ಸರ್ಕಾರಿ ಅಧಿಕಾರಿಗಳು ಯಾವುದೇ ಒತ್ತಡಗಳಿಗೆ ಮಣಿದು ಕಾನೂನುಬಾಹಿರ ಕೆಲಸಗಳಿಗೆ ಮುಂದಾಗಬಾರದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಪೊಲೀಸ್ ಠಾಣೆ ಹಾಗೂ ತಾಲ್ಲೂಕು ಮಟ್ಟದಲ್ಲಿ ರೌಡಿಶೀಟರ್‌ಗಳ ಪಟ್ಟಿಯನ್ನು ಕಡ್ಡಾಯವಾಗಿ ಸಿದ್ಧಪಡಿಸಿ, ರೌಡಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟಹಾಕಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದ ಸಭಾಂಗಣದಲ್ಲಿ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲೇ ವಾಸ್ತವ್ಯ ಹೂಡಬೇಕು. ಪ್ರತಿಯೊಬ್ಬರೂ ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಕಚೇರಿಯಲ್ಲಿ ಹಾಜರಿದ್ದು ಸಾರ್ವಜನಿಕರಿಗೆ ಲಭ್ಯವಿರಬೇಕು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಅವರು ಸೂಚಿಸಿದರು. ಅಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಬೇಕು, ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೆ ನೇರವಾಗಿ ತಮ್ಮ ಅಥವಾ ಸಚಿವರ ಗಮನಕ್ಕೆ ತರಬೇಕು. ಆದರೆ, ಸಕಾರಾತ್ಮಕ ಧೋರಣೆ ಮೂಲಕ ಜನರ ಸಮಸ್ಯೆಗಳನ್ನು ಬಗೆಹರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ತಾಲ್ಲೂಕು ಮಟ್ಟಕ್ಕೆ ತೆರಳಿ ಜನರ ಅಹವಾಲು ಆಲಿಸಿ ಪರಿಹರಿಸಬೇಕು ಹಾಗೂ ಅದರ ವರದಿಯನ್ನು ನೇರವಾಗಿ ತಮ್ಮ ಗಮನಕ್ಕೆ ತರಬೇಕು. ಜೊತೆಗೆ ದೆಹಲಿಯಲ್ಲಿರುವ ರಾಜ್ಯದ ಅಧಿಕಾರಿಗಳು ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಗರಿಷ್ಠ ಪ್ರಯತ್ನ ಮಾಡಬೇಕು ಎಂದು ತಾಕೀತು ಮಾಡಿದರು.
ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಿಕೊಂಡು ರೌಡಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕಬೇಕು ಎಂದು ಸಿಎಂ ಸೂಚಿಸಿದರು. ಇದೇ ವೇಳೆ ಶಿಕ್ಷಣ ಮತ್ತು ಯುವ ಸಬಲೀಕರಣಕ್ಕೆ ಒತ್ತು ನೀಡಿದ ಅವರು, ಇದುವರೆಗೆ ವಿದ್ಯಾರ್ಥಿನಿಯರಿಗೆ ಮಾತ್ರ ಸೀಮಿತವಾಗಿದ್ದ ಉಚಿತ ಬಸ್ ಪಾಸ್ ಸೌಲಭ್ಯವನ್ನು ಎಲ್ಲಾ ವಿದ್ಯಾರ್ಥಿಗಳಿಗೂ ವಿಸ್ತರಿಸುವ ನಿರ್ಣಯವನ್ನು ಶೀಘ್ರವೇ ಅನುಷ್ಠಾನಕ್ಕೆ ತರಲು ತಿಳಿಸಿದರು. ರಾಜ್ಯದಲ್ಲಿರುವ 50 ಸಾವಿರ ಶಿಕ್ಷಕರ ಕೊರತೆಯನ್ನು ನೀಗಿಸಲು ಹಂತ ಹಂತವಾಗಿ ನೇಮಕಾತಿ ಮಾಡಲಾಗುವುದು ಹಾಗೂ ಸಿಎಸ್ಆರ್ ಅನುದಾನ ಬಳಸಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕ್ರಮವಹಿಸಲಾಗುವುದು. ಜೊತೆಗೆ, ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿ ಮಾಡಲು ಇಲಾಖೆಗಳು ತಕ್ಷಣವೇ ವೇಳಾಪಟ್ಟಿ ಸಿದ್ಧಪಡಿಸಬೇಕು ಎಂದು ನಿರ್ದೇಶನ ನೀಡಿದರು.
