12ನೇ ಶತಮಾನದಲ್ಲಿ ಅಸ್ಪೃಶ್ಯರಾಗಿ ಹುಟ್ಟಿದ್ದು ನಮ್ಮ ಪೂರ್ವಜನ್ಮದ ಪಾಪದ ಫಲ ಎಂಬ ಭ್ರಮೆಯಲ್ಲಿ ವರ್ಣವ್ಯವಸ್ಥೆಯ ಕಟ್ಟು ಪಾಡುಗಳಿಗೆ ಸಿಲುಕಿ ಪ್ರಾಣಿಗಳಿಗಿಂತ ಕೀಳಾಗಿ ಬದುಕುತ್ತಿದ್ದ ಜನಸಮುದಾಯ ಆ ಸಂದರ್ಭದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ನೊಂದವರಿಗೆ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ನೀಡಿ ಅವರನ್ನು ಭ್ರಮೆಯಿಂದ ಹೊರತಂದು ಹೊಸ ಬದುಕು ಕಟ್ಟಿಕೊಳ್ಳುವಂತೆ ಮಾಡಿಕೊಟ್ಟಿತ್ತು.
21 ನೇ ಶತಮಾನದಲ್ಲಿಯೂ ಕೂಡ ಜನತೆ ದೇಶದ ಅಭಿವೃದ್ಧಿ ಎಂದರೆ ದೇಶದ ಜನತೆಯ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಎಂಬ ಅರಿವು ಇಲ್ಲದೆಯೇ ದೇಶವನ್ನಾಳುತ್ತಿರುವವರ ಸುಳ್ಳು ಭರವಸೆಗಳ ಭ್ರಮೆಯಲ್ಲಿಯೇ ಬದುಕುತ್ತಿದ್ದಾರೆ. ಅವರಿಗೆ ಸತ್ಯದ ಅರಿವು ಮೂಡಿಸಲು 12ನೇ ಶತಮಾನದ ಶರಣರ ಅನುಭವ ಮಂಟಪವು ಅಂಗೀಕರಿಸಿದ ತತ್ವಗಳನ್ನು ಪರಿಚಯಿಸುವುದು ಹಾಗೂ ಆಳುವವರೂ ಕೂಡಾ ಅದನ್ನು ಅನುಸರಿಸುವಂತೆ ಮಾಡುವುದು ಅವಶ್ಯವಿದೆ. ಆಗ ಮಾತ್ರ ದೇಶದ ಅಭಿವೃದ್ದಿ ಹಾಗೂ ತಳಸಮುದಾಯವು ಸಮಾಜದಲ್ಲಿ ನ್ಯಾಯಯುತವಾಗಿ ಬದುಕುವಂತಾಗಲು ಸಾಧ್ಯವಾಗುತ್ತದೆ.
ಏಕೆಂದರೆ ದೇಶದಲ್ಲಿಂದು ಉಳ್ಳವರು ಇರದವರ ಮೇಲೆ ತಮ್ಮ ಸಿದ್ಧಾಂತಗಳನ್ನು ಒತ್ತಾಯ ಪೂರ್ವಕವಾಗಿ ಹೇರಲು ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಅಭಿವೃದ್ಧಿಯನ್ನು ನಿರ್ಲಕ್ಷಿಸಿ ಆಡಳಿತ ನಡೆಸುತ್ತಿದ್ದಾರೆ. ಈ ಕಾರಣಕ್ಕಾಗಿ ಜನತೆಯು ಸಮಾಜದಲ್ಲಿ ಘನತೆಯಿಂದ ಬದುಕಲು ಶರಣರು ಅಂಗೀಕರಿಸಿದ ತತ್ವಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ.
