ತಂಬಾಕು: ಒಂದೊಂದು ಎಲೆಯ ಹಿಂದೆ ರೈತನ ಶ್ರಮ, ವಿಜ್ಞಾನ ಮತ್ತು ಅನಿಶ್ಚಿತತೆಯ ಬದುಕು ಇದೆ

Date:

ತಂಬಾಕು ಎಂದಾಕ್ಷಣ ಬಹುತೇಕರ ಮನಸ್ಸಿನಲ್ಲಿ ಮೂಡುವ ಮೊದಲ ಚಿತ್ರಣವೆಂದರೆ ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನ. ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಕಾರಣವಾಗುವ ವಸ್ತುವಿನ ಮೂಲ ಬೆಳೆ ಎಂಬ ಕಾರಣಕ್ಕೆ ತಂಬಾಕು ಮತ್ತು ಅದನ್ನು ಬೆಳೆಯುವ ರೈತರನ್ನು ಸಮಾಜವು ಹಲವೊಮ್ಮೆ ತಾತ್ಸಾರದಿಂದ ನೋಡುವುದು ಕಂಡುಬರುತ್ತದೆ. ಆದರೆ, ತಂಬಾಕು ಎಲೆಯ ಹಿಂದೆ ಒಬ್ಬ ರೈತನ ವರ್ಷದ ಪರಿಶ್ರಮ, ಬೆವರು, ಸಾಲದ ಹೊರೆ, ಆತಂಕ ಮತ್ತು ಕುಟುಂಬದ ಬದುಕಿನ ಹೋರಾಟ ಅಡಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವವರು ಬಹಳ ಕಡಿಮೆ.

- Advertisement -

ತಂಬಾಕು ಕೃಷಿ ರೈತನ ವೈಯಕ್ತಿಕ ಆಯ್ಕೆಯಷ್ಟೇ ಅಲ್ಲ. ಈ ಬೆಳೆ ಎಲ್ಲೆಡೆ ಬೆಳೆಯುವುದೂ ಸಾಧ್ಯವಿಲ್ಲ. ಇದಕ್ಕೆ ನಿರ್ದಿಷ್ಟ ಹವಾಮಾನ, ಮಣ್ಣಿನ ಗುಣಮಟ್ಟ, ವೈಜ್ಞಾನಿಕ ಕೃಷಿ ಪದ್ಧತಿ ಮತ್ತು ಸರ್ಕಾರದ ಪರವಾನಗಿ (ಲೈಸೆನ್ಸ್) ಅಗತ್ಯ. ಲೈಸೆನ್ಸ್ ಇಲ್ಲದೆ ಈ ಬೆಳೆಯನ್ನು ಬೆಳೆಯಲು ಅವಕಾಶವೇ ಇರುವುದಿಲ್ಲ. ಹೀಗಾಗಿ, ತಂಬಾಕು ಕೃಷಿಕರು ತಮ್ಮ ಇಷ್ಟದಂತೆ ಈ ಬೆಳೆ ಆರಿಸಿಕೊಂಡವರು ಎಂಬ ಕಲ್ಪನೆ ಸರಿಯಲ್ಲ. ಇದು ಹಲವು ದಶಕಗಳಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ನಡೆದು ಬಂದಿರುವ ನಿಯಂತ್ರಿತ ಕೃಷಿ ವ್ಯವಸ್ಥೆಯ ಭಾಗವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ತಂಬಾಕು ಕೃಷಿ ಇತರ ಬೆಳೆಗಳಂತೆ ಬೀಜ ಬಿತ್ತಿ, ನೀರು ಹಾಕಿ, ಕೊಯ್ಲು ಮಾಡುವ ಸರಳ ಪ್ರಕ್ರಿಯೆಯಲ್ಲ. ವರ್ಷದ ಆರಂಭದಲ್ಲೇ ಬೀಜದ ಬೆಡ್ ಸಿದ್ಧಪಡಿಸುವುದರಿಂದ ರೈತನ ಕೆಲಸ ಆರಂಭವಾಗುತ್ತದೆ. ನಂತರ ಸಸಿ ಬೆಳೆಸುವುದು, ಹೊಲ ಸಿದ್ಧಪಡಿಸುವುದು, ನಾಟಿ ಮಾಡುವುದು, ಕಳೆ ತೆಗೆಯುವುದು, ಗೊಬ್ಬರ ಮತ್ತು ಔಷಧಿಗಳನ್ನು ನಿಗದಿತ ಸಮಯಕ್ಕೆ ನೀಡುವುದು, ಹವಾಮಾನದ ಏರಿಳಿತವನ್ನು ಎದುರಿಸುವುದು, ಎಲೆಗಳನ್ನು ಸರಿಯಾದ ಹಂತದಲ್ಲಿ ಕೀಳುವುದು, ಅವುಗಳನ್ನು ಕ್ಯೂರಿಂಗ್ ಕೊಟ್ಟಿಗೆಯಲ್ಲಿ ವೈಜ್ಞಾನಿಕವಾಗಿ ಒಣಗಿಸುವುದು, ಗುಣಮಟ್ಟದ ಪ್ರಕಾರ ವಿಂಗಡಿಸುವುದು, ಬೇಲ್‌ಗಳನ್ನು ತಯಾರಿಸುವುದು, ಹರಾಜು ಕೇಂದ್ರಕ್ಕೆ ಸಾಗಿಸುವುದು, ಹರಾಜಿನಲ್ಲಿ ಬೆಲೆ ಸಿಗುವವರೆಗೆ ಕಾಯುವುದು ಮತ್ತು ಅಂತಿಮವಾಗಿ ಬ್ಯಾಂಕ್ ಮೂಲಕ ಹಣ ಪಡೆಯುವವರೆಗೆ ರೈತನ ಕೆಲಸ ನಿರಂತರವಾಗಿ ಸಾಗುತ್ತಲೇ ಇರುತ್ತದೆ.

