ಡಾ. ಜಿ. ಪರಮೇಶ್ವರ ಅವರ ಎರಡನೇ ಡಿಸಿಎಂ ಅವಧಿ ಕೇವಲ ವೈಯಕ್ತಿಕ ರಾಜಕೀಯ ಸಾಧನೆಯಲ್ಲ; ಅದು ತುಮಕೂರು ಜಿಲ್ಲೆಯ ಅಭಿವೃದ್ಧಿಯ ಪರೀಕ್ಷೆಯೂ ಹೌದು. ಅನುಭವ, ಅಧಿಕಾರ ಮತ್ತು ಸರ್ಕಾರದ ಬೆಂಬಲ ಎಂಬ ಮೂರು ಪ್ರಮುಖ ಶಕ್ತಿಗಳು ಅವರ ಕೈಯಲ್ಲಿವೆ. ಈ ಅವಕಾಶವನ್ನು ಜಿಲ್ಲೆಯ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಬಳಸಿದರೆ ತುಮಕೂರು ರಾಜ್ಯದ ಪ್ರಮುಖ ಅಭಿವೃದ್ಧಿ ಕೇಂದ್ರವಾಗಿ ಹೊರಹೊಮ್ಮಬಹುದು.
ರಾಜ್ಯ ರಾಜಕೀಯದಲ್ಲಿ ದೀರ್ಘಕಾಲದ ಅನುಭವ, ಪಕ್ಷ ಸಂಘಟನೆಯ ಸಾಮರ್ಥ್ಯ ಮತ್ತು ಆಡಳಿತಾತ್ಮಕ ಹಿನ್ನೆಲೆಯೊಂದಿಗೆ ಗುರುತಿಸಿಕೊಂಡಿರುವ ಡಾ. ಜಿ. ಪರಮೇಶ್ವರ ಮತ್ತೊಮ್ಮೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ತುಮಕೂರು ಜಿಲ್ಲೆಯ ರಾಜಕೀಯಕ್ಕೆ ವಿಶೇಷ ಮಹತ್ವ ತಂದಿದೆ. ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಪರಮೇಶ್ವರ ಅವರಿಗೆ ಡಿಸಿಎಂ ಸ್ಥಾನ ದೊರೆತಿರುವುದು ಕಾಂಗ್ರೆಸ್ ಪಕ್ಷದಲ್ಲಿ ಅವರ ಪ್ರಭಾವ ಮತ್ತು ಅನುಭವಕ್ಕೆ ದೊರೆತ ಮಾನ್ಯತೆಯಾಗಿದೆ.
1989ರಲ್ಲಿ ಮಧುಗಿರಿ ಕ್ಷೇತ್ರದಿಂದ ರಾಜಕೀಯ ಪ್ರವೇಶ ಮಾಡಿದ ಪರಮೇಶ್ವರ ಅವರು ಆರು ಬಾರಿ ಶಾಸಕರಾಗಿ, ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಸುಮಾರು ಎಂಟು ವರ್ಷ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಅವರು 2013ರ ಕಾಂಗ್ರೆಸ್ ವಿಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ವೀರಪ್ಪ ಮೊಯ್ಲಿ, ಎಸ್ ಎಂ ಕೃಷ್ಣ ಸೇರಿದಂತೆ ಹಲವು ಸರ್ಕಾರಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಅನುಭವ ಅವರಿಗಿದೆ. ರೇಷ್ಮೆ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಗೃಹ ಖಾತೆ ಸೇರಿದಂತೆ ಹಲವು ಇಲಾಖೆಗಳ ನಿರ್ವಹಣೆಯಿಂದ ಆಡಳಿತದಲ್ಲಿ ಪಕ್ವತೆ ಸಾಧಿಸಿದ್ದಾರೆ.
