ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) 2026ರ ಮೇ ತಿಂಗಳಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಡೆಸಿದ ‘ಸ್ವತಂತ್ರ ಡ್ರೈವ್ ಟೆಸ್ಟ್’ (IDT) ವರದಿಯನ್ನು ಬಿಡುಗಡೆ ಮಾಡಿದೆ. ಜಿಲ್ಲೆಯಾದ್ಯಂತ ಮೊಬೈಲ್ ನೆಟ್ವರ್ಕ್ ಸೇವೆಗಳ ಗುಣಮಟ್ಟ ನಿರ್ಣಯಿಸಲು, ದೂರಸಂಪರ್ಕ ಸೇವಾ ಪೂರೈಕೆದಾರರ (TSP) ಧ್ವನಿ ಮತ್ತು ಡೇಟಾ ಸೇವೆಗಳ ನೈಜ ಸಮಯದ ಕಾರ್ಯಕ್ಷಮತೆಯನ್ನು ಈ ಪರೀಕ್ಷೆಯ ಮೂಲಕ ಪರಿಶೀಲಿಸಲಾಗಿದೆ.
ಬೆಂಗಳೂರಿನ ಟ್ರಾಯ್ ಪ್ರಾದೇಶಿಕ ಕಚೇರಿಯ ಮೇಲ್ವಿಚಾರಣೆಯಲ್ಲಿ ಮೇ 18 ರಿಂದ ಮೇ 21ರವರೆಗೆ ಈ ಪರೀಕ್ಷೆಗಳು ನಡೆದಿದ್ದವು. ಒಟ್ಟು 440.5 ಕಿಮೀ ಸಿಟಿ ಡ್ರೈವ್, 761 ಕಿಮೀ ರೈಲ್ವೆ ಮಾರ್ಗ, 12 ಹಾಟ್ಸ್ಪಾಟ್ ಸ್ಥಳಗಳು ಮತ್ತು 8.7 ಕಿಮೀ ವಾಕ್ ಟೆಸ್ಟ್ ಮೂಲಕ ಎಲ್ಲಾ ಪ್ರಮುಖ ಟೆಲಿಕಾಂ ಕಂಪನಿಗಳ (ಏರ್ಟೆಲ್, ಬಿಎಸ್ಎನ್ಎಲ್, ರಿಲಯನ್ಸ್ ಜಿಯೋ ಮತ್ತು ವಿಐಎಲ್) 2ಜಿ, 3ಜಿ, 4ಜಿ ಮತ್ತು 5ಜಿ ನೆಟ್ವರ್ಕ್ಗಳನ್ನು ಪರೀಕ್ಷಿಸಲಾಗಿದೆ.
ನೆಟ್ವರ್ಕ್ ಕಾರ್ಯಕ್ಷಮತೆಯ ಪ್ರಮುಖ ಅಂಶಗಳು ಹೀಗಿವೆ..
- ಕವರೇಜ್ ಗ್ಯಾಪ್: ಡ್ರೈವ್ ಟೆಸ್ಟ್ ಮಾರ್ಗದಲ್ಲಿ ಕಳಪೆ ಸಿಗ್ನಲ್ ಸಾಮರ್ಥ್ಯ ಹೊಂದಿರುವ ಮಾದರಿಗಳ ಸಂಖ್ಯೆ ಗಮನಾರ್ಹವಾಗಿದೆ. ಬಿಎಸ್ಎನ್ಎಲ್ (10378/35480), ರಿಲಯನ್ಸ್ ಜಿಯೋ (7089/37941), ವಿಐಎಲ್ (6626/28580) ಮತ್ತು ಏರ್ಟೆಲ್ (5104/34323) ಮಾದರಿಗಳನ್ನು ಕವರೇಜ್ ಅಂತರಗಳಿಗಾಗಿ ಗುರುತಿಸಲಾಗಿದೆ.
- ಧ್ವನಿ ಸೇವೆಗಳು (ಕರೆ ಡ್ರಾಪ್ ಮತ್ತು ಸೈಲೆನ್ಸ್): ಯಶಸ್ವಿ ಕರೆಗಳ ನಡುವೆ ಡ್ರಾಪ್ ಆಗಿರುವ ಕರೆಗಳ ಸಂಖ್ಯೆಯಲ್ಲಿ ಬಿಎಸ್ಎನ್ಎಲ್ 28/306, ಜಿಯೋ 17/346, ಏರ್ಟೆಲ್ 14/311 ಮತ್ತು ವಿಐಎಲ್ 12/260 ಅಂಕಗಳನ್ನು ದಾಖಲಿಸಿವೆ. ಕರೆಗಳ ಮಧ್ಯೆ ಕಂಡುಬಂದ ಸೈಲೆನ್ಸ್ (ಮೌನ) ನಿದರ್ಶನಗಳನ್ನು ಕೂಡ ಇದೇ ರೀತಿ ಟ್ರ್ಯಾಕ್ ಮಾಡಲಾಗಿದೆ.