ಅಂದಿನ ಅನುಭವ ಮಂಟಪ ಮತ್ತು ಇಂದಿನ ಸಂಸತ್ತು
ಅಂದಿನ ಅನುಭವ ಮಂಟಪದಲ್ಲಿ ಸಮಗಾರ ಹರಳಯ್ಯ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಹೀಗೆ ಎಲ್ಲ ಜಾತಿ ಸಮುದಾಯದ 770 ಸದಸ್ಯರಿದ್ದರು. ಆದರೆ ಇಂದಿನ ನಮ್ಮ ಸಂಸತ್ತಿನಲ್ಲಿ ಪ್ರಬಲ ಸಮುದಾಯಗಳದ್ದೇ ಮೇಲುಗೈ ಆಗಿದೆ. ಅನುಭವ ಮಂಟಪದಲ್ಲಿ ಕಸ ಗುಡಿಸುವ ಸತ್ಯಕ್ಕನಿಗೂ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮ ಪ್ರಭುಗಳಿಗೂ, ಪ್ರಧಾನಿ ಬಸವಣ್ಣನವರಿಗೂ ಒಂದೇ ರೀತಿಯ ಸ್ಥಾನಮಾನಗಳಿದ್ದವು. ವರ್ಣ, ಲಿಂಗ, ಕಾಯಕ, ಜಾತಿಬೇದವಿಲ್ಲದೆ ಯಾರು ಬೇಕಾದರೂ ಪ್ರಶ್ನಿಸಬಹುದಿತ್ತು. ಅನೇಕ ವಿಷಯಗಳ ಕುರಿತು ಚರ್ಚೆಗೈಯಲು ಅವಕಾಶವಿತ್ತು.
ಒಟ್ಟಿನಲ್ಲಿ ಅನುಭವ ಮಂಟಪವು ಮಾನವ ಹಕ್ಕುಗಳ ರಕ್ಷಣೆಯ ಕೇಂದ್ರವಾಗಿತ್ತು. ಇದುವೆ ಮಾನವ ಕುಲದ ಮೊದಲ ಸಂಸತ್ತಿನ ವೈಶಿಷ್ಟ್ಯ. ಆದರೆ ಇಂದಿನ ಸಂಸತ್ತಿನ ಸಭೆಯಲ್ಲಿ ಯಾರೂ ಕೂಡ ಸರ್ಕಾರವನ್ನು ಪ್ರಶ್ನಿಸುವಂತಿಲ್ಲ. ಕೇಂದ್ರ ರೂಪಿಸಿದ ಅನೇಕ ಜನವಿರೋಧಿ ನಿಯಮಾವಳಿಗಳನ್ನು ವಿರೋಧಿಸುವಂತಿಲ್ಲ. ವಿರೋಧಿಸಿದವರನ್ನು ದೇಶ ದ್ರೋಹಿಗಳೆಂಬಂತೆ ಬಿಂಬಿಸಲಾಗುತ್ತಿದೆ ಅಷ್ಟೇ ಅಲ್ಲದೆ ಅಂತಹ ಸಂಸತ್ ಸದಸ್ಯರನ್ನು ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸುವ ಪಿತೂರಿಗಳೂ ನಡೆಯುತ್ತಿವೆ. ನಮ್ಮ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ದೊಡ್ಡ ಉದ್ಯಮಿಗಳ ಪರವಾಗಿ ನಿಯಮಗಳನ್ನು ರೂಪಿಸಿದಾಗ ಅದನ್ನು ವಿರೋಧಿಸಿ ಹೋರಾಟ ನಡೆಸಿದ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಇಂದಿನ ಸಂಸತ್ತಿನ ನಾಯಕರು ಮಾಡುತ್ತಿದ್ದಾರೆ.