ತುಮಕೂರು ಜಿಲ್ಲೆಯ ಗೊಲ್ಲಹಳ್ಳಿಯ ಚಿತ್ರಕಲಾ ಶಿಕ್ಷಕ ಎಚ್ ಎಂ ಗಂಗಾಧರಯ್ಯ ಮತ್ತು ಗಂಗಮಾಳಮ್ಮ ಅವರ ದ್ವಿತೀಯ ಪುತ್ರರಾದ ಡಾ. ಜಿ ಪರಮೇಶ್ವರ, 1984ರಲ್ಲಿ ಆಸ್ಟ್ರೇಲಿಯಾದ ವೈಟ್ ಆಗ್ರಿಕಲ್ಚರ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಯೂನಿವರ್ಸಿಟಿ ಆಫ್ ಅಡಿಲೆಡ್‌ನಿಂದ ಪಿಎಚ್‌ಡಿ ಪದವಿ ಪಡಿದಿದ್ದಾರೆ. 1987ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದಲ್ಲಿ ರಾಜಕೀಯ ಪ್ರವೇಶ ಮಾಡಿದ ಪರಮೇಶ್ವರ 1989ರಲ್ಲಿ ಮೊದಲ ಬಾರಿಗೆ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಮಧುಗಿರಿ ಕ್ಷೇತ್ರದಲ್ಲಿ ಮೂರು ಬಾರಿ ಹಾಗೂ ಕೊರಟಗೆರೆ ಕ್ಷೇತ್ರದಲ್ಲಿ ಮೂರು ಬಾರಿ ಸೇರಿ ಒಟ್ಟು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ರಾಜ್ಯದಲ್ಲಿ ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ 8 ವರ್ಷಗಳ ಕಾಲ ಪಕ್ಷ ಸಂಘಟಿಸಿ 2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವಂತೆ ಮಾಡಿದ್ದರು. 1987ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಪರಮೇಶ್ವರ 1992ರಿಂದ 1994ರವರೆಗೂ ವೀರಪ್ಪ ಮೊಯ್ಲಿ ಸಂಪುಟದಲ್ಲಿ ರೆಷ್ಮೆ ಖಾತೆ ಸಚಿವರಾಗಿದ್ದರು. 1999ರಲ್ಲಿ ಎಸ್ ಎಂ ಕೃಷ್ಣ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ, ವಾರ್ತಾ ಮತ್ತು ಪ್ರಸಾರ ಖಾತೆ, ಗೃಹ ಖಾತೆ ಸೇರಿದಂತೆ ಉಪಮುಖ್ಯಮಂತ್ರಿ ಸ್ಥಾನ ನಿಭಾಯಿಸಿವ ಅನುಭವಿಯಾಗಿದ್ದಾರೆ.
ವಿದ್ಯಾರ್ಥಿ ದೆಸೆಯಲ್ಲೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಪರಮೇಶ್ವರ ಎನ್‌ಸಿಸಿ ಸೇರ್ಪಡೆಯಾಗಿದ್ದರು. ಬೆಂಗಳೂರು ಕೃಷಿ ವಿಶ್ವ ವಿದ್ಯಾಲದಲ್ಲಿ ನಡೆದ 100 ಮೀಟರ್ ಓಟ ಸ್ಪರ್ಧೆಯಲ್ಲಿ 10.9 ಸೆಕೆಂಡ್‌ನಲ್ಲಿ ಓಟ ಮುಗಿಸಿ ದಾಖಲೆ ಬರೆದಿದ್ದಾರೆ ಹಾಗೂ ರಾಷ್ಟ್ರಮಟ್ಟದಲ್ಲಿ ಅಂತರ್ ಕಾಲೇಜು, ಅಂತರ್ ವಿವಿ ಕ್ರೀಡಾಕೂಟ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕಾಲೇಜಿನ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ತುಮಕೂರು ಜಿಲ್ಲೆ ಅಭಿವೃದ್ಧಿ
ಪರಮೇಶ್ವರ ಅವರಿಂದ ತುಮಕೂರು ಜಿಲ್ಲೆಯ ಜನರು ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ರಾಜಕೀಯ ಶಕ್ತಿ, ಆಡಳಿತದ ಅನುಭವ ಹಾಗೂ ಸರ್ಕಾರದ ಬೆಂಬಲ ಈಗ ಅವರ ಕೈಯಲ್ಲಿದೆ. ಪರಮೇಶ್ವರ ಅವರ ಬಹುಕಾಲದ ಕನಸಿನ ಯೋಜನೆಯಾದ ತುಮಕೂರು-ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆ ಸಿದ್ದತೆ ಪ್ರಗತಿಯ ಹಂತದಲ್ಲಿದೆ. ಇದು ಸಾಕಾರವಾದರೆ ತುಮಕೂರು ಕೈಗಾರಿಕೆ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಮಹತ್ತರ ಬೆಳವಣಿಗೆ ಕಾಣಬಹುದು.
