ಕರ್ನಾಟಕ ಸರ್ಕಾರ ರೂಪಿಸಿರುವ ರೋಹಿತ್ ವೇಮುಲ ಕಾಯ್ದೆಯನ್ನು ಬಲಪಡಿಸಲು ಒತ್ತಾಯಿಸಿ ವಿಶ್ವಸಂಸ್ಥೆ ಭಾರತ ಸರ್ಕಾರಕ್ಕೆ ಪತ್ರ ಬರೆದಿದೆ. ಕಾಯ್ದೆಯ ಕರಡು ದಲಿತರು ಮತ್ತು ಆದಿವಾಸಿಗಳಿಗೆ ನಿರ್ದಿಷ್ಟ ರಕ್ಷಣೆ ಬಗ್ಗೆ ಉಲ್ಲೇಖಿಸಿಲ್ಲ. ಆದ್ದರಿಂದ ಈ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ವಿಶ್ವಸಂಸ್ಥೆಯ ವರ್ಣಭೇದ ನೀತಿ ವಿರೋಧಿ ಘಟಕದ ಸದಸ್ಯೆ ಹಾಗೂ ಮಾನವ ಹಕ್ಕುಗಳ ತಜ್ಞೆ ಕೆ.ಪಿ. ಅಶ್ವಿನಿ ಮತ್ತು ಅಲ್ಪಸಂಖ್ಯಾತ ನೀತಿ ಘಟಕದ ಸದಸ್ಯ ನಿಕೋಲಸ್ ಲೆವ್ರತ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಮಾತ್ರವಲ್ಲದೆ ರಾಜ್ಯ ಸರ್ಕಾರದ ಸಂಬಂಧಪಟ್ಟ ಸಚಿವಾಲಯಗಳಿಗೆ ರವಾನಿಸಲಾಗಿದೆ ಎಂದು ಕೆ.ಪಿ. ಅಶ್ವಿನಿ ಮತ್ತು ನಿಕೋಲಸ್ ಲೆವ್ರತ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಪ್ರಸ್ತಾವಿತ ರೋಹಿತ್ ವೇಮುಲ ಮಸೂದೆ ‘ಹಲ್ಲಿಲ್ಲದ ಹುಲಿ’ಯಂತಿದೆಯೇ?
ರೋಹಿತ್ ವೇಮುಲಾ ಕಾಯ್ದೆಯ ಕರಡು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಉಲ್ಲೇಖಿಸಿದೆ. ಆದರೆ ಮಾನಸಿಕ ಆರೋಗ್ಯ, ಶೈಕ್ಷಣಿಕ ಪ್ರಗತಿ, ವಸತಿ, ಕಿರುಕುಳ ಮತ್ತು ಹಿಂಸಾಚಾರ ಮೊದಲಾದವುಗಳ ಉಲ್ಲೇಖಿಸಿಲ್ಲ. ವಿವಿಧ ಕ್ಷೇತ್ರಗಳಲ್ಲಿನ ಅಸಮಾನ ತಾರತಮ್ಯ ನಡೆಯುತ್ತದೆ. ಇದರ ವಿರುದ್ಧ ದಲಿತರು ಮತ್ತು ಆದಿವಾಸಿಗಳಿಗೆ ರಕ್ಷಣೆಯ ಬಗ್ಗೆ ಯಾವುದೇ ಸೂಚನೆಯುಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ದಲಿತರು ಮತ್ತು ಆದಿವಾಸಿಗಳ ವಿರುದ್ಧದ ತಾರತಮ್ಯವನ್ನು ಪರಿಹರಿಸಲು ರೋಹಿತ್ ವೇಮುಲಾ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ನಾವು ಗೌರವದಿಂದ ಒತ್ತಾಯಿಸುತ್ತೇವೆ. ಹಾಗೆಯೇ ಕರಡು ರಚನೆಯ ಸಮಿತಿಯಲ್ಲಿ ಜಾತಿ, ಲಿಂಗ ಮತ್ತು ಭೌಗೋಳಿಕ ಪ್ರಾತಿನಿಧ್ಯ ಇರಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.
ಜಾತಿ ಆಧಾರಿತ ದ್ವೇಷ ಭಾಷಣ, ತಪ್ಪು ಮಾಹಿತಿ ತಡೆಯಬೇಕು. ತಮ್ಮ ಹಕ್ಕಿನ ಬಗ್ಗೆ ಮಾತನಾಡುವವರ ಮೇಲೆ ಪ್ರತೀಕಾರದ ದಾಳಿ ನಡೆಸಲಾಗುತ್ತಿದೆ. ಆ ದಾಳಿಯ ವಿರುದ್ಧವಾಗಿ ರಕ್ಷಣೆ ನೀಡಬೇಕು ಎಂದು ಒತ್ತಾಯಿಸುವುದಾಗಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಹಾಗೆಯೇ ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ರೋಹಿತ್ ವೇಮುಲಾ ಕಾಯ್ದೆಯ ಪ್ರಸ್ತುತ ಕರಡಿನೊಳಗೆ ಶಿಕ್ಷೆಯ ವಿಧಾನ ಪರಿಶೀಲಿಸಲು ಕ್ರಮಕೈಗೊಳ್ಳಲಾಗುತ್ತದೆಯೇ? ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು, ವಿದ್ವಾಂಸರು ಮತ್ತು ಕಾರ್ಯಕರ್ತರು ಸೇರಿದಂತೆ ಪ್ರಕರಣದಲ್ಲಿ ತಾರತಮ್ಯಕ್ಕೆ ಒಳಗಾದವರ ಬಳಿ ಯಾವ ರೀತಿಯಲ್ಲಿ ಸಮಾಲೋಚನೆ ನಡೆಸಲಾಗಿದೆ ಮತ್ತು ಮುಂದೆ ಹೇಗೆ ನಡೆಸಲಾಗುತ್ತದೆ? ಕಾನೂನು ಜಾರಿಗೆ ನಿರೀಕ್ಷಿತ ಸಮಯಮಿತಿ ಏನಿದೆ? ಕಾಯ್ದೆ ರಚನಾ ಕರಡು ಸಮಿತಿಯು ಜಾತಿ ಮತ್ತು ಲಿಂಗ ಪ್ರಾತಿನಿಧ್ಯಕ್ಕೆ ಅನುಗುಣವಾಗಿದೆ ಇದೆಯೇ? ಪ್ರತಿನಿಧಿಗಳು ಕರ್ನಾಟಕದವರು ಎಂದು ಖಚಿತಪಡಿಸಿಕೊಳ್ಳಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಲಾಗಿದೆ.