ತಂಬಾಕು ಕೃಷಿಯಲ್ಲಿ ಸಮಯಕ್ಕೆ ಅಪಾರ ಮಹತ್ವವಿದೆ. ಒಂದು ಹಂತದಲ್ಲಿ ಕೆಲವೇ ದಿನಗಳ ವಿಳಂಬವಾದರೂ ಇಡೀ ವರ್ಷದ ಶ್ರಮ ವ್ಯರ್ಥವಾಗುವ ಸಾಧ್ಯತೆ ಇದೆ. ಸಸಿ ನಾಟಿಯಿಂದ ಹಿಡಿದು ಎಲೆ ಕೀಳುವ ಸಮಯದವರೆಗೆ ಪ್ರತಿಯೊಂದು ಹಂತವೂ ವೈಜ್ಞಾನಿಕ ಲೆಕ್ಕಾಚಾರದ ಮೇರೆಗೆ ನಡೆಯಬೇಕು. ಸ್ವಲ್ಪ ನಿರ್ಲಕ್ಷ್ಯ ಅಥವಾ ಹವಾಮಾನದ ಏರುಪೇರಿಯಿಂದ ಎಲೆಯ ಗುಣಮಟ್ಟ ಕುಸಿದರೆ, ಹರಾಜಿನಲ್ಲಿ ಬೆಲೆ ಗಣನೀಯವಾಗಿ ಇಳಿಯುತ್ತದೆ. ಆಗ ರೈತನ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ.

ತಂಬಾಕು ಕೃಷಿಗೆ ಹೆಚ್ಚಿನ ಬಂಡವಾಳವೂ ಬೇಕಾಗುತ್ತದೆ. ಕೂಲಿ ಕಾರ್ಮಿಕರ ವೆಚ್ಚ, ರಸಗೊಬ್ಬರ, ಔಷಧಿ, ಇಂಧನ, ಕ್ಯೂರಿಂಗ್ ವೆಚ್ಚ, ಸಾರಿಗೆ, ಬ್ಯಾಂಕ್ ಸಾಲದ ಬಡ್ಡಿ-ಇವೆಲ್ಲ ಸೇರಿ ರೈತನ ಮೇಲೆ ದೊಡ್ಡ ಆರ್ಥಿಕ ಹೊರೆ ಬೀಳುತ್ತದೆ. ಬೆಳೆ ಚೆನ್ನಾಗಿ ಬಂದರೂ ಉತ್ತಮ ಬೆಲೆ ಸಿಗುತ್ತದೆ ಎಂಬ ಖಾತರಿಯೂ ಇಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆ, ರಫ್ತು ಬೇಡಿಕೆ, ಗುಣಮಟ್ಟ ಮತ್ತು ಹರಾಜಿನ ಪರಿಸ್ಥಿತಿ ರೈತನ ಆದಾಯವನ್ನು ನಿರ್ಧರಿಸುತ್ತವೆ. ಹೀಗಾಗಿ ತಂಬಾಕು ರೈತ ಯಾವಾಗಲೂ ಅನಿಶ್ಚಿತತೆಯ ಮಧ್ಯೆಯೇ ಬದುಕುತ್ತಾನೆ.

ಇತ್ತೀಚಿನ ವರ್ಷಗಳಲ್ಲಿ ಮಳೆಯ ಕೊರತೆ, ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚದ ಏರಿಕೆ ಮತ್ತು ಮಾರುಕಟ್ಟೆಯ ಅನಿಶ್ಚಿತತೆ ತಂಬಾಕು ಕೃಷಿಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿವೆ. ಅದರ ನಡುವೆಯೂ ಸಾವಿರಾರು ರೈತ ಕುಟುಂಬಗಳು ಈ ಬೆಳೆಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿವೆ. ಅವರಿಗೆ ತಂಬಾಕು ಎಂದರೆ ಕೇವಲ ಒಂದು ಬೆಳೆ ಅಲ್ಲ; ಅದು ಅವರ ಬದುಕಿನ ಆಧಾರ.

ತಂಬಾಕಿನ ಬಳಕೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವೇ ಸರಿ. ಆದರೆ ಅದರ ಹೆಸರಿನಲ್ಲಿ ರೈತರನ್ನು ದೂಷಿಸುವುದು ನ್ಯಾಯವಲ್ಲ. ಉತ್ಪನ್ನವನ್ನು ಬಳಸುವವರ ಆಯ್ಕೆ ಮತ್ತು ಅದನ್ನು ನಿಯಂತ್ರಿಸುವ ನೀತಿಗಳು ಒಂದು ಭಾಗವಾದರೆ, ಕೃಷಿ ಮಾಡಿ ಜೀವನ ನಡೆಸುವ ರೈತನ ಬದುಕು ಮತ್ತೊಂದು ಭಾಗ. ಈ ಎರಡನ್ನೂ ಒಂದೇ ದೃಷ್ಟಿಯಿಂದ ನೋಡುವುದು ಸರಿಯಲ್ಲ.

ಫೆಬ್ರವರಿಯಿಂದಲೇ ಆರಂಭವಾಗುವ ಸಿದ್ಧತೆ

ಮಳೆಯೇ ಇಲ್ಲದ ಬೇಸಿಗೆ ಆರಂಭವಾಗುವ ಫೆಬ್ರವರಿ ತಿಂಗಳಲ್ಲೇ ತಂಬಾಕು ಕೃಷಿಯ ಮೊದಲ ಹಂತ ಆರಂಭವಾಗುತ್ತದೆ. ಬೀಜ ಬಿತ್ತನೆಗಾಗಿ ಮಣ್ಣನ್ನು ಎತ್ತರಿಸಿ ವಿಶೇಷವಾಗಿ ‘ಬೆಡ್’ಗಳನ್ನು ಸಿದ್ಧಪಡಿಸಲಾಗುತ್ತದೆ. ಈ ಬೆಡ್‌ಗಳಲ್ಲಿ ಅತಿ ಸೂಕ್ಷ್ಮವಾದ ತಂಬಾಕು ಬೀಜಗಳನ್ನು ಬಿತ್ತಲಾಗುತ್ತದೆ.

