ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ನಿಡಗುಂದಿಯ ಅಂಬೇಡ್ಕರ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರ ಅಮಾನತು ಆದೇಶ ರದ್ದುಗೊಳಿಸಿರುವ ಶಿಕ್ಷಣ ಇಲಾಖೆ ಅವರನ್ನು ಮರಳಿ ಸೇವೆಗೆ ನಿಯುಕ್ತಿ ಮಾಡಿದೆ.
ಶಾಲೆಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ವೀರಣ್ಣ ತಮ್ಮ ಶಾಲೆಯಿಂದ ತಾಲ್ಲೂಕು ಶಿಕ್ಷಣಾಧಿಕಾರಿ (ಬಿ.ಇ.ಒ.) ಕಚೇರಿಯ ತನಕ ಅಂಬೇಡ್ಕರ್ ಫೋಟೋ ಹಿಡಿದು ಮೌನ ಪಾದಯತ್ರೆ ಮಾಡಿದ್ದರು. ನೀಡಗುಂದಿಯ ಶಾಲೆಯಲ್ಲಿ ಒಂದರಿಂದ ಏಳನೆಯ ತರಗತಿವರೆಗೂ ಮಕ್ಕಳು ಓದಿತ್ತಿದ್ದು, ಎರಡೇ ಕೋಣೆಗಳು ಇದ್ದವು. ಹೆಚ್ಚಿನ ಕೊಠಡಿಗಾಗಿ ವೀರಣ್ಣ ಮಡಿವಾಳರ ಆಗ್ರಹಿಸಿದ್ದರು.
ವೀರಣ್ಣ ಮಡಿವಾಳ ಅವರ ಪ್ರತಿಭಟನೆ ಕಂಡು ಸರ್ಕಾರಕ್ಕೆ ಮುಜುಗರ ಒಡ್ಡುವಂತಹುದೂ ಆಗಿದೆಯೆಂದು ಬಿ.ಇ.ಒ. ನೋಟಿಸ್ ನೀಡಿ ಜೂನ್ನಲ್ಲಿ ಅಮಾನತು ಮಾಡಿದ್ದರು.
ಮೂರು ತಿಂಗಳ ನಂತರ ಅವರ ಅಮಾನತು ಆದೇಶ ರದ್ದಾಗಿದೆ. ಮತ್ತೆ ಅವರನ್ನು ಸೇವೆಗೆ ಮರು ನಿಯುಕ್ತಿಗೊಳಿಸಿ ಶಿಕ್ಷಣ ಇಲಾಖೆ ಈಗ ಆದೇಶಿಸಿದೆ. ಅವರು ಹಿಂದಿದ್ದ ನೀಡಗುಂದಿಯ ಅಂಬೇಡ್ಕರ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಅವರನ್ನು ನಿಯುಕ್ತಿಗೊಳಿಸದೆ ರಾಯಭಾಗದ ಮಗದೊಂದು ಶಾಲೆಗೆ ನಿಯುಕ್ತಿಗೊಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.