ವಿದ್ಯಾರ್ಥಿಗಳು ತಮ್ಮ ವಯಸ್ಸಿಗೆ ಮೀರಿ ವರ್ತಿಸುತ್ತಿದ್ದಾರೆ. ದುರ್ವರ್ತನೆ ತೋರುತ್ತಿದ್ದಾರೆ. ಶಿಕ್ಷಕರಿಗೆ ವಿದ್ಯಾರ್ಥಿಗಳಿಂದಲೇ ಕಿರುಕುಳ ಹೆಚ್ಚುತ್ತಿದೆ ಎಂಬ ಆರೋಪವು ಖಾಸಗಿ ಶಾಲೆಗಳಿಂದ ಕೇಳಿಬಂದಿದೆ. ವಿದ್ಯಾರ್ಥಿಗಳ ನಿಯಂತ್ರಣಕ್ಕೆ ಕನಿಷ್ಠ ನಿಯಮಗಳನ್ನು, ಮಾನದಂಡಗಳನ್ನು ಶಾಲೆಗಳ ಹಂತದಲ್ಲಿ ಜಾರಿಗೆ ತರುವಂತೆ ಮನವಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖಾಸಗ ಶಾಲೆಗಳ ಸಂಘಟನೆ ಪತ್ರ ಬರೆದಿದೆ.
ಇತ್ತೀಚೆಗೆ, ಶಾಲೆಯೊಂದರಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿದ್ಯಾರ್ಥಿಯೊಬ್ಬ ಮುಜುಗರ ಉಂಟಾಗುವಂತಹ ಹೇಳಿಕೆ ನೀಡಿದ್ದದ್ದು ವರದಿಯಾಗಿತ್ತು. ಈ ಬೆನ್ನಲ್ಲೇ, ವಿದ್ಯಾರ್ಥಿಗಳ ವರ್ತನೆಗಳ ಬಗ್ಗೆ ಖಾಸಗಿ ಶಾಲೆಗಳಿಂದ ಆರೋಪಗಳು ಕೇಳಿಬಂದಿವೆ.
ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ. ಶಿಕ್ಷಕರಿಗೆ, ಶಾಲಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದಾರೆ. ಹಲ್ಲೆ ನಡೆಸುವಂತಹ ಘಟನೆಗಳು ನಡೆದಿವೆ. ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಮಕ್ಕಳಿಗೆ ಅನ್ಯಾಯ ಆಗದ ರೀತಿಯಲ್ಲಿ ಹಾಗೂ ಶಿಕ್ಷಣ ವ್ಯವಸ್ಥೆಗೆ ಚ್ಯುತಿ ಬರದೇ ಇರುವಂತೆ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಖಾಸಗಿ ಶಾಲೆಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಒತ್ತಾಯಿಸಿದ್ದಾರೆ.