- ಡೇಟಾ ಕಾರ್ಯಕ್ಷಮತೆ (ಡೌನ್ಲೋಡ್ ಮತ್ತು ಅಪ್ಲೋಡ್ ವೇಗ): ಡೌನ್ಲೋಡ್ ವೇಗ: ರಿಲಯನ್ಸ್ ಜಿಯೋ (5G/4G) ಅತಿ ಹೆಚ್ಚು ಅಂದರೆ ಸರಾಸರಿ 229.12 Mbps ವೇಗವನ್ನು ಹೊಂದಿದೆ. ಏರ್ಟೆಲ್ (5G/4G) 109.02 Mbps, ವಿಐಎಲ್ (5G/4G/2G) 25.04 Mbps ಮತ್ತು ಬಿಎಸ್ಎನ್ಎಲ್ (4G) 5.73 Mbps ವೇಗವನ್ನು ದಾಖಲಿಸಿವೆ.
- ಅಪ್ಲೋಡ್ ವೇಗ: ಏರ್ಟೆಲ್ 26.02 Mbps, ರಿಲಯನ್ಸ್ ಜಿಯೋ 18.19 Mbps, ವಿಐಎಲ್ 10.78 Mbps ಮತ್ತು ಬಿಎಸ್ಎನ್ಎಲ್ 2.07 Mbps ವೇಗವನ್ನು ಹೊಂದಿವೆ.
ಈ ಸಮೀಕ್ಷೆಯು ಶಿರವಾಡ, ಅಂಕೋಲಾ, ಕುಮಟಾ, ಭಟ್ಕಳ, ಸಿರಸಿ, ಯಲ್ಲಾಪುರ, ದಾಂಡೇಲಿ ಮತ್ತು ಹಳಿಯಾಳ ಸೇರಿದಂತೆ ಜಿಲ್ಲೆಯ ಹಲವು ಪ್ರಮುಖ ಪಟ್ಟಣಗಳು ಮತ್ತು ಬಸ್ ನಿಲ್ದಾಣಗಳನ್ನು ಒಳಗೊಂಡಿದೆ. ಬೆಂಗಳೂರು-ಕಾರವಾರ ರೈಲ್ವೆ ಮಾರ್ಗದಲ್ಲಿ ಹಾಸನ, ಮಂಗಳೂರು, ಉಡುಪಿ ಮೂಲಕ ಹಾದು ಹೋಗುವಾಗಲೂ ನೆಟ್ವರ್ಕ್ ಪರೀಕ್ಷಿಸಲಾಗಿದೆ.
ಇದನ್ನೂ ಓದಿ: ಲಖಿಂಪುರ ಖೇರಿ ಪ್ರಕರಣ: ದೋಷಾರೋಪ ಪಟ್ಟಿಯಿಂದ ಅಜಯ್, ಆಶಿಶ್ ಮಿಶ್ರಾ ಹೆಸರು ಕೈಬಿಟ್ಟ ಯುಪಿ ಪೊಲೀಸರು
ಈ ವರದಿಯ ಸಂಶೋಧನೆಗಳನ್ನು ಆಯಾ ಟೆಲಿಕಾಂ ಕಂಪನಿಗಳೊಂದಿಗೆ ಹಂಚಿಕೊಳ್ಳಲಾಗಿದ್ದು, ತಮ್ಮ ಸೇವಾ ಗುಣಮಟ್ಟವನ್ನು ಸುಧಾರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಈ ಕುರಿತು ಹೆಚ್ಚಿನ ಮಾಹಿತಿಗಾಗಿ www.trai.gov.in ವೆಬ್ಸೈಟ್ ಭೇಟಿ ನೀಡಬಹುದು ಅಥವಾ ಬೆಂಗಳೂರಿನ ಟ್ರಾಯ್ ಪ್ರಾದೇಶಿಕ ಕಚೇರಿಯನ್ನು ಇಮೇಲ್ ([email protected]) ಅಥವಾ ದೂರವಾಣಿ ಸಂಖ್ಯೆ +91-80-22865004 ಮೂಲಕ ಸಂಪರ್ಕಿಸಬಹುದಾಗಿದೆ.




