ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ದಲಿತ ಸಮುದಾಯಗಳ ಒಳಮೀಸಲಾತಿ ಕುರಿತು ಸಲ್ಲಿಕೆಯಾದ ಜಸ್ಟೀಸ್ ನಾಗಮೋಹನದಾಸ್ ಅವರ ವರದಿಯನ್ನು ಒಪ್ಪಿ, ಕೆಲವು ಮಾರ್ಪಾಟುಗಳೊಂದಿಗೆ ಜಾರಿಗೊಳಿಸುತ್ತಿರುವುದು ಮೊದಲಿಗೆ ಅಭಿನಂದನೀಯ ಕ್ರಮವಾಗಿದೆ. ಎಡಗೈ ದಲಿತ ಸಮುದಾಯವು ಮೂರು ದಶಕಗಳಿಂದ ಒಳ ಮೀಸಲಾತಿಗಾಗಿ ನಡೆಸುತ್ತ ಬಂದ ಹೋರಾಟಕ್ಕೆ ಕಡೆಗೂ ಜಯವಾಗಿದೆ; ನ್ಯಾಯ ಸಿಕ್ಕಿದೆ. ಜೊತೆಗೆ ಬಲಗೈ ದಲಿತ ಸಮುದಾಯ ಮತ್ತು ಸ್ಪಶ್ಯ ಪರಿಶಿಷ್ಟ ಜಾತಿಗಳಿಗೂ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಸಮತೋಲನದ ಪ್ರಯತ್ನ ಮಾಡಲಾಗಿದೆ. ಪರಿಶಿಷ್ಟ ಜಾತಿಗಳಿಗಾಗಿ ಶಾಶ್ವತ ಆಯೋಗ ರಚಿಸುವ ತೀರ್ಮಾನ ಮಾಡಲಾಗಿದೆ. ಇವೆಲ್ಲ ಕ್ರಮಗಳೂ ಸ್ವಾಗತಾರ್ಹವಾಗಿವೆ” ಎಂದು ತಿಳಿಸಿದ್ದಾರೆ.
ಆದರೆ, ಇಷ್ಟೆಲ್ಲ ನ್ಯಾಯ ಒದಗಿಸುವ ನಿರ್ಣಯದಲ್ಲಿ ಅಲೆಮಾರಿ ಸಮುದಾಯಗಳಿಗೆ ಸೂಕ್ತ ಸಾಮಾಜಿಕ ನ್ಯಾಯವನ್ನು ಒದಗಿಸಿಲ್ಲವೆಂಬ ಅಂಶ ಮುನ್ನೆಲೆಗೆ ಬಂದಿದೆ. ಅಲೆಮಾರಿ ಸಮುದಾಯಗಳು ಬೇರೆ ಶೋಷಿತ ಸಮುದಾಯಗಳಿಗಿಂತ ಭಿನ್ನವಾದ ಜೀವನ ವಿಧಾನವನ್ನು ಒಳಗೊಂಡಿವೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಬೇರೆ ಯಾವುದೇ ಶೋಷಿತ ಸಮುದಾಯದ ಜೊತೆಗೆ ಸ್ಪರ್ಧೆ ಮಾಡಲಾಗದಂಥ ಸ್ಥಿತಿಯಲ್ಲಿವೆ. ಈ ವಾಸ್ತವವನ್ನು ಪರಿಗಣಿಸಿಯೇ ಜಸ್ಟೀಸ್ ನಾಗಮೋಹನದಾಸ್ ಆಯೋಗವು ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಒಳಮೀಸಲಾತಿಗೆ ಶಿಫಾರಸು ಮಾಡಿತ್ತು ಎಂದು ಹಿರಿಯ ಸಾಹಿತಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು
ಸಾಮಾಜಿಕ ನ್ಯಾಯಕ್ಕೆ ಬದ್ಧರಾದವರೆಂದೇ ಹೆಸರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲೆಮಾರಿಗಳಿಗಾದ ‘ಅನ್ಯಾಯ’ವನ್ನು ಸರಿಪಡಿಸಲು ಪರ್ಯಾಯ ಪರಿಹಾರ ಮಾರ್ಗಗಳನ್ನು ಹುಡುಕಬೇಕೆಂದೂ, ನ್ಯಾಯ ಒದಗಿಸಬೇಕೆಂದೂ ಒತ್ತಾಯ ಪೂರ್ವಕವಾಗಿ ವಿನಂತಿಸುತ್ತೇನೆ. ಈ ಸಂಬಂಧವಾಗಿ ಅಲೆಮಾರಿ ಸಂಘಟನೆಗಳ ನೇತಾರರನ್ನು ಮಾತುಕತೆಗೆ ಆಹ್ವಾನಿಸುವುದು ಅಗತ್ಯವೆಂದು ಭಾವಿಸುತ್ತೇನೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.
