ಗ್ಯಾರಂಟಿಗಳಿಗೆ ಬಂದಿದ್ದು ಟೀಕೆಯಲ್ಲ, ಗೇಲಿ: ಎ.ನಾರಾಯಣ ಬೇಸರ

Date:

Advertisements

“ಗ್ಯಾರಂಟಿಗಳಿಗೆ ಟೀಕೆಗಳು ಬಂದಿದ್ದರೆ ಸ್ವೀಕರಿಸಬಹುದಿತ್ತು; ಆದರೆ ಬಂದಿದ್ದು ಟೀಕೆಯಲ್ಲ, ಗೇಲಿ” ಎಂದು ರಾಜಕೀಯ ವಿಶ್ಲೇಷಕ ಎ.ನಾರಾಯಣ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ, ಭಾರತದ ಸಂವಿಧಾನ ರಚನೆಯ ಅಮೃತಮಹೋತ್ಸವ’ ಸಮಾರಂಭದ ‘ಕರ್ನಾಟಕ ಸರ್ಕಾರದ ಗ್ಯಾರಂಟಿಗಳು ಮತ್ತು ಸಾರ್ವತ್ರಿಕ ಮೂಲ ಆದಾಯ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

“ಗ್ಯಾರಂಟಿಗಳನ್ನು ಟೀಕಿಸುವ ಯಾರಾದರೂ ತಿಂಗಳಿಗೆ 10,000 ರೂ. ಆದಾಯವನ್ನು ಪಡೆದು ನಗರದಲ್ಲಿ ಜೀವಿಸಬಹುದಾದ ಸಾಧ್ಯತೆಯನ್ನು ಯೋಚಿಸಿದ್ದೀರಾ?  ಗ್ರಾಮೀಣ ಭಾಗದಲ್ಲಿ 4,000 ಅಥವಾ 5,000 ರೂ. ಮಾಸಿಕ ಆದಾಯವನ್ನು ಪಡೆದು ನೀವು ಜೀವಿಸಬಹುದೇ? ಈ ದೇಶದಲ್ಲಿ ಎಷ್ಟೋ ಮಂದಿ ನಗರ ಪ್ರದೇಶದಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ಆದಾಯವಾಗಿ ಪಡೆದುಕೊಂಡು, ಗ್ರಾಮೀಣ ಪ್ರದೇಶದಲ್ಲಿ ಐದು ಸಾವಿರಕ್ಕಿಂತ ಕಡಿಮೆ ಆದಾಯವನ್ನು ಪಡೆದುಕೊಂಡು ಯಾವುದೇ ರೀತಿಯ ಬೆಂಬಲವಿಲ್ಲದೆ ಬದುಕುತ್ತಿದ್ದಾರೆ. ಅವರ ಬಗ್ಗೆ ನೀವು ಒಂದು ನಿಮಿಷ ಯೋಚಿಸಬೇಕು. ಈ ಜನರನ್ನು ಗೇಲಿ ಮಾಡುವ ಬದಲು, ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯ ಎನ್ನುವ ಬದಲು, ಈ ಯೋಜನೆಗಳಿಂದ ದೇಶ, ರಾಜ್ಯ ದಿವಾಳಿಯಾಯಿತು ಎನ್ನುವ ಮೊದಲು ನೀವು ಐದು ಅಥವಾ ಹತ್ತು ಸಾವಿರ ಆದಾಯದಲ್ಲಿ ಬದುಕುವವರ ಬಗ್ಗೆ ಯೋಚಿಸಬೇಕು” ಎಂದು ಸಲಹೆ ನೀಡಿದರು.