ಬೀಜ ಮೊಳಕೆಯೊಡೆಯಲು ಮತ್ತು ಸಸಿಗಳು ಆರೋಗ್ಯಕರವಾಗಿ ಬೆಳೆಯಲು ಪ್ರತಿದಿನ ಕ್ಯಾನ್ ಮೂಲಕ ಹಲವು ಬಾರಿ ನೀರನ್ನು ಸಿಂಪಡಿಸಬೇಕಾಗುತ್ತದೆ. ಒಂದು ದಿನವೂ ನಿರ್ಲಕ್ಷ್ಯ ಮಾಡಿದರೆ ಮೊಳಕೆ ಹಾಳಾಗುವ ಅಪಾಯವಿದೆ. ಹೀಗಾಗಿ ರೈತರು ಪ್ರತಿನಿತ್ಯ ಬೆಳಿಗ್ಗೆಯಿಂದ ಸಂಜೆವರೆಗೆ ಸಸಿಗಳ ಆರೈಕೆಯಲ್ಲಿ ತೊಡಗಿರುತ್ತಾರೆ. ಈ ಹಂತ ಏಪ್ರಿಲ್ ತಿಂಗಳವರೆಗೂ ಮುಂದುವರಿಯುತ್ತದೆ.

ಸಸಿಗಳಿಗೆ ಎದುರಾಗುವ ರೋಗಗಳ ಸವಾಲು

ಸಸಿಗಳು ಚೆನ್ನಾಗಿ ಬೆಳೆದ ನಂತರ ನೇರವಾಗಿ ನಾಟಿ ಮಾಡಬಹುದಾದರೂ, ಈ ಹಂತದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಚೊಟರು ರೋಗ, ಕಪ್ಪು ರೋಗ (ಬ್ಲಾಕ್), ಹೇನು ಕೀಟ, ಕೆಂಪು ಚುಕ್ಕೆ ರೋಗ ಸೇರಿದಂತೆ ವಿವಿಧ ಶಿಲೀಂಧ್ರ ಹಾಗೂ ಕೀಟಗಳ ದಾಳಿ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ನೀರಿನ ತೇವಾಂಶದ ಕೊರತೆ ಇದ್ದರೂ ಸಸಿಗಳು ದುರ್ಬಲಗೊಳ್ಳುತ್ತವೆ. ನಾಟಿ ಮಾಡುವ ವೇಳೆ ಗಿಡಗಳು ಮುರಿದು ಹೋಗುವ ಸಾಧ್ಯತೆಯೂ ಇದೆ. ಜೊತೆಗೆ ಮಳೆ ತಡವಾದರೆ, ಅತಿಯಾದ ಬಿಸಿಲು ಬಿದ್ದರೆ ಅಥವಾ ಅತಿವೃಷ್ಟಿಯಾದರೂ ಈ ಸಸಿಗಳು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಟ್ರೇ ಪದ್ಧತಿಯ ಹಿಂದೆ ಇರುವ ವೈಜ್ಞಾನಿಕ ಕಾರಣ

ಈ ಎಲ್ಲ ಸಮಸ್ಯೆಗಳನ್ನು ತಪ್ಪಿಸಲು ರೈತರು ಬೆಡ್‌ನಿಂದ ಸಸಿಗಳನ್ನು ಜಾಗರೂಕತೆಯಿಂದ ಕಿತ್ತು ಟ್ರೇಗಳಲ್ಲಿ ಸ್ಥಳಾಂತರಿಸುತ್ತಾರೆ. ಗೊಬ್ಬರ ಮತ್ತು ಮಣ್ಣಿನ ಮಿಶ್ರಣ ತುಂಬಿದ ಟ್ರೇಗಳಲ್ಲಿ ಮತ್ತೆ ಸಸಿಗಳನ್ನು ಬೆಳೆಸಲಾಗುತ್ತದೆ. ಈ ಟ್ರೇ ಪದ್ಧತಿಯಿಂದ ಸಸಿಗಳು ಹೆಚ್ಚು ಗಟ್ಟಿಯಾಗುವುದಲ್ಲದೆ, ನಾಟಿ ಮಾಡಿದ ನಂತರ ಬದುಕುಳಿಯುವ ಪ್ರಮಾಣವೂ ಹೆಚ್ಚಾಗುತ್ತದೆ. ಮೇ ಮತ್ತು ಜೂನ್ ತಿಂಗಳವರೆಗೂ ಈ ಆರೈಕೆ ಮುಂದುವರಿಯುತ್ತದೆ.

