ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಮಾಜಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರ ಆಶಿಶ್ ಮಿಶ್ರಾ ಅವರ ಪಾತ್ರವಿಲ್ಲ ಎಂದು ಉತ್ತರ ಪ್ರದೇಶ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ಪೀಠದ ಮುಂದೆ ಈ ವಿಷಯ ಪ್ರಸ್ತಾಪಿಸಲಾಯಿತು. ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಪ್ರಕರಣದ ತನಿಖೆಯನ್ನು ನಡೆಸಿದ ಪೊಲೀಸರು, ಅಮನ್ದೀಪ್ ಸಿಂಗ್ ಎಂಬ ಒಬ್ಬ ವ್ಯಕ್ತಿಯನ್ನು ಮಾತ್ರ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಿದ್ದು, ಉಳಿದವರನ್ನು ಈ ಪ್ರಕರಣದಿಂದ ಕೈಬಿಟ್ಟಿದ್ದಾರೆ. ಈ ವಿಷಯವಾಗಿ ಆಶಿಶ್ ಮಿಶ್ರಾ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ದವೆ ಅವರು, ತಮ್ಮ ಕಕ್ಷಿದಾರನ ಹೆಸರು ದೋಷಾರೋಪ ಪಟ್ಟಿಯಲ್ಲಿ ಇಲ್ಲದಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು ಮತ್ತು ಮುಖ್ಯ ಪ್ರಕರಣದ ವಿಚಾರಣೆಯು ಮುಂದಿನ ಮೂರು ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಏನಿದು ಪ್ರಕರಣ?
2021ರ ಅ.3ರಂದು ಲಖಿಂಪುರ ಖೇರಿಯಲ್ಲಿ ಈ ದುರಂತ ದುರಂತ ಸಂಭವಿಸಿತ್ತು. ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಸಚಿವರ ಬೆಂಗಾವಲು ವಾಹನ ಹರಿದು ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು. ಬಳಿಕ ಈ ಪ್ರಕರಣದಲ್ಲಿ ಆಶಿಶ್ ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಘಟನೆಯ ಪ್ರಮುಖ ಸಾಕ್ಷಿ ಬಲ್ಜಿಂದರ್ ಸಿಂಗ್ ಅವರು ನೀಡಿದ ದೂರಿನ ಮೇರೆಗೆ ಮಿಶ್ರಾ ಅವರ ಮೇಲೆ ಕೇಸ್ ದಾಖಲಿಸಲಾಯಿತು. ಬಲ್ಜಿಂದರ್ ಸಿಂಗ್ ಅವರು ತಮ್ಮ ಹೇಳಿಕೆಯನ್ನು ಬದಲಾಯಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿದ್ದರು. ಈ ಹಿಂದೆ ಈ ದೂರಿನ ಬಗ್ಗೆ ಯುಪಿ ಪೊಲೀಸರು ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾಗ, ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಆ ಬಳಿಕ ಲಖಿಂಪುರ ಎಎಸ್ಪಿ ಅವರು ಪಂಜಾಬ್ನ ಮುಕ್ತಸರ್ಗೆ ತೆರಳಿ ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡು, ಐಪಿಸಿ ಸೆಕ್ಷನ್ 195-ಎ, 506 ಮತ್ತು 120-ಬಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ: ಗುಂಡಿನ ದಾಳಿಯಲ್ಲಿ 12 ಮಂದಿ ಸಾವು, ಅಘೋಷಿತ ಲಾಕ್ಡೌನ್ ಜಾರಿ!
ಪ್ರಸ್ತುತ, ಈ ಸಾಕ್ಷಿ ಬೆದರಿಕೆ ಪ್ರಕರಣವು ವಿಚಾರಣಾ ನ್ಯಾಯಾಲಯದ ಹಂತದಲ್ಲಿದ್ದು, ಸುಪ್ರೀಂ ಕೋರ್ಟ್ ಇಂದು ಪೊಲೀಸರ ವರದಿಯನ್ನು ದಾಖಲಿಸಿಕೊಂಡಿದೆ. ಈ ವಿಷಯದಲ್ಲಿ ದೂರುದಾರರು ತಮ್ಮ ಪ್ರತಿಕ್ರಿಯೆಯನ್ನು ಅಫಿಡವಿಟ್ ಮೂಲಕ ಸಲ್ಲಿಸಲು ನ್ಯಾಯಾಲಯ ಎರಡು ವಾರಗಳ ಕಾಲಾವಕಾಶ ನೀಡಿದೆ. ಮುಖ್ಯ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ, ಇನ್ನೂ 64 ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ ಎಂಬ ಸಂಗತಿಯನ್ನು ಪೊಲೀಸ್ ವರದಿ ಬಹಿರಂಗಪಡಿಸಿದೆ. ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದಿನ ತಿಂಗಳಿಗೆ ನಿಗದಿಪಡಿಸಿದೆ. ಸುಪ್ರೀಂ ಕೋರ್ಟ್ ಈ ಪ್ರಕರಣದ ಮೇಲ್ವಿಚಾರಣೆಯನ್ನು ಮುಂದುವರಿಸಿದೆ.