Advertisements

“ಅನುಭವ ಆಧಾರಿತ ಶಿಕ್ಷಣವನ್ನು ಹೇಗೆ ನೀಡುವುದು ಎಂಬ ಜಿಜ್ಞಾಸೆ ಹೊಸ ಶಿಕ್ಷಣ ನೀತಿಯಲ್ಲಿ ನಡೆಯುತ್ತಿದೆ. ಈಗ ಒಂದು ಪ್ರಯೋಗ ಮಾಡಬಹುದು. ಮಾಸಿಕವಾಗಿ ಬಡ ಕುಟುಂಬವೊಂದು ಗಳಿಸುವ ಆದಾಯದ ಮೊತ್ತವನ್ನು ಈ ವಿದ್ಯಾರ್ಥಿಗಳಿಗೆ ಕೊಟ್ಟು  ದೇಶದಲ್ಲಿ ಎಲ್ಲಾದರೂ ಮೂರು ತಿಂಗಳು ಬದುಕಿ ಬನ್ನಿ ಎಂದು ತಿಳಿಸಬೇಕಿದೆ. ಅಂತಹ ಇಂಟರ್ನ್‌ಶಿಪ್ ಆರಂಭಿಸಬೇಕು. ಇಂತಹ ಶಿಕ್ಷಣವನ್ನು ನೀಡದೆ ಹೋದರೆ ಈ ದೇಶದ ಹೊಟ್ಟೆ ತುಂಬಿದವರ ಮಕ್ಕಳಿಗೆ ಗ್ಯಾರಂಟಿಗಳು ಅರ್ಥವಾಗುವುದಿಲ್ಲ, ಬದಲಿಗೆ ಗೇಲಿ ಮಾಡಬೇಕು ಅನಿಸುತ್ತದೆ. ನಮ್ಮ ರಾಜ್ಯದಲ್ಲಿ ಗ್ಯಾರಂಟಿಗಳ ಕುರಿತು ಬಂದಿರುವ ಗೇಲಿ, ಕುಹಕ, ತಮಾಷೆಗಳನ್ನು ಕೇಳಿದ ಬಳಿಕ ನನಗೆ ಹೀಗೆ ಅನಿಸುತ್ತಿದೆ” ಎಂದು ತಿಳಿಸಿದರು.

“ಗ್ಯಾರಂಟಿಗಳನ್ನು ಸಮರ್ಥಿಸುವವರಲ್ಲಿಯೂ ನಾವು ಸಮರ್ಥಿಸಬಾರದನ್ನು ಸಮರ್ಥಿಸುತ್ತಿದ್ದೇವೆ ಎಂಬ ಭಾವನೆ ಇದೆ. ಇದನ್ನು ಕಂಡುಕೊಂಡಿದ್ದೇನೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಶಾಸಕರಲ್ಲಿಯೂ ಇಂತಹ ಧೋರಣೆ ಇದೆ. ನಾವು ಗ್ಯಾರಂಟಿಗಳನ್ನು ಕೊಟ್ಟು ತಪ್ಪು ಮಾಡಿದೆವು, ಅಭಿವೃದ್ಧಿಗೆ ಹಣವಿಲ್ಲ ಎನ್ನುತ್ತಾರೆ. ಅಭಿವೃದ್ಧಿ ಎಂದರೇನು ಎಂದು ಇವರಿಗೆ ಕೇಳಬೇಕಿದೆ” ಎಂದು ಹೇಳಿದರು.

“ಮಗನ ಶವದ ಮುಂದೆ ನಿಂತು ಗ್ಯಾರಂಟಿಯನ್ನು ನೆನೆದು ಅಳುತ್ತಿದ್ದ ತಾಯಿಯ ಸುದ್ದಿಯನ್ನು ಓದಿದೆ. ಆ ತಾಯಿಯ ವಿಡಿಯೊ ನೋಡಲು ನನಗೆ ಮನಸ್ಸು ಬರಲಿಲ್ಲ. ‘ಗೃಹಲಕ್ಷ್ಮಿ ಯೋಜನೆಯಿಂದ ನಿನ್ನ ನೋಡಿಕೊಳ್ಳುತ್ತಿದ್ದೆ, ನನ್ನ ಬಿಟ್ಟು ಹೋದೆಯಲ್ಲಪ್ಪ’ ಎಂದಿದ್ದಾಳೆ ಆ ತಾಯಿ. ಸರ್ಕಾರ ನಮ್ಮನ್ನು ಪೊರೆಯುತ್ತದೆ ಎಂಬ ಭಾವನೆ ಆಕೆಯದ್ದು. ಇದನ್ನು ಕಂಡಾಗ ಹರಿಶ್ಚಂದ್ರ ಕಾವ್ಯದಲ್ಲಿ ಚಂದ್ರಮತಿ ತನ್ನ ಮಗನ ಮುಂದೆ ರೋಧಿಸುವ ದೃಶ್ಯ ಕಣ್ಣಮುಂದೆ ಹಾದುಹೋಯಿತು” ಎಂದು ಮಾರ್ಮಿಕವಾಗಿ ನುಡಿದರು.

