ವೇತನ ಹೆಚ್ಚಳ, ಬಾಕಿ ವೇತನ ಇತ್ಯರ್ಥ, ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ KSRTC ನೌಕರರ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಯು ಇತರ ಐದು ಕಾರ್ಮಿಕ ಸಂಘಗಳ ಬೆಂಬಲದೊಂದಿಗೆ ಇಂದಿನಿಂದ (ಆ.5) ಕರೆ ನೀಡಿದ್ದ ಅನಿರ್ಧಿಷ್ಟಾವಧಿ ಮುಷ್ಕರ ಬಹುತೇಕ ಯಶಸ್ವಿಯಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಬಸ್ ಸೇವೆಗಳು ಸ್ಥಗಿತಗೊಂಡ ಕಾರಣ, ಹಳ್ಳಿಯಿಂದ ನಗರಕ್ಕೆ, ಅಥವಾ ನಗರದಿಂದ ಇನ್ನೊಂದು ಕಡೆಗೆ ಸಂಚರಿಸುವವರಿಗೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಇಂದು ಒಂದು ದಿನದ ಮಟ್ಟಿಗೆ ಮುಷ್ಕರ ಕೈಬಿಡುವಂತೆ KSRTC ನೌಕರರ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಗೆ ಹೈಕೋರ್ಟ್ ನಿನ್ನೆ (ಆ.4) ನಿರ್ದೇಶನ ನೀಡಿತ್ತು. ಮುಷ್ಕರದಿಂದಾಗಿ ಪ್ರಯಾಣಿಕರಿಗೆ ಆಗಬಹುದಾದ ತೊಂದರೆಯನ್ನು ತಪ್ಪಿಸಲು ಹೈಕೋರ್ಟ್ ಮಧ್ಯಪ್ರವೇಶಿಸುವಂತೆ ಕೋರಿ ಸುನಿಲ್ ಜೆ ಮತ್ತು ಇತರ ನಾಲ್ವರು ವಕೀಲರು, ದೀಕ್ಷಾ ಎನ್ ಅಮೃತೇಶ್ ಮೂಲಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ನಂತರ ನ್ಯಾ. ಕೆ ಎಸ್ ಮುದಗಲ್ ಮತ್ತು ನ್ಯಾ. ಎಂ ಜಿ ಎಸ್ ಕಮಲ್ ಅವರ ವಿಭಾಗೀಯ ಪೀಠವು ಮಧ್ಯಂತರ ಆದೇಶವನ್ನು ನೀಡಿತ್ತು. ಈ ಆದೇಶ ಹೊರಬಿದ್ದ ನಂತರವೂ ಮುಷ್ಕರಕ್ಕೆ ಕರೆ ಕೊಡಲಾಗಿತ್ತು.
ಇನ್ನು ಮುಷ್ಕರಕ್ಕೆ ಕರೆ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ (ಜೆಎಸಿ)ಯು 2020ರ ಜನವರಿಯಿಂದ ಜಾರಿಗೆ ಬರುವಂತೆ ನಿಯಮಿತ ವೇತನ ಪರಿಷ್ಕರಣೆಯ ಭಾಗವಾಗಿ ಒಟ್ಟು 38 ತಿಂಗಳ ವೇತನವನ್ನು ಸರ್ಕಾರ ಕೂಡಲೇ ಪಾವತಿ ಮಾಡಬೇಕೆಂದು ಒತ್ತಾಯಿಸಿದೆ. ಅಲ್ಲದೇ ಈ ಬೇಡಿಕೆಗಳನ್ನು ಹಲವು ಬಾರಿ ಸರ್ಕಾರದ ಮುಂದಿಟ್ಟರೂ ಪದೇ ಪದೆ ಮನವಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಒಕ್ಕೂಟ ಆರೋಪಿಸಿದೆ. 2024ರಿಂದ ಪರಿಷ್ಕೃತ ವೇತನ ರಚನೆ, 2023ರ ಡಿಸೆಂಬರ್ 31ರಿಂದ ಅನ್ವಯವಾಗುವಂತೆ ಶೇ.31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದೊಂದಿಗೆ ವಿಲೀನಗೊಳಿಸುವುದು ಮತ್ತು 2024ರ ವೇತನದಲ್ಲಿ ಶೇ.25ರಷ್ಟು ಹೆಚ್ಚಳ ಮಾಡುವಂತೆಯೂ ಸಮಿತಿ ಕೋರಿತ್ತು.