ಇದನ್ನು ಓದಿದ್ದೀರಾ? ದಬ್ಬಾಳಿಕೆಗೆ ಬೆದರದ ಹೆಜ್ಜೆ: ವಿದೇಶದಲ್ಲಿ ಒಂದಾದ ಅಫ್ಘಾನ್ ಮಹಿಳಾ ಫುಟ್ಬಾಲ್ ತಂಡ
ಖಾಸಗಿ ವಲಯದ ಉದ್ಯೋಗಾವಕಾಶಗಳು ರಾಜ್ಯದ ಯುವಜನತೆಗೆ ದೊರೆಯುವಂತೆ ಮಾಡಲು ಹೊಸ ಉದ್ಯೋಗ ವಿನಿಮಯ ಕೇಂದ್ರ ಪ್ರಾರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ 10 ಸಾವಿರ ‘ಭಾರತ್ ಜೋಡೋ ಯುವ ಸಂಘ ಕ್ಲಬ್’ಗಳನ್ನು ಸ್ಥಾಪಿಸಲಾಗುವುದು. ಪ್ರತಿ ಕ್ಲಬ್‌ಗೆ ತಲಾ 10 ಲಕ್ಷ ರೂ.ಗಳಂತೆ ಒಟ್ಟು 1,000 ಕೋಟಿ ರೂ. ಅನುದಾನ ಒದಗಿಸಲು ನಿರ್ಧರಿಸಲಾಗಿದೆ. ಮತ್ತೊಂದೆಡೆ, ನಗರದತ್ತ ವಲಸೆ ತಪ್ಪಿಸಿ ಗ್ರಾಮೀಣ ಆರ್ಥಿಕತೆ ಹೆಚ್ಚಿಸಲು ಬಜೆಟ್‌ನ ಎಲ್ಲಾ ಅಂಶಗಳನ್ನು ಅನುಷ್ಠಾನಗೊಳಿಸುವುದು ಸರ್ಕಾರದ ಆದ್ಯತೆಯಾಗಿದೆ. 26 ಲಕ್ಷ ಐಟಿ ವೃತ್ತಿಪರರು ಹಾಗೂ 70 ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ಬೆಂಗಳೂರಿನತ್ತ ಇಡೀ ವಿಶ್ವವೇ ನೋಡುತ್ತಿದ್ದು, ನಗರದ ಪ್ರಗತಿಗೆ ಅಧಿಕಾರಿಗಳು ಆತ್ಮವಿಮರ್ಶೆ ಮಾಡಿಕೊಂಡು ಕೊಡುಗೆ ನೀಡಬೇಕು. ಅಲ್ಲದೆ, ಕರಾವಳಿ ಭಾಗದ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗಾಗಿ ಶೀಘ್ರದಲ್ಲೇ ಹೊಸ ಪ್ರವಾಸೋದ್ಯಮ ನೀತಿ ರಚಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್) ಕಾರ್ಯ ಈಗಾಗಲೇ ಆರಂಭವಾಗಿದ್ದು, ಎಲ್ಲಾ ಹಿರಿಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಜನರಿಗೆ ಅನುಕೂಲವಾಗಲು ಬೂತ್ ಮಟ್ಟದಲ್ಲಿ ‘ಸಹಾಯ ಡೆಸ್ಕ್’ ಪ್ರಾರಂಭಿಸಿ, ಅಗತ್ಯ ದಾಖಲೆಗಳನ್ನು ಪಡೆಯಲು ನೆರವು ನೀಡಬೇಕು. ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಒದಗಿಸುವುದು ಆಡಳಿತ ಯಂತ್ರದ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ವಿವರಿಸಿದರು.





