ಸಾರಿಗೆ ನೌಕರರು 38 ತಿಂಗಳ ಬಾಕಿ ವೇತನ ಪಾವತಿಗೆ ಬೇಡಿಕೆ ಇರಿಸಿರುವುದು ಸಮಂಜಸವಲ್ಲ. ಕೇವಲ 14 ತಿಂಗಳ ಹಿಂಬಾಕಿಗೆ ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಧಾನ ಸಭೆಯಲ್ಲಿ 2020ರ ಜನವರಿ ಯಿಂದ 2023ರ ಫೆಬ್ರವರಿವರೆಗಿನ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಹಾಗೂ 2024ರ ಜನವರಿಯಿಂದ ಅನ್ವಯ ವಾಗುವಂತೆ ಹೊಸದಾಗಿ ವೇತನವನ್ನು ಹೆಚ್ಚಳ ಮಾಡುವಂತೆ ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಿಗಮಗಳ ಆರ್ಥಿಕ ಪರಿಸ್ಥಿತಿ, ವೇತನ ಹೆಚ್ಚಳಕ್ಕೆ ಸಂಬಂಧಿಸಿ 2023ರ ಮಾರ್ಚ್‌ನಲ್ಲಿ ಹಿಂದಿನ ಸರ್ಕಾರ ಮಾಡಿರುವ ಆದೇಶದಲ್ಲಿನ ದೋಷಗಳ ಕುರಿತು ನೌಕರ ಸಂಘಟನೆ ಪ್ರಮುಖರಿಗೆ ತಿಳಿಸಿ, “ನೌಕರರ ಬೇಡಿಕೆಯಂತೆ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿ ಅಸಾಧ್ಯ. ಕೇವಲ 14 ತಿಂಗಳ ವೇತನ ಹೆಚ್ಚಳ ಹಿಂಬಾಕಿ ನೀಡಲು ಸಿದ್ಧ” ಎಂದು ಹೇಳಿದರು.
“2016ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ವೇತನ ಪರಿಷ್ಕರಣೆ ಮಾಡಿದ್ದೆ. ಆಗ ಶೇ. 12.5 ರಷ್ಟು ಹೆಚ್ಚಳ ಮಾಡಲಾಗಿತ್ತು. ಬಳಿಕ 2020 ರಲ್ಲಿ ಕೋವಿಡ್ ಕಾರಣಕ್ಕೆ ಅಂದಿನ ಸರ್ಕಾರ ವೇತನ ಪರಿಷ್ಕರಣೆ ಮಾಡಿಲ್ಲ. 2023ರ ಮೇ 01 ರ ಹಿಂದಿನ ಸರ್ಕಾರ ಇದ್ದಾಗ ವೇತನ ಪರಿಷ್ಕರಣೆ ಒಪ್ಪಂದವಾಗಿತ್ತು. ಆಗ ಮೂಲವೇತನ 15 ಶೇ.ಪರಿಷ್ಕರಣೆ ಮಾಡಲು ತೀರ್ಮಾನವಾಗಿತ್ತು. ಆಗ ನೀವು ಅದನ್ನು ಒಪ್ಪಿಕೊಂಡಿದ್ದೀರಿ” ಎಂದರು.
“ವೇತನ ಪರಿಷ್ಕರಣೆ ಕುರಿತಾಗಿ ಶ್ರೀನಿವಾಸ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ 2022ರ ಜೂನ್ 01 ರಿಂದ 2023ರ ಫೆಬ್ರವರಿ 28ರ ವರೆಗೆ ಬಾಕಿ ವೇತನ ಕೊಡಬಹುದು ಎಂದು ಶಿಫಾರಸು ಮಾಡಿತ್ತು. ಸಾರಿಗೆ ಸಂಘಟನೆಗಳ ಪ್ರತಿನಿಧಿಗಳು ಸಹ ಸಮಿತಿ ಮುಂದೆ ಹಾಜರಾಗಿ ಅಹವಾಲು ಸಲ್ಲಿಸಿದ್ದರು. ಶ್ರೀನಿವಾಸ ಸಮಿತಿಯ ಶಿಫಾರಸ್ಸು ಸರ್ಕಾರ ಒಪ್ಪಿಕೊಂಡಿದೆ. ನೀವು ಸಹ ಸದರಿ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಳ್ಳಬೇಕು” ಎಂದು ಹೇಳಿದರು.
“ನಾವು ಅಧಿಕಾರಕ್ಕೆ ಬಂದಾಗ ಎಲ್ಲಾ ನಿಗಮಗಳಿಗೆ ಒಟ್ಟಾರೆ 4 ಸಾವಿರ ಕೋಟಿ ಸಾಲ ಇತ್ತು. 2018 ರಲ್ಲಿ ಕೇವಲ ರೂ.14 ಕೋಟಿ ಮಾತ್ರ ಬಾಕಿಯಿತ್ತು. ಪ್ರಸ್ತುತ ಯಾವ ಸಾರಿಗೆ ನಿಗಮ ಸಹ ಲಾಭದಲ್ಲಿಲ್ಲ. ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲ ನಿಗಮದವರು ಸಹಕರಿಸಬೇಕು. ಸಾರಿಗೆ ನೌಕರರ ಸಂಘದ ಚುನಾವಣೆ ನಡೆಸುವ ಕುರಿತು ಪರಿಶೀಲನೆ ನಡೆಸಲಾಗುವುದು. ಎಲ್ಲಾ ಅಹವಾಲುಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಸರ್ಕಾರ ಸಿದ್ಧವಿದೆ” ಎಂದು ತಿಳಿಸಿದರು.