“ಗ್ಯಾರಂಟಿಗಳನ್ನು ವಿರೋಧಿಸುವವರನ್ನು ದೇಶದ್ರೋಹಿಗಳು ಎಂದರೆ ತಪ್ಪೇನಿಲ್ಲ” ಎಂದು ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ, ಭಾರತದ ಸಂವಿಧಾನ ರಚನೆಯ ಅಮೃತಮಹೋತ್ಸವ’ ಸಮಾರಂಭದ ‘ಕರ್ನಾಟಕ ಸರ್ಕಾರದ ಗ್ಯಾರಂಟಿಗಳು ಮತ್ತು ಸಾರ್ವತ್ರಿಕ ಮೂಲ ಆದಾಯ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಗ್ಯಾರಂಟಿಗಳಿಗೆ ಸಂವಿಧಾನದಲ್ಲಿ ಅವಕಾಶವಿದೆ. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯದೆ ರಾಜ್ಯದ ಹಿತಕ್ಕಾಗಿ ಗ್ಯಾರಂಟಿಗಳನ್ನು ವಿಸ್ತರಿಸಬಹುದು ಎಂದು ಆರ್ಟಿಕಲ್ 293 (1)ರಲ್ಲಿ ಹೇಳಲಾಗಿದೆ. ಹೀಗಾಗಿ ಹೆಣ್ಣುಮಕ್ಕಳಿಗೆ ಕೊಟ್ಟಿರುವ ಶಕ್ತಿ, ಗೃಹಲಕ್ಷ್ಮಿಯಂತಹ ಯೋಜನೆಗಳನ್ನು ಟೀಕೆ ಮಾಡುವವರೆಲ್ಲ ದೇಶದ್ರೋಹಿಗಳು” ಎಂದರು.

“ಸಂವಿಧಾನದಲ್ಲಿರುವ ಅವಕಾಶವನ್ನು ಬಳಸಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರ ಈ ರಾಜ್ಯದಲ್ಲಿ ಜನಪರ ಕಳಕಳಿ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ. ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕಿಂತ ಮನು ಬರೆದ ಸಂವಿಧಾನ ಈ ಹೊತ್ತಿನಲ್ಲೂ ಇರುವುದರಿಂದ ಗ್ಯಾರಂಟಿಗಳಿಗೆ ಟೀಕೆಗಳು ಬರುತ್ತಿವೆ” ಎಂದು ತಿಳಿಸಿದರು.
“ಕೆಲವರು ತಲೆಯಿಂದ, ಕೆಲವರು ಬುದ್ಧಿಯಿಂದ, ಕೆಲವರು ಹೃದಯದಿಂದ ಮಾತನಾಡುತ್ತಾರೆ. ಎಲ್ಲವನ್ನೂ ಅಯೋಮಯ ಮಾಡಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ಸಿದ್ದರಾಮಯ್ಯನವರು ತಮ್ಮ ಬದುಕಿನ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ಹಿಂದಿನ ಅವಧಿಯಲ್ಲಿ ಅನ್ನಭಾಗ್ಯ ಯೋಜನೆ ತಂದರು. ಈಗ ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡು ಶಕ್ತಿ ಮತ್ತು ಗೃಹಲಕ್ಷ್ಮಿಯನ್ನು ಜಾರಿಗೆ ತಂದಿದ್ದರಿಂದ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಹೇಳಿದರು.
“ಅನ್ನಭಾಗ್ಯ ಬಂದಾಗ ಮೇಲ್ವರ್ಗದ ಜನ ಟೀಕೆಗಳನ್ನು ಮಾಡಿದ್ದರು. ಜನ ಸೋಮಾರಿಗಳಾಗುತ್ತಾರೆಂದು ಮೂದಲಿಸಿದರು. ಆದರೆ ಇಷ್ಟು ಕಾಲ ನೀವು ಕೂತು ತಿಂದು ಬೊಜ್ಜು ಬೆಳೆಸಿಕೊಂಡಿದ್ದೀರಿ, ಇಲ್ಲದ ಕಾಯಿಲೆ ನಿಮಗೆ ಬಂದಿವೆ ಎಂದಿದ್ದೆವು” ಎಂದು ನೆನೆದರು.
“ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರು ಉತ್ಪಾದಕ ಸ್ಥಾನಕ್ಕೆ ಬರಲು ಅವಕಾಶ ಸಿಕ್ಕಿದೆ. ಅನುಭವ ಮಂಟಪದಲ್ಲಿ ಬಸವಣ್ಣನವರು ಮಹಿಳೆಯರಿಗೆ ಮುಖ್ಯಸ್ಥಾನ ನೀಡಿದ್ದರು. ನಂತರದಲ್ಲಿ ಹಿನ್ನಡೆಯಾಯಿತು. ಬಸವಣ್ಣನವರ ತತ್ವಗಳನ್ನು ಸಿದ್ದರಾಮಯ್ಯನವರು ಸದಾ ನೆನೆಯುತ್ತಾರೆ. ಇವನಾರವ ಎಂದೆನಿಸದರಯ್ಯ, ಇವ ನಮ್ಮವ ಎಂದಿನಿಸಯ್ಯ ಎಂದಿರುವ ಬಸವಣ್ಣನವರಿಂದ ಪ್ರೇರಿತರಾಗಿರುವ ಸಿದ್ದರಾಮಯ್ಯನವರು ಮಹಿಳೆಯರಿಗಾಗಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ ಎನಿಸುತ್ತದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಬಸ್ಸಿನಲ್ಲಿ ಸೀಟ್‌ಗಾಗಿ ಹೆಂಗಸರು ಹೊಡೆದಾಡಿರಬಹುದು. ಆದರೆ ಗಂಡಸರ ಮನಸ್ಸು ಹೇಗಿದೆ ಎಂದರೆ ಶಕ್ತಿ ಯೋಜನೆಯಿಂದಾಗಿಯೇ ಇದೆಲ್ಲ ಆಗುತ್ತಿದೆ ಎಂದು ಮೂದಲಿಸುತ್ತಾರೆ. ನಲವತ್ತೇಳು ಸೀಟ್ ಇರುವ ಬಸ್‌ನಲ್ಲಿ ಸೀಟ್‌ಗಾಗಿ ಜಗಳ ಆಗುವುದು ಸಹಜ. ಧರ್ಮಸ್ಥಳಕ್ಕೆ ಹೋಗಲು ಒಂದೊಂದು ಊರಿನಿಂದ ಒಬ್ಬ ಮಹಿಳೆ ಬಸ್ ಹತ್ತಿದರೂ ಜನ ಹೆಚ್ಚಾಗುತ್ತಾರೆ. ಸೀಟ್‌ಗಾಗಿ ಚಪ್ಪಲಿ ಹಿಡಿದುಕೊಂಡು ಹೊಡೆದಾಡಿದ ಗಂಡಸರನ್ನೂ ನೋಡಿದ್ದೇವೆ. ಸೀಟ್‌ಗಾಗಿ ಬರೀ ಹೆಂಗಸರಷ್ಟೇ ಜಗಳ ಆಡಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.
ಶಕ್ತಿ ಯೋಜನೆಯಿಂದ ಮಂಜುನಾಥ ಸ್ವಾಮಿ ದೇವಾಲಯದ ಆದಾಯ ಹೆಚ್ಚಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ನನಗೆ ಇದರ ಬಗ್ಗೆ ತರಕಾರು ಇದೆ. ಹೆಂಗಸರು ಹುಂಡಿಗೆ ಹಣ ಹಾಕುವುದಕ್ಕಿಂತ ತಮ್ಮ ಮಕ್ಕಳ ಶಿಕ್ಷಣಕ್ಕೆ ಆ ದುಡ್ಡನ್ನು ಬಳಸಬೇಕು ಎಂದು ಆಶಿಸಿದರು.
ಇದನ್ನೂ ಓದಿರಿ: ದೇಶದಲ್ಲಿರುವುದು ಬ್ರಾಹ್ಮಣ, ಬನಿಯಾ ರಿಪಬ್ಲಿಕ್: ವಿಎಲ್‌ಎನ್
ಅಕ್ಷರ ಕಲಿತವರಿಗೆ ಸಂವಿಧಾನದ ಬಗ್ಗೆ ತಿಳಿಸಬೇಕಿದೆ. ಕಲಿಯದವರೊಳಗೆ ಸಂವಿಧಾನವಿದೆ. ಸಂವಿಧಾನದ ಫಲಾನುಭವಿಗಳಾದವರು ಇಂದು ಋಣಗೇಡಿಗಳಾಗಿದ್ದಾರೆ. ಅವರಿಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.
ಗೋಷ್ಠಿಯ ಅಧ್ಯಕ್ಷತೆಯನ್ನು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ವಹಿಸಿದ್ದರು. ಚಿಂತಕ ಎಚ್.ಎಂ.ರುದ್ರಸ್ವಾಮಿ, ರಾಜಕೀಯ ವಿಶ್ಲೇಷಕ ಎ.ನಾರಾಯಣ, ಪ್ರೊ.ಎಸ್.ಸ್ವಪ್ನಾ ಇದ್ದರು.