ಸಾರಿಗೆ ನಿಗಮಗಳಿಗೆ 38 ತಿಂಗಳ ಬಾಕಿ ವೇತನ ಪಾವತಿಸಲು ಸುಮಾರು ರೂ.1800 ಕೋಟಿ ಅಗತ್ಯವಿದೆ. ಆದರೆ ಅನುದಾನದ ಕೊರತೆ ಕಾರಣವನ್ನು ಮುಂದಿಟ್ಟು ಏಕವ್ಯಕ್ತಿ ಸಮಿತಿಯ ಶಿಫಾರಸಿನಂತೆ 14 ತಿಂಗಳ ಬಾಕಿ ಪಾವತಿಸಲು ಮಾತ್ರ ಸಿದ್ಧವಿರುವುದಾಗಿ ಸರ್ಕಾರ ಸಮಜಾಯಿಷಿ ನೀಡಿದೆ. ಈ ನಿರ್ಧಾರಕ್ಕೆ ಒಕ್ಕೂಟದ ಅಧ್ಯಕ್ಷ ಎಚ್ ವಿ ಅನಂತ್ ಸುಬ್ಬರಾವ್ ಸೇರಿದಂತೆ ಮುಖಂಡರು, ನಿಗಮದ ನೌಕರರು ಒಪ್ಪಿಗೆ ಸೂಚಿಸಿರಲಿಲ್ಲ.
ಎಲ್ಲೆಲ್ಲಿ ಹೇಗಿತ್ತು ಸ್ಪಂದನೆ..?
ಬೆಂಗಳೂರು ನಗರದಲ್ಲಿ ಮುಷ್ಕರದ ನಡುವೆಯೂ ಬಿಎಂಟಿಸಿ ಬಸ್‌ಗಳ ಸಂಚಾರ ಬೆಳಗ್ಗೆ 9 ಗಂಟೆಯವರೆಗೆ ಸಹಜವಾಗಿತ್ತು. ಪ್ರತಿದಿನದಂತೆ ಕಚೇರಿ, ಆಸ್ಪತ್ರೆ, ಶಾಲೆ-ಕಾಲೇಜುಗಳಿಗೆ ತೆರಳುವವರಿಗೆ ಬಸ್‌ಗಳು ವಿಶೇಷವಾಗಿ ವಿದ್ಯುತ್ ಚಾಲಿತ (ಇವಿ) ಬಸ್‌ಗಳು ಲಭ್ಯವಾಗಿವೆ. ಅಧಿಕಾರಿಗಳು ಹೇಳುವಂತೆ ಬೆಳಗ್ಗೆ 9 ಗಂಟೆಯ ಹೊತ್ತಿಗೆ 3,121 ನಿಗದಿತ ಸೇವೆಗಳ ಪೈಕಿ 3,040 ಸೇವೆಗಳು ಸಾರ್ವಜನಿಕರಿಗೆ ಸಿಕ್ಕಿವೆ. ಮುಷ್ಕರದ ತೀವ್ರತೆ 10 ಗಂಟೆಯ ನಂತರ ಆರಂಭವಾಗಿದೆ. ಇವಿ ಬಸ್‌ಗಳಿಗೆ ಖಾಸಗಿ ಬಸ್ ಚಾಲಕರನ್ನೂ ಬಳಸಿಕೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳಿದ್ದಾರೆ.
