ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ಗೆ ಆತಿಥ್ಯ ವಹಿಸುತ್ತಿರುವ ಬಿಡದಿ ಕೈಗಾರಿಕಾ ಪ್ರದೇಶದ ‘ಜಾಲಿವುಡ್ ಸ್ಟುಡಿಯೊ’ಗೆ ಇದೀಗ ಕಾನೂನಿನ ಸಂಕಷ್ಟ ಎದುರಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದ ಹಾಗೂ ಕಡ್ಡಾಯ ಅನುಮತಿಗಳನ್ನು ಪಡೆಯದ ಹಿನ್ನೆಲೆಯಲ್ಲಿ, ಈ ಸ್ಟುಡಿಯೊದಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿಲ್ಲ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಟುಡಿಯೋದ ಕಾನೂನು ಉಲ್ಲಂಘನೆಗಳ ಕುರಿತು ಮಾಹಿತಿ ನೀಡಿದರು. ‘ಬಿಗ್ ಬಾಸ್’ ಹೊಸ ಸೀಸನ್ ಆರಂಭಕ್ಕೆ ಇನ್ನು ಕೇವಲ ಕೆಲವೇ ದಿನಗಳು ಬಾಕಿ ಇರುವಾಗಲೇ ಸಚಿವರು ನೀಡಿರುವ ಈ ಕಟ್ಟುನಿಟ್ಟಿನ ಹೇಳಿಕೆಯು, ಸ್ಟುಡಿಯೋದ ನಿಯಮ ಉಲ್ಲಂಘನೆಯ ಪ್ರಕರಣವನ್ನು ಮತ್ತೆ ಮುನ್ನೆಲೆಗೆ ತಂದಿದ್ದು, ಶೋನ ಚಿತ್ರೀಕರಣದ ಬಗ್ಗೆ ಅನಿಶ್ಚಿತತೆ ಮೂಡಿಸಿದೆ.
”ಕಾನೂನು ಮತ್ತು ಪರಿಸರ ನಿಯಮಗಳು ಎಲ್ಲರಿಗೂ ಒಂದೇ ಆಗಿದ್ದು, ಪ್ರತಿಯೊಬ್ಬರೂ ಅದನ್ನು ಪಾಲಿಸಲೇಬೇಕು” ಎಂದು ಸಚಿವರು ಎಚ್ಚರಿಸಿದ್ದಾರೆ. ಕಳೆದ ವರ್ಷ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಈ ಸ್ಟುಡಿಯೊ ಮೇಲೆ ದಾಳಿ ನಡೆಸಿದ್ದಾಗ ಹಲವು ಗಂಭೀರ ಲೋಪಗಳು ಬೆಳಕಿಗೆ ಬಂದಿದ್ದವು. ‘ನೀರು ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ, 1974’ರ ಅಡಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಬೃಹತ್ ಸ್ಟುಡಿಯೊ ಆವರಣದಲ್ಲಿ ತ್ಯಾಜ್ಯನೀರು ಸಂಸ್ಕರಣಾ ಘಟಕ (STP) ಅಳವಡಿಸಿರಲಿಲ್ಲ ಹಾಗೂ ತ್ಯಾಜ್ಯನೀರನ್ನು ಯಾವುದೇ ಸಂಸ್ಕರಣೆ ಇಲ್ಲದೆ ನೇರವಾಗಿ ತೆರೆದ ಚರಂಡಿಗಳಿಗೆ ಹರಿಸಲಾಗುತ್ತಿತ್ತು ಎಂಬುದನ್ನು ಸಚಿವರು ಎಳೆಎಳೆಯಾಗಿ ಬಿಚ್ಚಿಟ್ಟರು.
ಇಷ್ಟೆಲ್ಲಾ ಗಂಭೀರ ನಿಯಮಗಳ ಉಲ್ಲಂಘನೆಯಾಗಿದ್ದರೂ, ಸ್ಟುಡಿಯೊ ಆಡಳಿತ ಮಂಡಳಿಯು ಈವರೆಗೆ ಚಿತ್ರೀಕರಣದ ಅನುಮತಿ ಕೋರಿ ಮಂಡಳಿಗೆ ಅಧಿಕೃತವಾಗಿ ಅರ್ಜಿಯನ್ನೇ ಸಲ್ಲಿಸಿಲ್ಲ ಎಂಬುದು ಗಮನಾರ್ಹ. “ಒಂದು ವೇಳೆ ಸ್ಟುಡಿಯೊದಲ್ಲಿ ಚಿತ್ರೀಕರಣವನ್ನು ಮರುಆರಂಭಿಸಲು ಬಯಸಿದರೆ, ಕಡ್ಡಾಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಧಿಕೃತ ಒಪ್ಪಿಗೆ ಪಡೆಯಲೇಬೇಕು. ಅದಕ್ಕೂ ಮುನ್ನ, ಈವರೆಗೆ ಮಾಡಿರುವ ಪರಿಸರ ನಿಯಮಗಳ ಉಲ್ಲಂಘನೆಗೆ ದಂಡ ಶುಲ್ಕವನ್ನು ಪಾವತಿಸುವುದು ಕಡ್ಡಾಯ” ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ.