ತುಮಕೂರು ವಿವಿ ಅಭಿವೃದ್ಧಿ
ಅನುದಾನದ ಕೊರತೆಯಿಂದ ಮೂಲಸೌಕರ್ಯ ಅಭಿವೃದ್ಧಿ ನಿಧಾನಗತಿಯಲ್ಲಿರುವ ತುಮಕೂರು ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಸರ್ಕಾರದ ಅನುದಾನ ಒದಗಿಸುವ ಜವಾಬ್ದಾರಿ ಈಗ ಡಿಸಿಎಂ ಅವರ ಮೇಲಿದೆ. ಶಿರಾ, ಕೊರಟಗೆರೆ, ಮಧುಗಿರಿ ಹಾಗೂ ಪಾವಗಡ ಭಾಗದ ರೈತರು ದಶಕಗಳಿಂದ ಹುಣಸೆ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸುತ್ತಿದ್ದಾರೆ. ಜತೆಗೆ ತೆಂಗು ಬೆಳೆಗಳಿಗೆ ಮೌಲ್ಯವರ್ಧನೆ, ಸಂಸ್ಕರಣಾ ಘಟಕಗಳು ಹಾಗೂ ಮಾರುಕಟ್ಟೆ ಸೌಲಭ್ಯಗಳ ಅಭಿವೃದ್ಧಿಯ ಅಗತ್ಯವಿದೆ.
ನೀರಾವರಿ ಮತ್ತು ಕುಡಿಯುವ ನೀರು
ಜಿಲ್ಲೆಯ ಬರಪೀಡಿತ ತಾಲೂಕುಗಳಾದ ಪಾವಗಡ, ಮಧುಗಿರಿ ಮತ್ತು ಕೊರಟಗೆರೆಯಲ್ಲಿ ನೀರಾವರಿ ಯೋಜನೆಗಳ ವಿಸ್ತರಣೆ ಇನ್ನೂ ದೊಡ್ಡ ಸವಾಲಾಗಿಯೇ ಉಳಿದಿದೆ.
ಭೂಮಿ ಮತ್ತು ವಸತಿ ಸಮಸ್ಯೆ: ಭೂಹೀನರು ಹಾಗೂ ವಸತಿ ರಹಿತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಹತ್ವದ ಕೆಲಸವಾಗಿದೆ. ಈ ಎಲ್ಲವನ್ನೂ ಹಂತ ಹಂತವಾಗಿ ಮಾಡಬೇಕಿದೆ. ಪರಮೇಶ್ವರ ಅವರ ಮುಂದೆ ಕೇವಲ ಅಭಿವೃದ್ಧಿಯ ಸವಾಲು ಮಾತ್ರವಿಲ್ಲ. ಕಾಂಗ್ರೆಸ್ ಪಕ್ಷದ ಒಳರಾಜಕೀಯ, ಭವಿಷ್ಯದ ನಾಯಕತ್ವದ ಸ್ಪರ್ಧೆ ಹಾಗೂ ಪ್ರಾದೇಶಿಕ ಸಮತೋಲನವನ್ನು ಕಾಪಾಡುವ ಹೊಣೆಗಾರಿಕೆಯೂ ಇದೆ.