ಮುಂಗಾರು ಮಳೆ ಆರಂಭವಾದ ಕೂಡಲೇ ಟ್ರೇಗಳಲ್ಲಿ ಬೆಳೆದ ಸಸಿಗಳನ್ನು ಹೊಲಕ್ಕೆ ನಾಟಿ ಮಾಡಲಾಗುತ್ತದೆ. ಅಲ್ಲಿಂದ ತಂಬಾಕು ಕೃಷಿಯ ಅತ್ಯಂತ ಪ್ರಮುಖ ಹಂತ ಆರಂಭವಾಗುತ್ತದೆ. ಹೊಲದಲ್ಲಿ ಸಾಲುಗಳನ್ನು ಸರಿಪಡಿಸುವುದು, ಗೊಬ್ಬರ ನೀಡುವುದು, ಕಳೆ ತೆಗೆಯುವುದು, ಅಗತ್ಯವಿದ್ದಾಗ ಮಣ್ಣು ಏರಿಸುವುದು, ಕೀಟ ಮತ್ತು ರೋಗಗಳು ಬಾರದಂತೆ ಔಷಧಿ ಸಿಂಪಡಿಸುವುದು ಸೇರಿದಂತೆ ನಿರಂತರ ಆರೈಕೆ ನಡೆಯುತ್ತದೆ. ಹವಾಮಾನದ ಬದಲಾವಣೆಗಳನ್ನು ಗಮನಿಸಿ ರೈತರು ಪ್ರತಿದಿನ ಬೆಳೆ ಮೇಲ್ವಿಚಾರಣೆ ಮಾಡಬೇಕಾಗುತ್ತದೆ.

ಸೊಪ್ಪು ಮುರಿಯುವ ಕಠಿಣ ಕೆಲಸ

ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ತಂಬಾಕು ಸೊಪ್ಪು ಮುರಿಯುವ ಕೆಲಸ ಆರಂಭವಾಗುತ್ತದೆ. ಇದು ಅತ್ಯಂತ ಶ್ರಮದಾಯಕ ಹಂತವಾಗಿದೆ. ಹದವಾದ ಸೊಪ್ಪುಗಳನ್ನು ಆಯ್ದು ಮುರಿದು ಕಡ್ಡಿಗಳಿಗೆ ಕಟ್ಟಲಾಗುತ್ತದೆ. ನಂತರ ಅವುಗಳನ್ನು ಬ್ಯಾರನ್ (Barn) ಗಳಿಗೆ ಏರಿಸಲಾಗುತ್ತದೆ. ಈ ಪ್ರಕ್ರಿಯೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳವರೆಗೂ ಮುಂದುವರಿಯುತ್ತದೆ. ಸಮಯಕ್ಕೆ ಸರಿಯಾಗಿ ಸೊಪ್ಪು ಮುರಿಯದಿದ್ದರೆ ಗುಣಮಟ್ಟ ಕುಸಿಯುವ ಅಪಾಯವಿದೆ.

ಕ್ಯೂರಿಂಗ್-ನಿದ್ರೆಯಿಲ್ಲದ ದಿನಗಳು

ಬ್ಯಾರನ್‌ನಲ್ಲಿ ಸೊಪ್ಪುಗಳನ್ನು ಹದಗೊಳಿಸುವ ಪ್ರಕ್ರಿಯೆಯನ್ನು ಕ್ಯೂರಿಂಗ್ ಎಂದು ಕರೆಯಲಾಗುತ್ತದೆ. ಇದಕ್ಕಾಗಿ ಬ್ಯಾರನ್‌ಗೆ ಬೆಂಕಿ ಹಚ್ಚಿ ಹಂತ ಹಂತವಾಗಿ ಉಷ್ಣಾಂಶವನ್ನು ನಿಯಂತ್ರಿಸಿ ‘ರೈಸಿಂಗ್’ ನೀಡಲಾಗುತ್ತದೆ. ಈ ಸಮಯದಲ್ಲಿ ಬೆಂಕಿ ಆರದಂತೆ ಹಗಲು-ರಾತ್ರಿ ಎನ್ನದೆ ರೈತರು ಮತ್ತು ಅವರ ಕುಟುಂಬದವರು ಸರದಿಯಲ್ಲಿ ಸೌದೆ ಹಾಕುತ್ತಾ ಕಾವಲು ಕಾಯಬೇಕು. ಒಂದೇ ಕ್ಷಣ ನಿರ್ಲಕ್ಷ್ಯ ಮಾಡಿದರೂ ಇಡೀ ಬೆಳೆ ಹಾಳಾಗುವ ಸಾಧ್ಯತೆ ಇದೆ. ಸರಿಯಾದ ಉಷ್ಣಾಂಶದಲ್ಲಿ ಸೊಪ್ಪು ನಿಧಾನವಾಗಿ ಹಸಿರು ಬಣ್ಣದಿಂದ ಹೊಳೆಯುವ ಚಿನ್ನದ ಬಣ್ಣಕ್ಕೆ ತಿರುಗುತ್ತದೆ. ಇದೇ ಗುಣಮಟ್ಟದ ವರ್ಜೀನಿಯಾ ತಂಬಾಕಿನ ಪ್ರಮುಖ ಲಕ್ಷಣವಾಗಿದೆ.

ಕಂಡೀಷನ್ ಮಾಡಿ ಸಂಗ್ರಹ

ಕ್ಯೂರಿಂಗ್ ಮುಗಿದ ನಂತರ ಹಪ್ಪಳದಂತೆ ಒಣಗಿರುವ ಸೊಪ್ಪು ಮತ್ತೆ ಸ್ವಲ್ಪ ಮೆತ್ತಗಾಗಲು ಎರಡು ದಿನಗಳಿಗಿಂತ ಹೆಚ್ಚು ಕಾಲ ‘ಕಂಡೀಷನ್’ ಮಾಡಲಾಗುತ್ತದೆ. ನಂತರ ಬ್ಯಾರನ್‌ನಿಂದ ಕಡ್ಡಿಗಳನ್ನು ಇಳಿಸಿ, ಸೊಪ್ಪುಗಳನ್ನು ಬಿಡಿಸಿ ಒಂದೆಡೆ ಒಟ್ಟಲಾಗುತ್ತದೆ. ಗಾಳಿ ಚೆನ್ನಾಗಿ ಆಡುವ, ಹೆಚ್ಚು ಉಷ್ಣತೆ ಇಲ್ಲದ ಸ್ಥಳದಲ್ಲಿ ಅವುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ.