ದಲಿತರ ಮನೆಯಲ್ಲಿ ವಾಸ್ತವ್ಯ ಅಂದು ಮತ್ತು ಇಂದು
ಇಂದಿನ ರಾಜಕಾರಣಕ್ಕೆ ಓಲೈಕೆಯು ಮುಖ್ಯವಾಗಿರುವ ಕಾರಣ ದಲಿತ ಕೇರಿಗಳಲ್ಲಿ ವಾಸ್ತವ್ಯ ಮತ್ತು ದಲಿತ ಮನೆಯಲ್ಲಿ ಊಟ ಮಾಡಿದ್ದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಮತಗಳಿಕೆಗಾಗಿ ಪ್ರಚಾರದ ವಿಷಯವನ್ನಾಗಿಸಿಕೊಂಡಿದ್ದಾರೆ. ಆದರೆ ಬಸವಣ್ಣನವರು 12ನೇ ಶತಮಾನದಲ್ಲಿ ಕೊಳಗೇರಿಗಳಿಗೆ ಭೇಟಿ ನೀಡಿ ಅಸ್ಪೃಶ್ಯರೆನಿಸಿಕೊಂಡಿದ್ದ ಜನತೆಗೆ ಲಿಂಗದೀಕ್ಷೆಯನ್ನು ನೀಡಿ ಎಲ್ಲರೂ ಸಮಾನರೆಂದು ಧೈರ್ಯ ತುಂಬಿದ್ದರಲ್ಲದೆ, ಮಾದಾರ ಚೆನ್ನಯ್ಯನ ಮನೆಯಲ್ಲಿ ನಾನು ಅಂಬಲಿ ಕುಡಿದ ಕಾರಣ ವೇದ ನಡು-ನಡುಗಿತ್ತು ಎಂದು ಪುರೋಹಿತ ಶಾಹಿಗಳ ವರ್ಣಾಶ್ರಮ ಪದ್ಧತಿಯನ್ನು ಖಂಡಿಸುತ್ತಾರೆ.
ಬೇಟಿ ಬಚಾವೋ ಬೇಟಿ ಪಡಾವೋ ಅದೆಷ್ಟು ಸಾಕಾರವಾಗಿದೆ?
ಮುಸ್ಲಿಂ ಸಹೋದರಿಯರು ಶಾಲಾ ಕಾಲೇಜುಗಳಿಗೆ ಹಿಜಾಬ್ ಧರಿಸಿ ಹೋಗುವುದನ್ನು ವಿರೋಧಿಸಿ ಪ್ರತಿಭಟಿಸಿದವರಿಂದ, ಮಣಿಪುರದಲ್ಲಿ ಬುಡಕಟ್ಟು ಸಮುದಾಯದ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದಾಗ ಬಾಯಿ ಬಿಚ್ಚದವರಿಂದ, ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳಗೈದವನನ್ನು ರಕ್ಷಣೆ ಮಾಡಿದವರಿಂದ, ಬಿಲ್ಕಿಸ್ ಭಾನು ಪ್ರಕರಣದಲ್ಲಿ ಆರೋಪಿಗಳ ಪರವಾಗಿ ನಿಂತವರಿಂದ, ಹೆಣ್ಣು ಮಕ್ಕಳ ರಕ್ಷಣೆ ಅದೆಷ್ಟರ ಮಟ್ಟಿಗೆ ಸಾಧ್ಯವಾದೀತು?. ಆದರೆ ಅಂದು ಬಸವಣ್ಣನವರು ಸೂಳೆ ಸಂಕವ್ವನಿಗೆ ಲಿಂಗದೀಕ್ಷೆ ನೀಡಿ ಶರಣೆಯನ್ನಾಗಿ ಪರಿವರ್ತಿಸಿದರು. ಇದರ ಪರಿಣಾಮ ಅನೇಕ ಮಹಿಳೆಯರು ಅಕ್ಷರ ಕಲಿತು ವಚನ ರಚಿಸಲು ಸಾಧ್ಯವಾಯಿತು.