ನಗರದಲ್ಲಿ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿಕೊಂಡರೂ, ಬೆಂಗಳೂರಿಗೆ ಆಗಮಿಸಿದ ಸಾವಿರಾರು ಜನರು ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ನಿಲ್ದಾಣ ಮತ್ತು ಶಾಂತಿನಗರದಂತಹ ಮುಖ್ಯ ನಿಲ್ದಾಣ ಕೇಂದ್ರಗಳಲ್ಲಿ ಸಿಲುಕಿಕೊಳ್ಳುವಂತಾಗಿತ್ತು. ಇತ್ತ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ, ಆಟೋರಿಕ್ಷಾಗಳು ನಿಗದಿಗಿಂತ ಹೆಚ್ಚಿನ ಶುಲ್ಕ ವಿಧಿಸಿ ಬ್ಯುಸಿನೆಸ್‌ಗೆ ಇಳಿದಿದ್ದವು. ಸಂಚಾರಕ್ಕೆ ಬಸ್ ಸಿಗದೇ ಮೊದಲೇ ಕಂಗೆಟ್ಟಿದ್ದ ಪ್ರಯಾಣಿಕರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ಮಂಗಳವಾರ ಬೆಳಗ್ಗೆ ಆಟೋ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಯಾಣಿಸುವ ದರಗಳು ಸುಮಾರು 20% ಹೆಚ್ಚಾಗಿತ್ತು ಎಂದು ವರದಿಯಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಸಂಚಾರ ಭಾಗಶಃ ಅಸ್ತವ್ಯಸ್ತವಾಗಿದೆ. ಮುಷ್ಕರದ ಅರಿವಿಲ್ಲದ ಬಸ್ ನಿಲ್ದಾಣಗಳಿಗೆ ಬಂದಿದ್ದ ಸಾರ್ವಜನಿಕರು ಪರದಾಡುವಂತಾಗಿತ್ತು. 126 ರೂಟ್‌ಗಳ ಪೈಕಿ 80 ರೂಟ್‌ಗಳಲ್ಲಿ ಖಾಸಗಿ ಬಸ್‌ಗಳು ಸಂಚಾರ ಸೇವೆ ನೀಡಿವೆ. ಅದೂ ಬೆಂಗಳೂರು ಸೇರಿದಂತೆ ಕೆಲವೇ ನಗರಗಳಿಗೆ ಸಂಚಾರ ಕಲ್ಪಿಸಲಾಗಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ತುರ್ತು ಸಹಾಯವಾಣಿಯನ್ನೂ ಆರಂಭಿಸಲಾಗಿತ್ತು.
ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳ ಸಂಚಾರಕ್ಕೆ 100 ಗುತ್ತಿಗೆ ನೌಕರರನ್ನ ಮತ್ತು 65 ಟ್ರೈನಿ ಸಿಬ್ಬಂದಿಯನ್ನು ಬಳಸಿಕೊಂಡು 80 ಬಸ್‌ಗಳ ಸಂಚಾರ ಮಾಡಿಸಲು ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ. ಸರ್ಕಾರಿ ಬಸ್ ದರದಲ್ಲೇ ಸ್ಥಳೀಯವಾಗಿ ಖಾಸಗಿ ವಾಹನಗಳ ಬಳಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಸಾರ್ವಜನಿಕರಿಗೆ ಮುಷ್ಕರದ ಬಿಸಿ ತಟ್ಟಿದೆ.
ಇದನ್ನೂ ಓದಿ: ಮೆಟ್ರೋ ಯೋಜನೆಯಲ್ಲಿ ಕೇಂದ್ರದ ಜೊತೆಗೆ ರಾಜ್ಯ ಸರ್ಕಾರದ ಪಾಲೂ ಇದೆ: ಡಿಸಿಎಂ ಡಿ.ಕೆ.ಶಿವಕುಮಾರ್
ಶಿವಮೊಗ್ಗದ ಕೇಂದ್ರ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ಸಂಚಾರ ನಡೆಸುತ್ತಿವೆ. ಶಿವಮೊಗ್ಗಕ್ಕೆ ಬೇರೆ ಬೇರೆ ಡಿಪೋಗಳಿಂದ ಆಗಮಿಸಿದ ಬಸ್‌ಗಳು, ಪ್ರಯಾಣಿಕರನ್ನು ಇಳಿಸಿ ಡಿಪೋಗಳಿಗೆ ವಾಪಸ್ ಆಗುತ್ತಿದ್ದ ದೃಶ್ಯ ಕಂಡುಬಂದಿದೆ. ಸಾಗರ, ಹೊನ್ನಾಳಿ, ಶಿಕಾರಿಪುರ, ಭದ್ರಾವತಿಗೆ ಬಸ್‌ಗಳು ಎಂದಿನಂತೆ ಸಂಚಾರ ನಡೆಸುತ್ತಿವೆ. ಆದರೆ, ಬೆಂಗಳೂರು ಮಾರ್ಗದ ಬಸ್‌ಗಳು ಸಿಗದೆ ಪ್ರಯಾಣಿಕರು ಪರದಾಡುವಂತಾಗಿದೆ. ಉಳಿದಂತೆ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ತುಮಕೂರು, ಮಂಗಳೂರು, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ.
