ರಾಜ್ಯದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿತ್ಯವೂ ಜನರಲ್ಲಿ ಆತಂಕ ಮೂಡಿಸುತ್ತಿದೆ. ಇದರ ಬೆನ್ನಲ್ಲೇ ರಾಜ್ಯ ಕಣ್ಗಾವಲು ಘಟಕ ಸಾಂಕ್ರಾಮಿಕ ರೋಗ ಆಯೋಗವು ಆಘಾತಕಾರಿ ವರದಿ ನೀಡಿದೆ.
ಈ ವರದಿಯ ಪ್ರಕಾರ 2025ರ ಜನವರಿಯಿಂದ ಆಗಸ್ಟ್‌ವರೆಗೆ ಕರ್ನಾಟಕದಲ್ಲಿ 2.86 ಲಕ್ಷ ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. 26 ಮಂದಿ ರೇಬಿಸ್‌ನಿಂದಾಗಿ ಸಾವನ್ನಪ್ಪಿದ ಘಟನೆಗಳು ನಡೆದಿವೆ. ಆಗಸ್ಟ್ 4ರಿಂದ 10ರವರೆಗೆ 5652 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಆದರೆ ಈ ಅವಧಿಯಲ್ಲಿ ರೇಬಿಸ್‌ಗೆ ತುತ್ತಾಗಿ ಮೃತಪಟ್ಟ ಯಾವುದೇ ದೂರುಗಳು ದಾಖಲಾಗಿಲ್ಲ.
ಆರೋಗ್ಯ ಅಧಿಕಾರಿಗಳು, ರೇಬಿಸ್ ಪತ್ತೆ ಮತ್ತು ಸಾಂಕ್ರಾಮಿಕ ರೋಗ ತಡೆಗೆ ಸಕಾಲಿಕ ಚಿಕಿತ್ಸೆ, ಲಸಿಕೆ ಜವವ್ದಾರಿಯುತ ಶ್ವಾನ ಮಾಲೀಕತ್ವದ ಬಗ್ಗೆ ಜಾಗೃತಿ ಮತ್ತು ಅರಿವು ಕಾರ್ಯಕ್ರಮ ನಡೆಸುತ್ತಿದ್ದಾರೆ. ಆದರೂ ಕೂಡಾ ಬೀದಿನಾಯಿಗಳ ಹಾವಳಿ ಗಣನೀಯ ಕಡಿಮೆಯಾಗಿಲ್ಲ.
ನಾಲ್ಕು ತಿಂಗಳ ಹಿಂದೆ ಮನೆ ಮುಂದೆ ಆಟವಾಡುತ್ತಿದ್ದಾಗ ಬಾಲಕಿಯ ಮೇಲೆ ಬೀದಿನಾಯಿ ದಾಳಿ ನಡೆಸಿದ್ದು, ಪರಿಣಾಮವಾಗಿ ಮಗುವಿನ ಮುಖ ಮತ್ತು ದೇಹಕ್ಕೆ ತೀವ್ರ ಗಾಯಗಳಾಗಿತ್ತು. ಬಳಿಕ ದೀರ್ಘ ಕಾಲದ ಚಿಕಿತ್ಸೆ ನಡೆಸಲಾಗಿತ್ತು. ಆದರೆ ರೇಬಿಸ್ ತಗುಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ನಾಲ್ಕು ವರ್ಷದ ಬಾಲಕಿ ಖದಿರಾ ಭಾನು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಶಾಲೆಗೆ ಫಲಕ, ಮೈದಾನಕ್ಕೆ 25 ಟ್ರ್ಯಾಕ್ಟರ್ ಮಣ್ಣು ತುಂಬಿಸಿದ ದಾನಿ: ಶಿಕ್ಷಕರಿಂದ ಮೆಚ್ಚುಗೆ
ಇತ್ತೀಚೆಗಷ್ಟೇ ಕೆಂಗೇರಿಯಲ್ಲಿನ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳಿಬ್ಬರ ಮೇಲೆ ಬೀದಿನಾಯಿ ದಾಳಿ ನಡೆಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಳಿಗೊಳಗಾದ ವಿದ್ಯಾರ್ಥಿನಿ ಹಾವೇರಿಯ ಸುಜನ್ಯಾ ಜಿ ಜೆ ಮತ್ತು ತೆಲಂಗಾಣದ ರೇಗಾ ನಿಕ್ಷಿತಾ, ಡಾ ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್‌ನಲ್ಲಿ ಎಂಎಸ್‌ಸಿ ಅಧ್ಯಯನ ನಡೆಸುತ್ತಿದ್ದಾರೆ. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿಯರಿಬ್ಬರೂ ಸದ್ಯಕ್ಕೆ ಅಪಾಯದಿಂದ ಪಾರಾಗಿದ್ದಾರೆಂದು ವರದಿ ತಿಳಿಸಿದೆ.