“ಶಕ್ತಿ ಯೋಜನೆ ಆರಂಭವಾದ ದಿನ ವೃದ್ಧೆಯೊಬ್ಬರು ಬಸ್ಸಿಗೆ ನಮಸ್ಕರಿಸಿ ಹತ್ತಿದ ದೃಶ್ಯ ನೆನಪಾಗುತ್ತಿದೆ. ಇವೆಲ್ಲ ನಟನೆಯಲ್ಲ. ಇದನ್ನು ನಟನೆ ಎಂದು ತಿಳಿದಿದ್ದರೆ ಅವರಂತಹ ಮೂರ್ಖರು ಯಾರೂ ಇಲ್ಲ. ಆ ತಾಯಿಯ ಮನಸ್ಸನ್ನು ಅರ್ಥಮಾಡಿಕೊಳ್ಳಲು ಬೇಕಾದ ವಿವೇಚನೆ, ಸೂಕ್ಷ್ಮತೆ ಕಳೆದುಕೊಂಡಿದ್ದೇವೆ. ಸಂವಿಧಾನ ಬರೆದವರಿಗೆ ಆ ಸೂಕ್ಷ್ಮತೆ ಇತ್ತು. ಆದ ಕಾರಣ ನಮಗೆ ಈ ರೀತಿಯ ಸಂವಿಧಾನವನ್ನು ಬಿಟ್ಟು ಹೋಗಿದ್ದಾರೆ. ಈ ಎಪ್ಪತ್ತು ವರ್ಷಗಳಲ್ಲಿ ಮಾಡಿದ ತಪ್ಪೇನೆಂದರೆ ನಾವು ನಮ್ಮ ಸಂವಿಧಾನದ ಬಗ್ಗೆ ಹೊಸತಲೆಮಾರಿಗೆ ಹೇಳಲಿಲ್ಲ. ಆ ಕಾರಣಕ್ಕೆ ಸೂಕ್ಷ್ಮತೆ ಕಳೆದುಕೊಂಡಿದ್ದೇವೆ. ಈಗಲಾದರೂ ಈ ಪ್ರಯತ್ನ ಆರಂಭವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ಗ್ಯಾರಂಟಿಗಳಂತಹ ಯೋಜನೆಗಳನ್ನು ಈ ಸರ್ಕಾರ ಏಕೆ ಕೊಟ್ಟಿತು ಎಂದು ಯೋಚಿಸಬೇಕು. ಈ ಪ್ರಕೃತಿ ಈ ಜಗತ್ತಿನಲ್ಲಿ ಎಲ್ಲರಿಗೂ ಸಮಾನವಾಗಿ ಏನನ್ನೂ ನೀಡಿಲ್ಲ. ಅದಕ್ಕೆ ತದ್ವಿರುದ್ಧವಾಗಿ ಈ ಪ್ರಪಂಚದಲ್ಲಿ ಸಮಾನಾಂತರವಾಗಿ ಸಿಕ್ಕಿದ್ದು ಮತದಾನದ ಹಕ್ಕು. ಪ್ರಜಾತಂತ್ರ ವ್ಯವಸ್ಥೆ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲ ಶ್ರೀಮಂತನಿಗೂ ಬಡವನಿಗೂ ಒಂದೇ ಮತ ಒಂದೇ ಮೌಲ್ಯ. ಈ ಹಕ್ಕನ್ನು ನಮಗೆ ಕೊಟ್ಟಿದ್ದು ನಮ್ಮ ಸಂವಿಧಾನ ಮತ್ತು ಬಾಬಾ ಸಾಹೇಬ್‌ ಅಂಬೇಡ್ಕರ್‌” ಎಂದು ನೆನೆದರು.

