ಮಂಗಳೂರು ನಗರದ ಬಜಪೆ ಕಿನ್ನಿಪದವು ಜನನಿಬಿಡ ಪ್ರದೇಶದಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳಿಂದ ಕೊಲೆಯಾದ ರೌಡಿ ಶೀಟರ್ ಸುಹಾಸ್ ಶೆಟ್ಟಿ ವಿರುದ್ಧ ಎರಡು ಕೊಲೆ, ದಲಿತ ದೌರ್ಜನ್ಯ ಸಹಿತ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ಆತನ ಮೇಲಿನ ಎಫ್‌ಐಎರ್ ವಿವರಗಳು ಹೇಳುತ್ತವೆ.
ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗ ಎಕ್ಕಾರು ಗ್ರಾಮದ ದೇವರ ಗುಡ್ಡೆ ಎಂಬಲ್ಲಿ 20 ವರ್ಷದ ಯುವಕ ಕೀರ್ತಿ ಎಂಬವರನ್ನು 2020ರಲ್ಲಿ ಕೊಲೆ ಮಾಡಲಾಗಿತ್ತು. ಇದರಲ್ಲಿ ಸುಹಾಸ್ ಶೆಟ್ಟಿ ಎರಡನೇ ಆರೋಪಿಯಾಗಿದ್ದನು. ಆನಂತರದಲ್ಲಿ ದೀಪೇಶ್, ಸುಹಾಸ್, ಗೌತಮ್, ಉಮಾನಾಥ, ಪ್ರಶಾಂತ್ ಮತ್ತು ಇತರರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 148, 323, 324, 504, 506, 307, 302, 149 ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಏನಿದು ಕೇಸ್?
ಕೀರ್ತಿ, ಮನೀಶ್ ಜೋಗಿ ಮತ್ತು ನಿತಿನ್ ಪೂಜಾರಿ ಅವರು ಈ ಪ್ರಕರಣದ ಸಂತ್ರಸ್ತರು. ಜೋಗಿ ಸಮುದಾಯದ ಮನೀಶ್ ಜೋಗಿಯವರು ನೀಡಿದ್ದ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು.
ಮನೀಶ್ ಜೋಗಿಯವರ ಸ್ನೇಹಿತನಾದ ಪ್ರಸಾದ್ ಎಂಬವರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಗಾಯಗೊಂಡಿದ್ದರು. ಜೊತೆಗೆ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಪ್ರಸಾದ್ ಅವರ ಬಗ್ಗೆ ಆರೋಪಿ ದೀಪೇಶ್ ಅಪಪ್ರಚಾರ ಮಾಡುತ್ತಿದ್ದನು. ಇದನ್ನು ತಿಳಿದ ಮನೀಶ್ ಜೋಗಿ, ನಿತಿನ್ ಪೂಜಾರಿ ಮತ್ತು ಕೀರ್ತಿ – ಈ ರೀತಿಯಲ್ಲಿ ಅಪಪ್ರಚಾರ ಮಾಡಬಾರದು ಎಂದು ದಿನಾಂಕ 31/05/2020ರ ಸಂಜೆ 19.30ರ ಸುಮಾರಿಗೆ ಫೋನ್ ಮುಖೇನ ದೀಪೇಶ್‌ಗೆ ವಿನಂತಿಸಿದ್ದರು. ಇಷ್ಟಕ್ಕೆ ರೊಚ್ಚಿಗೆದ್ದ ದೀಪೇಶ್ ತನ್ನ ಸ್ನೇಹಿತರಾದ ಸುಹಾಸ್, ಉಮನಾಥ್, ಪ್ರಶಾಂತ್, ಗೌತಮ್ ಮತ್ತು ಇನ್ನಿತರೊಂದಿಗೆ 4-5 ಬೈಕ್‌ಗಳಲ್ಲಿ ಅಂದು ಸಂಜೆ 7.45ರ ಸುಮಾರಿಗೆ ಮನೀಶ್ ಅವರನ್ನು ಹುಡುಕಿ ಬಂದಿದ್ದರು. ಮಂಗಳೂರು ತಾಲ್ಲೂಕು ಬಡಗ ಎಕ್ಕಾರು ಗ್ರಾಮದ ದೇವರಗುಡ್ಡೆ ಎಂಬಲ್ಲಿರುವ ನಿತಿನ್ ಪೂಜಾರಿ ಅವರ ಮನೆಯ ಬಳಿಗೆ ಈ ಗ್ಯಾಂಗ್ ತಲುಪಿತ್ತು.
ಅಲ್ಲಿಯೇ ಮನೀಶ್ ಜೋಗಿ, ಕೀರ್ತಿ, ನಿತಿನ್ ಪೂಜಾರಿ ಇದ್ದರು. ಈ ಮೂವರನ್ನು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಮರದ ದೊಣ್ಣೆ, ಬಿಯರ್ ಬಾಟಲ್ ಮತ್ತು ಚೂರಿಯಿಂದ ಹಲ್ಲೆ ನಡೆಸಿದರು. ಪರಿಣಾಮವಾಗಿ ಮನೀಶ್ ಜೋಗಿ ಮತ್ತು ನಿತಿನ್ ಪೂಜಾರಿ ಗಾಯಗೊಂಡಿದ್ದರು. ಗಂಭೀರ ಸ್ವರೂಪದ ಗಾಯಾಳುವಾಗಿದ್ದ ಕೀರ್ತಿಯವರು ಮೃತಪಟ್ಟಿದ್ದರು.