ಕಲಬುರಗಿಯಲ್ಲಿ ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ನಗರದ ಕೇಂದ್ರ ಬಸ್ ನಿಲ್ದಾಣ, ಶಹಾ ಬಝಾರ್ ನಾಕಾ, ಸೂಪರ್ ಮಾರ್ಕೆಟ್, ಗಂಜ್ ಪ್ರದೇಶ ಸೇರಿದಂತೆ ಇತರ ಕಡೆಗಳಲ್ಲಿ ಬಸ್‌ಗಳು ರಸ್ತೆಗೆ ಇಳಿಯದೇ ಇರುವುದರಿಂದ ಪ್ರಯಾಣಿಕರು ಖಾಸಗಿ ಬಸ್, ಕ್ರೋಜರ್ ಹಾಗೂ ಆಟೋ ರಿಕ್ಷಾಗಳ ಮೇಲೆ ಅವಲಂಬಿಸಿದ್ದು, ಖಾಸಗಿ ವಾಹನಗಳ ಟಿಕೆಟ್ ದರಕ್ಕಿಂತ ದುಪ್ಪಟ್ಟು ದರ ತೆತ್ತು ಪ್ರಯಾಣಿಸಿದ್ದಾರೆ.


ಗದಗ ಜಿಲ್ಲೆಯಲ್ಲಿ ಒಟ್ಟು 8 ಘಟಕಗಳಿದ್ದು, ಪ್ರತಿನಿತ್ಯ ಸುಮಾರು 560ಕ್ಕೂ ಹೆಚ್ಚು ಬಸ್ ಗಳು ಸಂಚರಿಸುತ್ತವೆ. ಆದರೆ ಇಂದು ಬೆಳಗ್ಗೆಯಿಂದಲೇ ಬಸ್‌ಗಳು ರಸ್ತೆಗಳಿದಿಲ್ಲ. ಮುಷ್ಕರದ ಮಾಹಿತಿ ಇಲ್ಲದೆ ಪ್ರತಿನಿತ್ಯ ಹೊಟ್ಟೆಪಾಡಿಗಾಗಿ ಕೆಲಸಕ್ಕಾಗಿ ಅರಸಿ ಬರುವವರ ಬಸ್ಸಿಲ್ಲದ ಸಂಕಷ್ಟಕ್ಕೀಡಾದರು. ದೂರದಿಂದ ಪ್ರಯಾಣ ಬೆಳಸಿರುವ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.
ಮಂಗಳೂರಿನಲ್ಲಿ ಮುಷ್ಕರ ಯಾವುದೇ ಪರಿಣಾಮ ಬೀರಿಲ್ಲ. ಎಂದಿನಂತೆ ಎಲ್ಲಾ ಬಸ್‌ಗಳು ಕಾರ್ಯಾಚರಣೆಯಲ್ಲಿವೆ. ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಮುಷ್ಕರದ ಮಧ್ಯೆಯೂ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಗಳೂರು ವಿಭಾಗದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಕೊಪ್ಪಳದ ಯಲಬುರ್ಗಾ ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಕಲ್ಲೇಟಿನಿಂದ ಬಸ್ ಗ್ಲಾಸ್ ಪುಡಿ-ಪುಡಿಯಾಗಿದೆ. ಬಸ್ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದರೂ ಬಸ್ ರಸ್ತೆಗಿಳಿದಿದ್ದರಿಂದ ಕಲ್ಲು ಎಸೆಯಲಾಗಿದೆ ಎನ್ನಲಾಗಿದೆ.



ಬಾಗಲಕೋಟೆ ಜಿಲ್ಲೆಯ ಮುಧೋಳ ಘಟಕದಿಂದ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿಲ್ಲ. ಹೀಗಾಗಿ ಮುಧೋಳ ಡಿಪೋದ ಬಸ್ ಗಳ ಸಂಚಾರ ಯಥಾ ಸ್ಥಿತಿಯಲ್ಲಿದೆ. ಉಳಿದಂತೆ ಜಿಲ್ಲೆಯ ಎಲ್ಲೆಡೆ ಬಸ್ ಸಂಚಾರ ಸ್ಥಗಿತಗೊಂಡಿದೆ.
