ಮುಂದಿನ 7 ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಾತ್ರವಲ್ಲದೆ, ಜೋರು ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಲವು ಜಿಲ್ಲೆಗಳಿಗೆ ಎಚ್ಚರಿಕೆಯ ಸೂಚನೆಗಳನ್ನೂ ನೀಡಿದೆ
ಮಾನ್ಸೂನ್ ಮಾರುತಗಳು ಬೀಸುತ್ತಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಕಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಮಾತ್ರವಲ್ಲದೆ, ಅತಿ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯು ಪ್ರವಾಹಕ್ಕೂ ಕಾರಣವಾಗಬಹುದು ಎಂದು ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರ ಮತ್ತು ಶನಿವಾರ ಹೆಚ್ಚು ಮಳೆಯಾಗಿದ್ದು, ಶನಿವಾರದ ಬಳಿಕ ಮಳೆಯ ತೀವ್ರತೆ ಕಡಿಮೆಯಾಗಲಿದೆ. ಸಾಧಾರಣ ಮಳೆಯು 7 ದಿನಗಳವರೆಗೆ ಮುಂದುವರೆಯಲಿದೆ ಎಂದು ಇಲಾಖೆ ಹೇಳಿದೆ.
ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ಬೀದರ್, ಬಾಗಲಕೋಟೆ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಜುಲೈ 3 ಮತ್ತು 4 ರಂದು ಅತಿ ಹೆಚ್ಚು ಮಳೆಯಾಗಿದೆ. ಜಿಲ್ಲೆಗಳಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿ.ಮೀ. ಇರಲಿದೆ ಎಂದು ಇಲಾಖೆ ತಿಳಿಸಿದೆ.
ಈ ಲೇಖನ ಓದಿದ್ದೀರಾ?: ಬಿಹಾರದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ: ‘ಎನ್‌ಆರ್‌ಸಿ’ಗಿಂತಲೂ ಹೆಚ್ಚು ಅಪಾಯಕಾರಿ
ಅಂತೆಯೇ, ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಾಧಾರಣ ಮಳೆ ಬೀಳಲಿದೆ ಎಂದು ಇಲಾಖೆ ವಿವರಿಸಲಿದೆ.
ಪ್ರವಾಹ ಮತ್ತು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳು ಜಾಗರೂಕರಾಗಿರಲು ಮತ್ತು ಸ್ಥಳೀಯ ಆಡಳಿತಗಳ ಸಲಹೆಗಳನ್ನು ಅನುಸರಿಸಲು ಇಲಾಖೆಯು ಸೂಚಿಸಿದೆ.