ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ ಗೋವಿಂದರಾಜ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತಕ್ಷಣವೇ ಬಿಡುಗಡೆ ಮಾಡಲಾಗಿದ್ದು, ಈ ಬಗ್ಗೆ ಕೂಡಲೇ ಆದೇಶ ಹೊರಡಿಸಲು ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದರು. ಸಿಎಂ ಸೂಚನೆ ಮೇರೆಗೆ ಕೆ ಗೋವಿಂದರಾಜ್ ಅವರನ್ನು ಅವರ ಹುದ್ದೆಯಿಂದ ವಜಾಮಾಡಲಾಗಿದೆ.
ಕೆ ಗೋವಿಂದರಾಜ್ ಅವರು ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗಲೂ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿದ್ದರು.
ಗೋವಿಂದರಾಜ್ ಅವರು 2023 ರಿಂದ 2027 ರವರೆಗೆ ದಕ್ಷಿಣ ಏಷ್ಯಾ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್‌ನ ನಾಮನಿರ್ದೇಶಿತರಾಗಿ FIBA ಏಷ್ಯಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ಗೋವಿಂದರಾಜ್ ಅವರು 2023 ರಿಂದ 2024 ರವರೆಗೆ ಭಾರತೀಯ ಬ್ಯಾಸ್ಕೆಟ್‌ಬಾಲ್ ಫೆಡರೇಶನ್‌ನ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು. ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್‌ಗೆ ಅವರು ಕ್ರೀಡಾ ಆಡಳಿತಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್‌ನ ಕಾರ್ಯದರ್ಶಿ ಮತ್ತು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಸದಸ್ಯರಾಗಿಯೂ ಸೇರಿದ್ದರು.
ಆರ್‌ಸಿಬಿ ಚಾಂಪಿಯನ್ ಆಗುತ್ತಿದ್ದಂತೆ ಮರುಕ್ಷಣೆವೇ ಕಾರ್ಯಕ್ರಮ ಸರ್ಕಾರದಿಂದ ಆಯೋಜನೆಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ಕೊಟ್ಟಿದ್ದು ಗೋವಿಂದರಾಜ್ ಅವರೇ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆದಿಯಾಗಿ ಬಹುತೇಕ ನಾಯಕರು ಆರೋಪಿಸಿದ್ದರು.
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದಿಂದ 11 ಮಂದಿ ಬಲಿಯಾಗಿದ್ದು, 47 ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ, ಬೆಂಗಳೂರು ಪೊಲೀಸ್ ಕಮಿಷನರ್ ಸೇರಿದಂತೆ 4 ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕೆ ಗೋವಿಂದರಾಜ್ ಅವರನ್ನು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತೆಗೆಯಲಾಗಿದೆ.