ಜನರ ತೆರಿಗೆಯ ಹಣ ಜನರಿಗೇ ಸಲ್ಲಬೇಕು
ಕೇಂದ್ರ ಸರ್ಕಾರವು ನಮ್ಮ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲನ್ನು ನೀಡುತ್ತಿಲ್ಲ. ಅಲ್ಲದೆ ಜನರ ತೆರಿಗೆಯ ಹಣದಲ್ಲಿ ಪಕ್ಷದ ಪ್ರಚಾರಕ್ಕಿಳಿದಿದೆ. ಅಂದು ಕಲ್ಯಾಣದ ಪ್ರಧಾನಿಯಾಗಿದ್ದ ಬಸವಣ್ಣನವರ ವಿರುದ್ಧ ಪಟ್ಟಭದ್ರ ಹಿತಾಸಕ್ತಿಗಳು ಬಿಜ್ಜಳನ ಭಂಡಾರದ ಹಣವನ್ನು ಬಸವಣ್ಣ ಸೂರೆಗೈದು ಶರಣಸಂಕುಲ ಬೆಳೆಸುತ್ತಿದ್ದಾರೆಂಬ ಆರೋಪ ಮಾಡಿದಾಗ ಬಸವಣ್ಣನವರು ‘ಊರಮುಂದೆ ಹಾಲಹಳ್ಳ ಹರಿಯುತ್ತಿರಲು, ಬಿಜ್ಜಳನ ಭಂಡಾರವೆನಗೇಕಯ್ಯ’ ಎಂದು ತಿರಸ್ಕರಿಸಿ ʼರಾಜ್ಯದ ಜನರ ತೆರಿಗೆಯ ಹಣ ಜನರಿಗೇ ಸಲ್ಲಬೇಕುʼ ಎಂದು ಸಾರಿದ್ದರು.
12ನೇ ಶತಮಾನದ ಸಂಸತ್ತಿನಂತಿದ್ದ ಕಲ್ಯಾಣದ ಅನುಭವ ಮಂಟಪವನ್ನು ನೆನಪಿಸಿಕೊಳ್ಳುವುದೆಂದರೆ ರೋಮಾಂಚನ. ಸಾಮಾಜಿಕ ನ್ಯಾಯಕ್ಕಾಗಿ ಶರಣರು ಅನುಭವಿಸಿದ ನೋವುಗಳೆಷ್ಟೋ? ಮತ್ತು ಅನುಭವ ಮಂಟಪದ ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಮಾನವೀಯತೆ ಹಾಗೂ ಶರಣರ ಕಾಯಕದ ಬಗೆಗಿನ ಶ್ರದ್ಧೆ ನಿಜಕ್ಕೂ ಅದ್ಭುತ. ಕಲ್ಯಾಣದ ಅನುಭವ ಮಂಟಪದ ಸಭೆಗಳು ಹಾಗೂ ದೆಹಲಿಯ ಸಂಸತ್ತಿನ ಕಲಾಪಗಳು ಎರಡನ್ನೂ ಗಮನಿಸಿದಾಗ ಇಂದು ನಮ್ಮ ದೇಶವನ್ನಾಳುತ್ತಿರುವವರು ಜಾತಿ, ಧರ್ಮ, ಮಂದಿರ, ಮಸೀದಿಗಳ ಗದ್ದಲದಲ್ಲೇ ಮುಳುಗಿ ದೇಶದ ಅಭಿವೃದ್ದಿಯನ್ನೇ ಮರೆತಂತೆ ಕಾಣುತ್ತಿದೆ. ಆದ್ಧರಿಂದ ದೇಶದ ಪ್ರಜೆಗಳು ರಾಷ್ಟ್ರದ ಅಭಿವೃದ್ಧಿ ಮತ್ತು ಸೌಹಾರ್ದಯುತ ಜೀವನ ಸಾಗಿಸಲು ವಾತಾವರಣ ಸೃಷ್ಟಿಸಬಲ್ಲ ನಾಯಕರನ್ನು ಆಯ್ಕೆ ಮಾಡಬೇಕಿದೆ.