ರಾಜ್ಯದಲ್ಲಿ ಉಷ್ಣಾಂಶವು ಗಣನೀಯ ಏರಿಕೆಯಾಗುವ ಸಾಧ್ಯತೆ ಯಿದ್ದು, ಮಾರ್ಚ್–ಮೇ ಅವಧಿಯಲ್ಲಿ ಕೆಲ ದಿನಗಳು ಬಿಸಿ ಗಾಳಿ ಬೀಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾರ್ಚ್ ತಿಂಗಳು ಉತ್ತರ ಒಳನಾಡಿನ ಬಹುತೇಕ ಕಡೆ ಎರಡರಿಂದ ಐದು ದಿನಗಳು ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ. ಈ ತಿಂಗಳು ರಾಜ್ಯದಾದ್ಯಂತ ವಾಡಿಕೆಗಿಂತ ಅಧಿಕ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.
ಮೂರು ತಿಂಗಳು ಉತ್ತರ ಒಳನಾಡು ಹಾಗೂ ಕರಾವಳಿಯ ಕೆಲವು ಪ್ರದೇಶ ಗಳಲ್ಲಿ ಸಾಮಾನ್ಯಕ್ಕಿಂತ ಅಧಿಕ ತಾಪಮಾನ ವರದಿಯಾಗಲಿದೆ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸುವ ಸಂಭವವಿದೆ. ಬಿಸಿ ಗಾಳಿ ಸಂದರ್ಭದಲ್ಲಿ ಅಧಿಕ ತಾಪಮಾನವು ವೃದ್ಧರು, ಮಕ್ಕಳು ಹಾಗೂ ಅನಾರೋಗ್ಯ ಪೀಡಿತರನ್ನು ಕಾಡಲಿದೆ. ನಿರ್ಜಲೀಕರಣ, ಆಯಾಸ ಉಂಟಾಗಲಿದೆ. ಈ ಸವಾಲು ಗಳನ್ನು ಎದುರಿಸಲು ಅಧಿಕಾರಿಗಳು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯ ‘ಗುಜರಾತ್ ಮಾಡೆಲ್’ ಬಚ್ಚಿಟ್ಟ ಸತ್ಯಗಳು!
ಬಿಸಿ ಗಾಳಿ ಪರಿಣಾಮಗಳನ್ನು ನಿವಾರಿಸಲು ಕಾರ್ಯತಂತ್ರಗಳನ್ನು ರೂಪಿಸಬೇಕಿದೆ. ಸಾರ್ವಜನಿಕರ ಆರೋಗ್ಯ ಕಾಪಾಡಲು, ಬಿಸಿ ಗಾಳಿ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲು ಪ್ರಯತ್ನಗಳು ಅತ್ಯಗತ್ಯ ಎಂದು ತಿಳಿಸಿದೆ.
ಸುಳ್ಯದಲ್ಲಿ 40.1 ಡಿಗ್ರಿ ಸೆಲ್ಸಿಯಸ್
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಪ್ರಕಾರ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 39 ಡಿಗ್ರಿ ಸೆಲ್ಸಿಯಸ್‌ನಿಂದ 40.1 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ವರದಿಯಾಗಿದೆ. ದಕ್ಷಿಣ ಕನ್ನಡದ ಸುಳ್ಯದಲ್ಲಿ ಅಧಿಕ ಉಷ್ಣಾಂಶ (40.1 ಡಿಗ್ರಿ ಸೆಲ್ಸಿಯಸ್) ದಾಖಲಾಗಿದೆ.
ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಭಾನುವಾರವೂ ಬಿಸಿ ಗಾಳಿಯ ಮುನ್ಸೂಚನೆ ನೀಡಲಾಗಿದೆ.
