಸಲು ಹೆದರುತ್ತಿದೆ ಚು. ಆಯೋಗ; ಲಿಖಿತ ಉತ್ತರ ಕೇಳಿದ ‘ಜಾಗೃತ ಕರ್ನಾಟಕ’ ಮುಖಂಡರು ಪೊಲೀಸ್ ವಶಕ್ಕೆ!
“ಆಕೆಯ ಪೋಷಕರು ಮಗಳನ್ನು ಬಿಟ್ಟು, ಚಿಕ್ಕಮಗಳೂರಿಗೆ ಹಿಂದಿರುಗಿದ ಬಳಿಕ ಸೆನೆಗಲ್ನಲ್ಲಿ ಯುವತಿಯನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಗಿದೆ. ಭಾರತೀಯ ರಾಯಭಾರ ಕಚೇರಿಯ ಸಹಾಯದಿಂದ ಸೆನೆಗಲ್ನ ಸ್ಥಳೀಯ ಪೊಲೀಸರು ಯುವತಿಯನ್ನು ರಕ್ಷಿಸಿದ್ದಾರೆ. ಆಕೆ ಪ್ರಸ್ತುತ ಸೆನೆಗಲ್ನಲ್ಲಿದ್ದು, ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಭಾರತಕ್ಕೆ ಮರಳುವ ನಿರೀಕ್ಷೆಯಿದೆ” ಎಂದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟು ಸಂಘಟನೆ ತಿಳಿಸಿದೆ.
ಸಂಘಟನೆ ಅಧ್ಯಕ್ಷ ಆರ್ ಪುನೀತ್ ಕುಮಾರ್ ಮಾತನಾಡಿ, “ರಕ್ಷಿಸಲ್ಪಟ್ಟ ಯುವತಿಯನ್ನು ಭಾರತಕ್ಕೆ ಮರಳಿ ಕರೆತರಲು ಸಂಘಟನೆಯು ಪ್ರಯತ್ನ ನಡೆಸುತ್ತಿದೆ” ಎಂದಿದ್ದಾರೆ.





