ನವದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ವೇಳೆ ರ್ಯಾಪಿಡ್ ಆಕ್ಷನ್ ಫೋರ್ಸ್ (RAF – CRPF ನ ವಿಶೇಷ ವಿಭಾಗ) ಪೆಲೆಟ್ ಗನ್ಗಳನ್ನು ಬಳಸಿದೆ. ಇದರಿಂದ ಹಲವು ವಿದ್ಯಾರ್ಥಿಗಳು, ಹೋರಾಟಗಾರರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಸಂಬಂಧ ಮಾಹಿತಿ ಹಕ್ಕು (RTI) ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರಿಸಿರುವ CRPF, “ಪೆಲೆಟ್ ಗನ್ಗಳ ಬಳಕೆ ಮಾನವಹಕ್ಕುಗಳ ಉಲ್ಲಂಘನೆ ವ್ಯಾಪ್ತಿಗೆ ಬರುವುದಿಲ್ಲ” ಎಂದು ಹೇಳಿಕೊಂಡಿದೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸಾಕೇತ್ ಗೋಖಲೆ ಅವರು ಮಾಹಿತಿ ಹಕ್ಕು ಕಾಯ್ದೆಯಡಿ, ಪ್ರತಿಭಟನೆ ವೇಳೆ ಬಳಸಲಾದ ಪೆಲೆಟ್ ಗನ್ ಹಾಗೂ ಅಮ್ಮುನಿಷನ್ ಬಳಕೆಯ ವಿವರಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಆರ್ಟಿಐ ಕಾಯ್ದೆಯ ಸೆಕ್ಷನ್ 24(1)ರ ಪ್ರಕಾರ ಸಿಆರ್ಪಿಎಫ್ಗೆ ಮಾಹಿತಿಯಿಂದ ವಿನಾಯಿತಿ ಇದೆಯಾದರೂ, ಭ್ರಷ್ಟಾಚಾರ ಮತ್ತು ಮಾನವಹಕ್ಕು ಉಲ್ಲಂಘನೆಯ ಆರೋಪಗಳಿದ್ದಾಗ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: ಲೋಹದ ಪೆಲೆಟ್ ಗನ್ ನಿಷೇಧ, ಪರಿಹಾರಕ್ಕೆ ಆಗ್ರಹ: ಸುಪ್ರೀಂ ಮೆಟ್ಟಿಲೇರಿದ ಸಂತ್ರಸ್ತರು!
ಆದರೆ, ಸಿಆರ್ಪಿಎಫ್ ಅರ್ಜಿಯ ನಿರಾಕರಣೆ ಮಾಡಿದ್ದು, ಈ ಘಟನೆಯು ಮಾನವಹಕ್ಕು ಉಲ್ಲಂಘನೆಯ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಇದು ಕಾರ್ಯಾಚರಣೆಯ ಭದ್ರತೆಗೆ ಸಂಬಂಧಿಸಿದ ವಿಷಯ ಎಂದು ತಿಳಿಸಿದೆ.
ಇನ್ನು ಈ ಹಿಂದೆ ಈ ಹಿಂದೆ ಪೆಲೆಟ್ ಗನ್ ಬಳಕೆಯ ಪ್ರಕರಣಗಳ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್, “ಜನಸಂದಣಿ ನಿಯಂತ್ರಣಕ್ಕೆ ಪೆಲೆಟ್ ಗನ್ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ, ಗಲಭೆ ಅಥವಾ ಅಸಾಧಾರಣ ಪರಿಸ್ಥಿತಿಗಳಲ್ಲಿ ಶ್ರೇಣೀಕೃತ ಪೊಲೀಸ್ ಕ್ರಮವಾಗಿ ಇದನ್ನು ಬಳಸಲು ನಿಯಮಾವಳಿಗಳಿವೆ” ಎಂದು ಅಭಿಪ್ರಾಯಪಟ್ಟಿತ್ತು.
ಆದರೆ ಸಾರ್ವಜನಿಕರ ಮೇಲೆ ಅತಿಯಾದ ಹಾಗೂ ಅನಗತ್ಯ ಬಲಪ್ರಯೋಗ ಮಾಡಬಾರದು ಮತ್ತು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ. ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪ್ರತ್ಯೇಕ ತನಿಖಾ ಸಮಿತಿಯನ್ನೂ ರಚಿಸಿದೆ.
ಮಾನವಹಕ್ಕು ಸಂಘಟನೆಗಳು ಹಾಗೂ ಹೋರಾಟಗಾರರು ಪೆಲೆಟ್ ಗನ್ ಬಳಕೆಯನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಪೆಲೆಟ್ ಗನ್ನಿಂದ ಚಿಮ್ಮುವ ಲೋಹದ ಹಾಗೂ ಪ್ಲಾಸ್ಟಿಕ್ ಚೂರುಗಳು ಗಂಭೀರ ಗಾಯಗಳನ್ನುಂಟುಮಾಡುತ್ತವೆ. ಅನೇಕ ಸಂದರ್ಭಗಳಲ್ಲಿ ಯುವಕರು ಮತ್ತು ಪ್ರತಿಭಟನಾಕಾರರು ಶಾಶ್ವತವಾಗಿ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ. ಇದನ್ನು ಅಂತಾರಾಷ್ಟ್ರೀಯ ಮಾನವಹಕ್ಕುಗಳ ಉಲ್ಲಂಘನೆ ಎಂದೂ ಪ್ರತಿಪಾದಿಸಿದ್ದಾರೆ.