ಬೆಳಗಾವಿ, ಬಳ್ಳಾರಿ, ವಿಜಯಪುರದಲ್ಲಿ ಸಾರಿಗೆ ಬಸ್‌ಗಳು ಕಾರ್ಯ ನಿರ್ವಹಿಸಿಲ್ಲ. ಬೆಳಗಾವಿಯ ಗ್ರಾಮೀಣ ಘಟಕ ಸೇರಿದಂತೆ ಬಹುತೇಕ ವಿಭಾಗೀಯ ನೌಕರರು ಕೆಲಸಕ್ಕೆ ಗೈರಾದ ಹಿನ್ನೆಲೆ ಹೊರ ಜಿಲ್ಲೆ, ಹೊರರಾಜ್ಯ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಬಳ್ಳಾರಿಯಲ್ಲಿ ಬಸ್‌ಗಳಿಲ್ಲದ ಹಿನ್ನೆಲೆ ಆಟೋ, ಕ್ರೂಷರ್, ಖಾಸಗಿ ಬಸ್ ಗಳ ಮೂಲಕ ದುಪ್ಪಟ್ಟು ಹಣ ನೀಡಿ ಪ್ರಯಾಣಿಸುವ ಸ್ಥಿತಿ ಎದುರಾಗಿದೆ. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ರೈಲುಗಳ ಮೊರೆ ಹೋಗಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಮುಷ್ಕರದ ನಡುವೆಯೂ ಹೊಸಪೇಟೆಯಲ್ಲಿ ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿದ್ದವು. ಬೆಳಗ್ಗೆ 9 ಗಂಟೆ ವೇಳೆಗೆ ಹೊಸಪೇಟೆಯಲ್ಲಿ ಸಾರಿಗೆ ಬಸ್ ಓಡಾಟ ಆರಂಭವಾಯಿತು. ಹೊರಗುತ್ತಿಗೆ ನೌಕರರನ್ನ ಬಳಸಿಸಿಕೊಂಡು ಅಧಿಕಾರಿಗಳು ಸಂಚಾರ ಆರಂಭಿಸಿದ್ದರು. ಮತ್ತೊಂದೆಡೆ ಖಾಸಗಿ ಬಸ್ ಗಳನ್ನ ಜಿಲ್ಲಾಡಳಿತ ರಸ್ತೆಗಿಳಿಸಿದೆ. ಹೊಸಪೇಟೆಯಿಂದ ಬಳ್ಳಾರಿ, ಕಲುಬುರಗಿ, ಶಿವಮೊಗ್ಗ ನಗರಗಳಿಗೆ ಸಾರಿಗೆ ಬಸ್ ಗಳ ಓಡಾಟ ಶುರುವಾಗಿದ್ದು, ಲೋಕಲ್ ಬಸ್ ಗಳ ಓಡಾಟ ಕೂಡ ಆರಂಭವಾಗಿದೆ.
ಬೀದರ್, ಮೈಸೂರು, ಚಿಕ್ಕಮಗಳೂರು, ಯಾದಗಿರಿ, ಹುಬ್ಬಳ್ಳಿಯಲ್ಲಿ ಮುಷ್ಕರ ಬಹುತೇಕ ಯಶಸ್ವಿಯಾಗಿದೆ. ಧಾರವಾಡದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ, ತುಮಕೂರು, ಕೊಡಗು, ಹಾವೇರಿ ಜಿಲ್ಲೆಗಳಲ್ಲಿ ನಿಧಾನವಾಗಿ ಸಂಚಾರ ಆರಂಭಿಸಿದ ಬಸ್‌ಗಳು ಎಂದಿನಂತೆ ಕರ್ತವ್ಯ ನಿರ್ವಹಿಸಿವೆ. ರಾಯಚೂರಿನಲ್ಲಿ ಶೇ.50ರಷ್ಟು ಬಸ್‌ಗಳು ಮಾತ್ರ ರಸ್ತೆಗಿಳಿದಿವೆ.

