ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ನಗರದಲ್ಲಿ ಶುಕ್ರವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ಬೆಳಗ್ಗೆಯಿಂದ ಬಿಸಿಲ ಬೇಗೆಯಲ್ಲಿದ್ದ ಬೆಂಗಳೂರಿನ ನಾಗರಿಕರಿಗೆ ಮಳೆ ತಂಪೆರೆದಿದೆ.
ಶನಿವಾರವೂ ಬೆಳಗ್ಗೆ ಬಿಸಿಲ ಬೇಗೆ ಇದ್ದು, ಸಾಯಂಕಾಲದ ವೇಳೆಗೆ ಮೋಡ ಕವಿದ ವಾತಾವರಣ ಉಂಟಾಗುವ ಸಾಧ್ಯತೆ ಇದೆ, ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನ ಮೆಜೆಸ್ಟಿಕ್, ಟೌನ್ ಹಾಲ್, ಕೆ.ಆರ್ ಮಾರ್ಕೆಟ್, ಮಲ್ಲೇಶ್ವರಂ, ರಾಜಾಜಿನಗರ, ಶಾಂತಿನಗರ, ವಸಂತನಗರ, ಜೆ.ಸಿ ನಗರ, ಶಿವಾಜಿ ನಗರದಲ್ಲಿ ಶುಕ್ರವಾರ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದೆ. ಇದರಿಂದ ವಾಹನ ಸಂಚಾರ ದಟ್ಟಣೆ ಉಂಟಾಗಿದ್ದು, ಸವಾರರು ಪರದಾಡಿದರು.
ತಮಿಳುನಾಡಿಗೆ ನೀರು ಹರಿಸದಂತೆ ಹೋರಾಟ ನಡೆಸುತ್ತಿರುವ ಮಂಡ್ಯದಲ್ಲಿ ‘ಮಂಡ್ಯ ಬಂದ್’ನ ಹಿಂದಿನ ರಾತ್ರಿ ಮಳೆ ಸುರಿದಿದೆ.
ಕಲಬುರಗಿ ಸೇರಿದಂತೆ ಜಿಲ್ಲೆಯ ಹಲವಡೆ ಗುಡುಗು ಸಹಿತ ಮಳೆ ಸುರಿದಿದೆ. ಸುಮಾರು ಅರ್ದಗಂಟೆಗೂ ಹೆಚ್ಚು ಸಮಯ ಮಳೆ ಸುರಿದಿದ್ದು, ಕಳೆದ ಕೆಲವು ದಿನಗಳಿಂದ ಮಳೆ ಇಲ್ಲದೇ ಕಂಗಾಲಾಗಿದ್ದ ಜನರು ತುಸು ನಿರಾಳರಾಗಿದ್ದಾರೆ.
ಶುಕ್ರವಾರ ಕಲಬುರಗಿ ಜಿಲ್ಲೆಯ ಚಿಂಚೋಳಿ, ಸುಲೇಪೇಟದಲ್ಲಿ 5 ಸೆಂ.ಮೀ, ಉತ್ತರ ಕನ್ನಡದ ಕದ್ರಾ, ಕಲಬುರಗಿಯ ಚಿತ್ತಾಪುರ, ಯಾದಗಿರಿಯ ಸೈದಾಪುರ, ವಿಜಯಪುರದ ಇಂಡಿಯಲ್ಲಿ 3 ಸೆಂ.ಮೀ ಮಳೆಯಾಗಿದೆ.
ಸೆ.27ರವರೆಗೆ ಮಳೆ ಬರುವ ಸಾಧ್ಯತೆ
ಸೆಪ್ಟೆಂಬರ್ 27ರವರೆಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇನ್ನೂ ಕೆಲವೆಡೆ ಜೋರು ಮಳೆಯಾಗುವ ಸಾಧ್ಯತೆ ಹಿನ್ನೆಲೆ, ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ, ಬೀದರ್, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಗುಲ್ಬರ್ಗಾ, ಕೋಲಾರ, ಮಂಡ್ಯ, ಮೈಸೂರು, ತುಮಕೂರಿನಲ್ಲಿ ಭಾರೀ ಮಳೆಯಾಗುವ ಸಾದ್ಯತೆ ಇದೆ.
ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 27ರವರೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ವಂಚನೆ ಪ್ರಕರಣ | ಚೈತ್ರಾ ಹೆಸರಿನೊಂದಿಗೆ ‘ಕುಂದಾಪುರ’ ಬಳಕೆಗೆ ಆಕ್ಷೇಪ; ಕೋರ್ಟ್‌ನಲ್ಲಿ ದಾವೆ
ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ ನೀಗಲಿದೆ
“ಕರ್ನಾಟಕದಾದ್ಯಂತ ಮಾನ್ಸೂನ್ ಸಕ್ರಿಯವಾಗಿದೆ. ಈ ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆಯ ಕೊರತೆ ನೀಗಲಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾಮಾನ್ಯ ಮಳೆಯಾಗಲಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ. ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ” ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ಡಿ ಹೇಳಿದರು.
ಕರ್ನಾಟಕದಲ್ಲಿ ಸೆಪ್ಟೆಂಬರ್ ವರೆಗೆ ಶೇ.20 ಮಳೆ ಕೊರತೆ ಎದುರಾಗಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ.33 ಹಾಗೂ ಕೊಡಗಿನಲ್ಲಿ ಶೇ.43ರಷ್ಟು ಕಡಿಮೆ ಮಳೆ ದಾಖಲಾಗಿದೆ.