ಗ್ರೇಡಿಂಗ್

‘ಗ್ರೇಡಿಂಗ್’ ಎಂದರೆ ಒಣಗಿಸಿದ ತಂಬಾಕು ಎಲೆಗಳನ್ನು ಅವುಗಳ ಬಣ್ಣ, ಗಾತ್ರ, ದಪ್ಪ, ಪಕ್ವತೆ, ಹಾನಿಯ ಪ್ರಮಾಣ ಹಾಗೂ ಇತರ ಭೌತಿಕ-ರಾಸಾಯನಿಕ ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸುವ ವೈಜ್ಞಾನಿಕ ವಿಧಾನವಾಗಿದೆ. ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯುವ ಫ್ಲೂ-ಕ್ಯೂರ್ಡ್ ವರ್ಜೀನಿಯಾ (FCV) ತಂಬಾಕಿನಲ್ಲಿ ಈ ವ್ಯವಸ್ಥೆ ಅತ್ಯಂತ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ.

ಸಸ್ಯದ ಯಾವ ಭಾಗದ ಎಲೆ ಎಂಬುದೇ ಮೊದಲ ಮಾನದಂಡ:

ತಂಬಾಕು ಸಸ್ಯದ ಪ್ರತಿಯೊಂದು ಭಾಗದಲ್ಲಿರುವ ಎಲೆಗಳ ಗುಣಲಕ್ಷಣಗಳು ವಿಭಿನ್ನವಾಗಿರುತ್ತವೆ. ಆದ್ದರಿಂದ ಮೊದಲು ಎಲೆಗಳನ್ನು ಅವು ಬೆಳೆದಿರುವ ಸ್ಥಾನವನ್ನು ಆಧರಿಸಿ ನಾಲ್ಕು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.

  • ಪ್ರೈಮಿಂಗ್ಸ್ (Primings – P): ಸಸ್ಯದ ಕೆಳಭಾಗದಲ್ಲಿರುವ ಮೊದಲ ಎಲೆಗಳು. ಇವು ತೆಳುವಾಗಿದ್ದು ತೂಕ ಕಡಿಮೆ ಇರುತ್ತದೆ.
  • ಲಾಗ್ಸ್ (Lugs – X):ಕೆಳ-ಮಧ್ಯ ಭಾಗದ ಎಲೆಗಳು. ಇವು ಮಧ್ಯಮ ದಪ್ಪ ಹಾಗೂ ಸಮತೋಲನ ಗುಣಮಟ್ಟ ಹೊಂದಿರುತ್ತವೆ.
  • ಲೀಫ್ (Leaf – L):ಸಸ್ಯದ ಮಧ್ಯ ಹಾಗೂ ಮೇಲ್ಭಾಗದಲ್ಲಿರುವ ದೊಡ್ಡ ಎಲೆಗಳು. ಇವು ಉತ್ತಮ ತೂಕ, ಉತ್ತಮ ಗುಣಮಟ್ಟ ಮತ್ತು ಹೆಚ್ಚಿನ ವಾಣಿಜ್ಯ ಮೌಲ್ಯ ಹೊಂದಿರುತ್ತವೆ.
  • ಟಿಪ್ಸ್ (Tips – T):ಸಸ್ಯದ ತುದಿಯ ಎಲೆಗಳು. ಇವು ದಪ್ಪವಾಗಿದ್ದು ನಿಕೋಟಿನ್ ಪ್ರಮಾಣ ಹಾಗೂ ತೂಕ ಹೆಚ್ಚಿರುವ ಕಾರಣ ವಿಶೇಷ ಮೌಲ್ಯ ಹೊಂದಿರುತ್ತವೆ.

ಬಣ್ಣವೇ ಗುಣಮಟ್ಟದ ಪ್ರತಿಬಿಂಬ

ಒಣಗಿಸುವ ಪ್ರಕ್ರಿಯೆ ಸರಿಯಾಗಿ ನಡೆದಿದೆಯೇ ಎಂಬುದನ್ನು ತಂಬಾಕಿನ ಬಣ್ಣವೇ ತಿಳಿಸುತ್ತದೆ. ಗ್ರೇಡಿಂಗ್ ವೇಳೆ ಬಣ್ಣಕ್ಕೆ ವಿಶೇಷ ಮಹತ್ವ ನೀಡಲಾಗುತ್ತದೆ.

  • L (Lemon): ನಿಂಬೆ ಹಳದಿ-ಅತ್ಯುತ್ತಮ ಗುಣಮಟ್ಟ.
  • F (Orange): ಕಿತ್ತಳೆ ಅಥವಾ ಕಡು ಹಳದಿ.
  • D (Dark): ಕಂದು ಅಥವಾ ಗಾಢ ಬಣ್ಣ.
  • R (Red): ಕೆಂಪು ಬಣ್ಣದ ಎಲೆಗಳು.
  • G (Green): ಹಸಿರು ಬಣ್ಣ ಉಳಿಸಿಕೊಂಡಿರುವ ಎಲೆಗಳು.

ಸಾಮಾನ್ಯವಾಗಿ ನಿಂಬೆ ಹಳದಿ ಮತ್ತು ಸಮತೋಲನ ಕಿತ್ತಳೆ ಬಣ್ಣದ ಎಲೆಗಳಿಗೆ ಹರಾಜಿನಲ್ಲಿ ಹೆಚ್ಚಿನ ಬೇಡಿಕೆ ಹಾಗೂ ಉತ್ತಮ ಬೆಲೆ ದೊರೆಯುತ್ತದೆ.