ʼಬೆಂಗಳೂರು ಉತ್ತರʼ ಎಂಬ ಪರಿಕಲ್ಪನೆಯ ಮೂಲಕ ತುಮಕೂರನ್ನು ರಾಜಧಾನಿ ವಲಯದ ಭಾಗವಾಗಿ ಅಭಿವೃದ್ಧಿಪಡಿಸುವ ಅವರ ಆಲೋಚನೆ ಕೆಲವರಿಂದ ಸ್ವಾಗತ ಪಡೆದರೆ, ಜಿಲ್ಲೆಯ ಪ್ರತ್ಯೇಕ ಗುರುತಿಗೆ ಧಕ್ಕೆಯಾಗಬಹುದು ಎಂಬ ವಿರೋಧವೂ ವ್ಯಕ್ತವಾಗಿದೆ. ಹೀಗಾಗಿ ಅಭಿವೃದ್ಧಿ ಮತ್ತು ಸ್ಥಳೀಯ ಅಸ್ತಿತ್ವದ ನಡುವಿನ ಸಮತೋಲನ ಸಾಧಿಸಬೇಕಾಗಿದೆ.
ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ
ಡಿಸಿಎಂ ಸ್ಥಾನವು ತುಮಕೂರಿಗೆ ರಾಜಕೀಯವಾಗಿ ದೊಡ್ಡ ಅವಕಾಶ ನೀಡಿದರೂ, ಮುಂದಿನ ಚುನಾವಣೆಯಲ್ಲಿ ಜನರು ಹುದ್ದೆಗಿಂತ ಫಲಿತಾಂಶವನ್ನು ಹೆಚ್ಚು ಗಮನಿಸುತ್ತಾರೆ. ಮೆಟ್ರೋ, ನೀರಾವರಿ, ವಿಶ್ವವಿದ್ಯಾಲಯ, ರೈತರ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಂತಹ ವಿಷಯಗಳಲ್ಲಿ ಸ್ಪಷ್ಟ ಸಾಧನೆ ಕಂಡುಬಂದರೆ ಪರಮೇಶ್ವರ ಅವರ ರಾಜಕೀಯ ಪರಂಪರೆ ಮತ್ತಷ್ಟು ಬಲವಾಗಲಿದೆ. ಆದರೆ ನಿರೀಕ್ಷೆಗಳು ಈಡೇರದಿದ್ದರೆ, ʼಜಿಲ್ಲೆಯ ಹಿರಿಯ ನಾಯಕ ಅಧಿಕಾರದಲ್ಲಿದ್ದರೂ ಅಭಿವೃದ್ಧಿ ಆಗಲಿಲ್ಲʼವೆಂಬ ಟೀಕೆ ಎದುರಾಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿದ್ದೀರಾ? ರಾಜ್ಯಸಭೆ ಟಿಕೆಟ್ ಕಸರತ್ತು: ದೆಹಲಿಯಲ್ಲಿ ಧ್ವನಿಸುವುದೇ ಉತ್ತರ ಕನ್ನಡ?
ಡಾ. ಜಿ. ಪರಮೇಶ್ವರ ಅವರ ಎರಡನೇ ಡಿಸಿಎಂ ಅವಧಿ ಕೇವಲ ವೈಯಕ್ತಿಕ ರಾಜಕೀಯ ಸಾಧನೆಯಲ್ಲ; ಅದು ತುಮಕೂರು ಜಿಲ್ಲೆಯ ಅಭಿವೃದ್ಧಿಯ ಪರೀಕ್ಷೆಯೂ ಹೌದು. ಅನುಭವ, ಅಧಿಕಾರ ಮತ್ತು ಸರ್ಕಾರದ ಬೆಂಬಲ ಎಂಬ ಮೂರು ಪ್ರಮುಖ ಶಕ್ತಿಗಳು ಅವರ ಕೈಯಲ್ಲಿವೆ. ಈ ಅವಕಾಶವನ್ನು ಜಿಲ್ಲೆಯ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಬಳಸಿದರೆ ತುಮಕೂರು ರಾಜ್ಯದ ಪ್ರಮುಖ ಅಭಿವೃದ್ಧಿ ಕೇಂದ್ರವಾಗಿ ಹೊರಹೊಮ್ಮಬಹುದು. ಇಲ್ಲದಿದ್ದರೆ ಇದು ಮತ್ತೊಂದು ರಾಜಕೀಯ ಅವಕಾಶವಾಗಿ ಮಾತ್ರ ಉಳಿಯುವ ಅಪಾಯವಿದೆ.