“ಆಳುವವರಿಗೆ ಬಡವರ ಕಷ್ಟ ಅರ್ಥವಾಗಿದೆ ಎಂದು ಗ್ಯಾರಂಟಿಗಳನ್ನು ನೋಡಲಾಗದು. ಅರ್ಥವಾಗಿದ್ದರೆ ಆಳುವ ಪಕ್ಷದ ಶಾಸಕರೇ ಗೊಣಗುತ್ತಿರಲಿಲ್ಲ. ಗ್ಯಾರಂಟಿ ಏಕೆ ಸಿಕ್ಕಿತು ಗೊತ್ತೆ? ಬಡವರಿಗೂ ಮತ್ತು ಶ್ರೀಮಂತರಿಗೂ ಒಂದೇ ಮತದಾನದ ಹಕ್ಕು ಇರುವುದರಿಂದ ಆಳುವ ಸರ್ಕಾರಗಳು ಶ್ರೀಮಂತರ ಮೇಲೆ ಅವಲಂಬಿಸಿದಂತೆಯೇ ಬಡವರನ್ನೂ ಅವಲಂಬಿಸುವಂತಾಗಿದೆ. ಇದು ಸಂವಿಧಾನ ಮಾಡಿದ ಬದಲಾವಣೆಯಾಗಿದೆ. ಹೀಗಾಗಿಯೇ ಗ್ಯಾರಂಟಿಗಳನ್ನು ಗೇಲಿ ಮಾಡಿದವರೂ ಇಂದು ಗ್ಯಾರಂಟಿ ಎನ್ನುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.

“ಗ್ಯಾರಂಟಿ ಫಲಾನುಭವಿಗಳು ಎಲ್ಲಾ ಸಮಾಜದಲ್ಲೂ ಇದ್ದಾರೆ. ಮೇಲ್ವರ್ಗದವರು, ಮೇಲ್ಜಾತಿಯವರೂ ಇದ್ದಾರೆ. ಅದಕ್ಕೆ ಕಾರಣ ನಮ್ಮ ಸಂವಿಧಾನ. ವಿಚಾರವೇನೆಂದರೆ ಸಂವಿಧಾನದ ಕಾರಣದಿಂದ ಇದೆಲ್ಲ ಸಿಗುತ್ತಿದೆ ಎಂಬುದು ಅವರಿಗೆ ಗೊತ್ತಿಲ್ಲ. ಸಂವಿಧಾನದ ವಿಚಾರವಾಗಿ ಹೇಳುವಲ್ಲಿ ನಾವು ವಿಫಲರಾಗಿದ್ದೇವೆ. ಈ ಸಮಾವೇಶ ಸತ್ಯವನ್ನು ಜನರಿಗೆ ತಿಳಿಸುವಂತೆ ಆಗಲಿ” ಎಂದು ಆಶಿಸಿದರು.

ಗೋಷ್ಠಿಯ ಅಧ್ಯಕ್ಷತೆಯನ್ನು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್‌ ವಹಿಸಿದ್ದರು. ಚಿಂತಕ ಎಚ್.ಎಂ.ರುದ್ರಸ್ವಾಮಿ, ರಾಜಕೀಯ ವಿಶ್ಲೇಷಕ ಎ.ನಾರಾಯಣ, ಪ್ರೊ.ಎಸ್.ಸ್ವಪ್ನಾ, ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X