ಗುಣಮಟ್ಟದ ಶ್ರೇಣಿಗಳೂ ಮಹತ್ವದವು

ಪ್ರತಿಯೊಂದು ಎಲೆಯ ಸ್ಥಾನ ಹಾಗೂ ಬಣ್ಣವನ್ನು ಪರಿಗಣಿಸಿದ ನಂತರ ಅದರ ಗುಣಮಟ್ಟವನ್ನು 1, 2, 3, 4, 5 ಮುಂತಾದ ಸಂಖ್ಯೆಗಳ ಮೂಲಕ ಸೂಚಿಸಲಾಗುತ್ತದೆ. ಉದಾಹರಣೆಗೆ PL1, LL1 ಮೊದಲಾದ ಗ್ರೇಡ್‌ಗಳು ಅತ್ಯುತ್ತಮ ಗುಣಮಟ್ಟವನ್ನು ಸೂಚಿಸುತ್ತವೆ. ಸಂಖ್ಯೆ ಹೆಚ್ಚಾದಂತೆ ಗುಣಮಟ್ಟ ಕಡಿಮೆಯಾಗುತ್ತದೆ. ಹುಳು ಹಾನಿ, ಕಲೆ, ಮುರಿದ ಎಲೆಗಳು, ಸರಿಯಾಗಿ ಒಣಗದ ಎಲೆಗಳು ಅಥವಾ ವ್ಯಾಪಾರಕ್ಕೆ ಯೋಗ್ಯವಲ್ಲದ ಎಲೆಗಳನ್ನು No Grade (NOG) ಎಂದು ಪ್ರತ್ಯೇಕಿಸಲಾಗುತ್ತದೆ.

ಗ್ರೇಡಿಂಗ್ ಒಂದು ಕೌಶಲ್ಯ

ತಂಬಾಕು ಗ್ರೇಡಿಂಗ್ ಯಂತ್ರದಿಂದ ಮಾತ್ರ ಸಾಧ್ಯವಾಗುವ ಕೆಲಸವಲ್ಲ. ಅನುಭವ ಹೊಂದಿರುವ ಗ್ರೇಡರ್‌ಗಳು ಪ್ರತಿಯೊಂದು ಎಲೆಯನ್ನು ಕೈಯಲ್ಲಿ ಹಿಡಿದು ಅದರ ಬಣ್ಣ, ದಪ್ಪ, ಗಾತ್ರ, ತೂಕ, ಹೊಳಪು ಹಾಗೂ ಒಣಗಿರುವ ಮಟ್ಟವನ್ನು ಪರಿಶೀಲಿಸಿ ಒಂದೇ ಗುಣಮಟ್ಟದ ಎಲೆಗಳನ್ನು ಒಂದು ಕಟ್ಟು ಮಾಡುತ್ತಾರೆ. ಉತ್ತಮ ಗ್ರೇಡಿಂಗ್ ಮಾಡುವವರಿಗೆ ತಂಬಾಕು ಉದ್ಯಮದಲ್ಲಿ ವಿಶೇಷ ಬೇಡಿಕೆಯಿರುತ್ತದೆ.

ಗ್ರೇಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಒಣಗಿದ ತಂಬಾಕು ಎಲೆಗಳನ್ನು ಬೇಲಿಂಗ್ (Baling) ಮಾಡಲಾಗುತ್ತದೆ. ಹೈಡ್ರಾಲಿಕ್ ಯಂತ್ರದ ಸಹಾಯದಿಂದ ಎಲೆಗಳನ್ನು ಸಂಕುಚಿತಗೊಳಿಸಿ ದಾರ ಅಥವಾ ಚೀಲದಿಂದ ಕಟ್ಟಲಾಗುತ್ತದೆ. ಈ ಬಂಡಲ್‌ಗಳನ್ನು ತಂಬಾಕು ಬೇಲ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಒಂದು ಬೇಲ್ 20 ಕೆ.ಜಿ.ಯಿಂದ ಗರಿಷ್ಠ 150 ಕೆ.ಜಿ.ವರೆಗೆ ತೂಕ ಹೊಂದಿರುತ್ತದೆ. ಈ ಬೇಲ್‌ಗಳೇ ನಂತರ ಹರಾಜು ಮಾರುಕಟ್ಟೆಗೆ ಸಾಗುತ್ತವೆ.

ಕರ್ನಾಟಕದಲ್ಲಿ ತಂಬಾಕು ಮಂಡಳಿಯ ಹರಾಜು ಪ್ರಕ್ರಿಯೆ ಸಾಮಾನ್ಯವಾಗಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಆರಂಭವಾಗಿ ಮಾರ್ಚ್-ಏಪ್ರಿಲ್‌ನಲ್ಲಿ ಮುಕ್ತಾಯಗೊಳ್ಳುತ್ತದೆ. ಇಳುವರಿ, ಅಧಿಸೂಚನೆ ಹಾಗೂ ಮಾರುಕಟ್ಟೆ ಪರಿಸ್ಥಿತಿಯ ಆಧಾರದ ಮೇಲೆ ಕೆಲವೊಮ್ಮೆ ಹರಾಜು ಅವಧಿ ಇನ್ನಷ್ಟು ವಿಸ್ತರಿಸಲಾಗುತ್ತದೆ. 2026ರ ಸಾಲಿನಲ್ಲಿ ಹರಾಜು ಜೂನ್ ತಿಂಗಳವರೆಗೂ ಮುಂದುವರಿದಿತ್ತು.