ನ್ಯಾಯಾಲಯದಿಂದ ತಡೆಯಿದ್ದರೂ ಬಹುತೇಕ ಜಿಲ್ಲೆಗಳಲ್ಲಿ ಮುಷ್ಕರ ಭಾಗಶಃ ಯಶಸ್ವಿಯಾಗಿದೆ. ಇತ್ತ ಆದೇಶ ಉಲ್ಲಂಘಿಸಿದ ಹಿನ್ನೆಲೆ ನಿಗಮದ ವಿರುದ್ಧ ಎಸ್ಮಾ ಅಡಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ಸಿಜೆ ವಿಭು ಬಕ್ರು ಹಾಗೂ ನ್ಯಾ. ಸಿ.ಎಂ ಜೋಶಿ ಅವರಿದ್ದ ಪೀಠವು ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಬೆನ್ನಲ್ಲೇ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಅವರು ಸುದ್ದಿಗೋಷ್ಠಿ ಕರೆದು, “ಮುಷ್ಕರವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಈ ಕ್ಷಣದಿಂದಲೇ ನೌಕರರು ಕರ್ತವ್ಯಕ್ಕೆ ಹಾಜರಾಗಿ” ಎಂದು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ಗ್ರಾಮ ಪಂಚಾಯತ್‌ನಲ್ಲಿನ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡ ಎಸ್‌ಐಟಿ
ಕೆಎಸ್‌ಆರ್‌ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ನಿರ್ಲಕ್ಷ್ಯ ತೋರಿದ ಪರಿಣಾಮ ಉಂಟಾದ ಈ ಮುಷ್ಕರ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾಗಶಃ ಅಥವಾ ಸಂಪೂರ್ಣವಾಗಿ ಸಾರಿಗೆ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದೆ. ನ್ಯಾಯಾಲಯದ ತಡೆಯಾದೇಶವಿದ್ದರೂ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ನೌಕರರ ನಿರ್ಧಾರ, ಸಾರ್ವಜನಿಕರಲ್ಲಿ ತೀವ್ರ ಅಸಹನೆಯುಂಟುಮಾಡಿತ್ತು. ಕೆಲವೊಂದು ಜಿಲ್ಲೆಗಳಲ್ಲಿ ತಾತ್ಕಾಲಿಕ ವ್ಯವಸ್ಥೆಗಳ ಮೂಲಕ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸಲಾದರೂ ಹೆಚ್ಚಿನ ಕಡೆಗಳಲ್ಲಿ ಜನಸಾಮಾನ್ಯರು ತೊಂದರೆ ಅನುಭವಿಸಿದರು.
ಯಾವುದೇ ನಿಗಮ, ಸಂಸ್ಥೆ, ಇಲಾಖೆಗಳ ಮುಷ್ಕರವಾಗಲೀ ಕೊನೆಗೆ ಸಂಕಷ್ಟಕ್ಕೀಡಾಗುವುದು ಜನ ಸಾಮಾನ್ಯನೇ. ಹೀಗಿರುವಾಗ ಮುಷ್ಕರಕ್ಕೆ ಕರೆಕೊಡುವ ಸಂಸ್ಥೆಗಳು ಹಾಗೂ ಸಮಸ್ಯೆಗಳು ಮುಷ್ಕರದವರೆಗೂ ಬೆಳೆಯುವವರೆಗೆ ಸುಮ್ಮನಿರುವ ಸರ್ಕಾರವೂ ಸಾರ್ವಜನಿಕ ಸ್ಥಾನದಲ್ಲಿ ನಿಂತು ಕೊಂಚ ಯೋಚಿಸಬೇಕಿದೆ.
ಸರ್ಕಾರದ ಎಚ್ಚರಿಕೆ, ನ್ಯಾಯಾಲಯದ ಸೂಚನೆ ಮತ್ತು ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ, ಜಂಟಿ ಕ್ರಿಯಾ ಸಮಿತಿಯು ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದು, ತಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಈ ಮಧ್ಯೆ ಸರ್ಕಾರ ಮತ್ತು ನೌಕರರ ನಡುವೆ ಸಮಾಲೋಚನೆಯ ಮೂಲಕ ಬಿಕ್ಕಟ್ಟಿಗೆ ಶೀಘ್ರವೇ ಪರಿಹಾರ ಸಿಗಲಿ ಎಂಬುದೇ ಸಾರ್ವಜನಿಕರ ನಿರೀಕ್ಷೆ.