ಇದನ್ನೂ ಓದಿರಿ: ಸುಹಾಸ್ ಹತ್ಯೆ | ಎಸ್‍ಡಿಪಿಐ, ಪಿಎಫ್‍ಐ ಮೇಲೆ ಸರ್ಕಾರದ ಪ್ರೀತಿ, ದುಷ್ಟರಿಗೆ ಆನೆ ಬಲ: ವಿಜಯೇಂದ್ರ, ಅಶೋಕ್ ಟೀಕೆ
ಸುಹಾಸ್ ಶೆಟ್ಟಿ 2022ರಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್‌ನಲ್ಲಿ ನಡೆದ ಕೃಷ್ಣಾಪುರ ನಿವಾಸಿ ಫಾಝಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಜನನಿಬಿಡ ಸುರತ್ಕಲ್ ಪೇಟೆಯಲ್ಲಿದ್ದ ಫಾಝಿಲ್‌ನನ್ನು ರಾತ್ರಿ 8:30ರ ಸುಮಾರಿಗೆ ಸುಹಾಸ್ ಶೆಟ್ಟಿ ತಂಡ ತಲವಾರು ದಾಳಿ ನಡೆಸಿ ಹತ್ಯೆ ಮಾಡಿತ್ತು. ಈ ಪ್ರಕರಣ ವಿಚಾರಣಾ ಹಂತದಲ್ಲಿದೆ.
ಬಂಟ್ವಾಳ ತಾಲೂಕಿನ ಕಾರಿಂಜೆ ನಿವಾಸಿಯಾದ ಸುಹಾಸ್ ಶೆಟ್ಟಿ ಎರಡು ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ಶೀಟರ್ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: ಉಡುಪಿ | ಸುಹಾಸ್ ಶೆಟ್ಟಿ ಹತ್ಯೆ; ಆಟೋ ರಿಕ್ಷಾ ಚಾಲಕನ ಕೊಲೆ ಯತ್ನ: ಇಬ್ಬರು ಆರೋಪಿಗಳ ಬಂಧನ
ಸುಹಾಸ್ ಶೆಟ್ಟಿ ಮೇಲಿರುವ ಪ್ರಕರಣಗಳ ವಿವರ:
1) ಬಜ್ಪೆ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಐಪಿಸಿ ಸೆಕ್ಷನ್ 143, 47, 323, 447, 504, 506, 149ರ ಅಡಿ ದಾಖಲಾಗಿದ್ದು ಪ್ರಕರಣದಲ್ಲಿ ಆತ ಖುಲಾಸೆಯಾಗಿದ್ದಾನೆ.
2) ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಐಪಿಸಿ 160ರಡಿ ದಾಖಲಾದ ಪ್ರಕರಣದಲ್ಲಿ ಆತನಿಗೆ ಶಿಕ್ಷೆಯಾಗಿದೆ.
3) ಬಜ್ಪೆ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಐಪಿಸಿ 143, 147, 148, 323, 324, 504, 506ರಡಿ ದಾಖಲಾದ ಪ್ರಕರಣದಲ್ಲಿ ಆತ ಖುಲಾಸೆಯಾಗಿದ್ದಾನೆ.
4) ಬಜ್ಪೆ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಐಪಿಸಿ 143, 147, 148, 323, 324, 504, 506, 307, 302, 149ರಡಿ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣವು ಈಗಾಗಲೇ ವಿಚಾರಣಾ ಹಂತದಲ್ಲಿದೆ.
5) 2022ರಲ್ಲಿ ಸುರತ್ಕಲ್ ಠಾಣೆಯಲ್ಲಿ ಐಪಿಸಿ 143, 147, 148, 326, 302, 504, 506, 120(B) 201, 202, 204, 212, 118, 149ರಡಿ ದಾಖಲಾದ ಫಾಝಿಲ್ ಕೊಲೆ ಪ್ರಕರಣವು ವಿಚಾರಣಾ ಹಂತದಲ್ಲಿದೆ.
ದಲಿತ ಯುವಕ ಕೀರ್ತಿ ಮತ್ತು ಮುಸ್ಲಿಂ ಯುವಕ ಫಾಝಿಲ್ ಕೊಲೆ ಸಹಿತ ಹಲವು ಪ್ರಕರಣಗಳ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ ಹತ್ಯೆಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ಹಿಂದುತ್ವ ಸಂಘಟನೆಗಳು ಕರೆ ನೀಡಿವೆ. ಬಿಜೆಪಿ ನಾಯಕರು ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿದ್ದಾರೆ.