ಹರಾಜಿನ ದಿನ ರೈತರು ತಮ್ಮ ಬೇಲ್‌ಗಳನ್ನು ಆಯಾ ಗ್ರಾಮದ ವ್ಯಾಪ್ತಿಯ ತಂಬಾಕು ಮಂಡಳಿಯ ಹರಾಜು ವೇದಿಕೆಗೆ ತಂದು ಸಾಲಾಗಿ ಜೋಡಿಸುತ್ತಾರೆ. ಪ್ರತಿಯೊಂದು ಬೇಲ್‌ನ ತೂಕ, ದರ್ಜೆ ಮತ್ತು ಗುಣಮಟ್ಟವನ್ನು ಪರಿಶೀಲಿಸಿ ಪ್ರತ್ಯೇಕ ಲಾಟ್ ಸಂಖ್ಯೆ ನೀಡಲಾಗುತ್ತದೆ. ಇದಾದ ನಂತರ ಆರಂಭವಾಗುವುದು ಅತ್ಯಂತ ಕುತೂಹಲಕಾರಿ ಹಾಗೂ ಪಾರದರ್ಶಕವಾದ ಇ-ಹರಾಜು (e-Auction) ಪ್ರಕ್ರಿಯೆ.

ಎಫ್‌ಸಿವಿ ತಂಬಾಕಿನ ಹರಾಜು ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ವ್ಯವಸ್ಥೆಯಲ್ಲಿ ನಡೆಯುತ್ತದೆ. ಐಟಿಸಿ ಲಿಮಿಟೆಡ್, ಗಾಡ್‌ಫ್ರೆ ಫಿಲಿಪ್ಸ್ ಇಂಡಿಯಾ ಲಿಮಿಟೆಡ್, ವಿಎಸ್‌ಟಿ ಇಂಡಸ್ಟ್ರೀಸ್, ಗೋಲ್ಡನ್ ಟೊಬ್ಯಾಕೋ ಲಿಮಿಟೆಡ್, ಎನ್‌ಟಿಸಿ ಇಂಡಸ್ಟ್ರೀಸ್ ಸೇರಿದಂತೆ ಭಾರತೀಯ ತಂಬಾಕು ಸಂಘದ (ITA) ಖರೀದಿದಾರರು ಹ್ಯಾಂಡ್ ಹೆಲ್ಡ್ ಟರ್ಮಿನಲ್ (HHT) ಉಪಕರಣದ ಮೂಲಕ ಬಿಡ್ ಸಲ್ಲಿಸುತ್ತಾರೆ.

ಹರಾಜು ಸೂಪರಿಂಟೆಂಡೆಂಟ್ ಆರಂಭಿಕ ಬೆಲೆಯನ್ನು ದಾಖಲಿಸಿದ ನಂತರ ಖರೀದಿದಾರರ ನಡುವೆ ಸ್ಪರ್ಧೆ ಆರಂಭವಾಗುತ್ತದೆ. ಪ್ರತಿಯೊಬ್ಬರೂ ಕನಿಷ್ಠ ₹1 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಬೆಲೆ ಹೆಚ್ಚಿಸಬಹುದು. ಅತ್ಯಧಿಕ ಬೆಲೆ ದಾಖಲಿಸಿದ ಖರೀದಿದಾರನಿಗೆ ಆ ಬೇಲ್ ಮಾರಾಟವಾಗುತ್ತದೆ. ಆಶ್ಚರ್ಯವೆಂದರೆ, ಒಂದು ಬೇಲ್‌ನ ಮಾರಾಟಕ್ಕೆ ಕೇವಲ 4 ರಿಂದ 5 ಸೆಕೆಂಡುಗಳು ಮಾತ್ರ ಸಾಕಾಗುತ್ತವೆ. ಹರಾಜಿನಲ್ಲಿ ದೊರೆತ ಬೆಲೆ ರೈತನಿಗೆ ತೃಪ್ತಿಕರವಾಗದಿದ್ದರೆ ‘ರೈತ ತಿರಸ್ಕಾರ’ (Rytha Rejection) ಆಯ್ಕೆಯನ್ನು ಬಳಸಿಕೊಂಡು ಬೇಲ್ ಅನ್ನು ಹಿಂದಕ್ಕೆ ಪಡೆಯುವ ಅವಕಾಶವೂ ಇರುತ್ತದೆ. ಇದು ರೈತರ ಹಿತಾಸಕ್ತಿಯನ್ನು ಕಾಪಾಡುವ ಪ್ರಮುಖ ವ್ಯವಸ್ಥೆಯಾಗಿದೆ.

ಹರಾಜು ಮುಗಿದ ಬಳಿಕ ರೈತರಿಗೆ ತಕ್ಷಣವೇ ತೂಕ ಹಾಗೂ ಮಾರಾಟದ ವಿವರಗಳಿರುವ ಬೇಲ್ ಟಿಕೆಟ್ (Bale Ticket) ಅಥವಾ ಮಾರಾಟ ರಶೀದಿ ನೀಡಲಾಗುತ್ತದೆ. ತಂಬಾಕು ಮಂಡಳಿಯು ಸಾಮಾನ್ಯವಾಗಿ ಹರಾಜಿನ ದಿನಾಂಕದಿಂದ ಒಂಬತ್ತು ದಿನಗಳೊಳಗೆ ರೈತರ ನೋಂದಾಯಿತ ಬ್ಯಾಂಕ್ ಖಾತೆಗೆ RTGS ಅಥವಾ NEFT ಮೂಲಕ ಹಣ ಜಮೆ ಮಾಡುತ್ತದೆ. ಆದರೆ ರೈತನ ಕೈಗೆ ಸಂಪೂರ್ಣ ಹಣ ತಕ್ಷಣ ಸಿಗುವುದಿಲ್ಲ. ಬ್ಯಾಂಕ್‌ನಿಂದ ಪಡೆದ ಕೃಷಿ ಸಾಲ, ತಂಬಾಕು ಮಂಡಳಿಯಿಂದ ಪಡೆದ ಬೀಜ ಹಾಗೂ ರಸಗೊಬ್ಬರ ಸಾಲ ಸೇರಿದಂತೆ ವಿವಿಧ ಬಾಕಿಗಳನ್ನು ಮೊದಲು ಕಡಿತಗೊಳಿಸಲಾಗುತ್ತದೆ. ಉಳಿದ ಮೊತ್ತ ಮಾತ್ರ ರೈತನ ಖಾತೆಗೆ ಜಮೆಯಾಗುತ್ತದೆ. ಹೀಗಾಗಿ ರೈತನಿಗೆ ಬಂದ ಹಣವೇ ನಿಜವಾದ ಲಾಭವಲ್ಲ; ಅದು ಅವನ ಹೂಡಿಕೆ, ಸಾಲ ಮತ್ತು ವೆಚ್ಚಗಳ ನಂತರ ಉಳಿದ ಮೊತ್ತ ಮಾತ್ರ.

ತಂಬಾಕು ಕೃಷಿಯನ್ನು ಹೊರಗಿನಿಂದ ನೋಡುವವರಿಗೆ ಅದು ಕೇವಲ ಒಂದು ವಾಣಿಜ್ಯ ಬೆಳೆ ಎಂದು ಕಾಣಬಹುದು. ಆದರೆ ಅದರ ಹಿಂದೆ ಬೀಜ ತಯಾರಿ, ನಾಟಿ, ಬೆಳೆ ನಿರ್ವಹಣೆ, ಎಲೆ ಕೊಯ್ಲು, ಕ್ಯೂರಿಂಗ್, ಗ್ರೇಡಿಂಗ್, ಬೇಲಿಂಗ್, ಹರಾಜು ಮತ್ತು ಹಣ ಪಾವತಿ ಎಂಬ ದೀರ್ಘ ಪ್ರಕ್ರಿಯೆ ಅಡಗಿದೆ. ಫೆಬ್ರವರಿಯಲ್ಲಿ ಬೀಜ ಬಿತ್ತನೆಯಿಂದ ಆರಂಭವಾಗುವ ಈ ಪಯಣ, ಮುಂದಿನ ವರ್ಷದ ಏಪ್ರಿಲ್ ಅಥವಾ ಕೆಲವೊಮ್ಮೆ ಜೂನ್‌ವರೆಗೂ ಮುಂದುವರಿಯುತ್ತದೆ. ಅಂದರೆ ಸುಮಾರು 14–15 ತಿಂಗಳ ನಿರಂತರ ಶ್ರಮ ಒಂದು ತಂಬಾಕಿನ ಬೇಲ್‌ನಲ್ಲಿ ಅಡಗಿರುತ್ತದೆ.

ಈ ವಿಶೇಷ ಸುದ್ದಿ ಓದಿದ್ದೀರಾ?ಮಳೆ ಕೈಕೊಟ್ಟರೂ ತಂಬಾಕು ಕೈಬಿಡಲಿಲ್ಲ: ಮೈಸೂರು ಜಿಲ್ಲೆಯಲ್ಲಿ ಬರದ ನಡುವೆಯೂ ಮುಂದುವರಿದ ತಂಬಾಕು ಕೃಷಿ

ಆದ್ದರಿಂದ ತಂಬಾಕು ರೈತನನ್ನು ಕೇವಲ ತಂಬಾಕು ಬೆಳೆಯುವವನಾಗಿ ನೋಡುವುದಕ್ಕಿಂತ, ಪ್ರಕೃತಿಯೊಂದಿಗೆ ಹೋರಾಡಿ, ಮಾರುಕಟ್ಟೆಯ ಅನಿಶ್ಚಿತತೆಯನ್ನು ಎದುರಿಸಿ, ವರ್ಷಕ್ಕೂ ಹೆಚ್ಚು ಕಾಲ ಶ್ರಮಿಸಿ ತನ್ನ ಬೆಳೆಗೆ ನ್ಯಾಯಯುತ ಬೆಲೆ ನಿರೀಕ್ಷಿಸುವ ಕೃಷಿಕನಾಗಿ ಸಮಾಜ ನೋಡಬೇಕಿದೆ. ಶ್ರಮಕ್ಕೆ ತಕ್ಕ ಬೆಲೆ ದೊರೆತರೆ ಮಾತ್ರ ರೈತನ ಬದುಕು ನೆಮ್ಮದಿಯಾಗುತ್ತದೆ. ಇಲ್ಲದಿದ್ದರೆ ವರ್ಷಪೂರ್ತಿ ಮಾಡಿದ ಶ್ರಮ ನಷ್ಟವಾಗಿ, ಸಾಲದ ಹೊರೆ ಮತ್ತಷ್ಟು ಹೆಚ್ಚುತ್ತದೆ. ತಂಬಾಕು ಕೃಷಿಯ ನಿಜವಾದ ಕಥೆ ಇದೇ.

ಸಂಚಿಕೆ ಮುಂದುವರೆಯುತ್ತದೆ…

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ ; ಮಳೆಯಲ್ಲೂ ಮುಂದುವರಿದ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಎಸ್‌ಐಆರ್‌ ಪ್ರಕ್ರಿಯೆ ರದ್ದುಗೊಳಿಸುವಂತೆ ಹಾಗೂ ಮುಖ್ಯ ಚುನಾವಣಾ...

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಶೇ.86.97ರಷ್ಟು ದಾಖಲೆ ಮತದಾನ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯು ಶುಕ್ರವಾರ ಶಾಂತಿಯುತವಾಗಿ...

ಉಡುಪಿ | 110 ಕೋಟಿ ರೂ. ವೆಚ್ಚದ ಆಸ್ಪತ್ರೆಗೆ ಹಳೆಯ ಪರಿಕರಗಳ ಅಳವಡಿಕೆ ಸಲ್ಲದು: ಫ್ರ್ಯಾಂಕಿ ಡಿಸೋಜ

ಸುಮಾರು 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಉಡುಪಿ ಜಿಲ್ಲಾ...