ದೇಶದಲ್ಲಿ ಸಂವಿಧಾನ ಉಳಿಯಬೇಕು, ಜಾತ್ಯತೀತ ಶಕ್ತಿ ಬೆಳೆಯಬೇಕು, ಕೋಮುವಾದಿಗಳನ್ನು ನಿಯಂತ್ರಣ ಮಾಡಬೇಕು ಎಂಬ ಸುದುದ್ದೇಶದಿಂದ ಮುಸ್ಲಿಮರು ಕಾಂಗ್ರೆಸ್ ಬೆಂಬಲಿಸುತ್ತ ಬಂದಿದ್ದಾರೆ. ಕಾಂಗ್ರೆಸ್ ಜತೆಗೆ ಮುಸ್ಲಿಮರಿಗೆ ಅನ್ಯೋನ್ಯ ಸಂಬಂಧ ಇದೆ. ಉಲಮಾಗಳು ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಕೆಪಿಸಿಸಿ ವಕ್ತಾರ ಎಸ್ ಎಂ ಪಾಟೀಲ ಗಣಿಹಾರ ಹೇಳಿದರು.
ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ದಾವಣಗೆರೆ, ಬಾಗಲಕೋಟೆ ಚುನಾವಣೆ ಫಲಿತಾಂಶ ಬರುವ ಮುನ್ನವೇ ಕಾಂಗ್ರೆಸ್‌ಗೆ ಬೆಂಬಲ ನೀಡಿಲ್ಲ, ಮತ ಹಾಕಿಸಿಲ್ಲವೆಂದು ಮುಸ್ಲಿಂ ಮುಖಂಡರ ವಿರುದ್ಧ ವರಿಷ್ಠರು ಕ್ರಮ ಜರುಗಿಸಿರುವುದು ತರಾತುರಿಯ ನಿರ್ಣಯವಾಗಿದೆ. ಆದರೆ, ಇದನ್ನಿಟ್ಟುಕೊಂಡು ಕಾಂಗ್ರೆಸ್ ವಿರೋಧಿಸುವುದು ಸರಿಯಲ್ಲ. ಸಮಾಜದ ಯಾರೋ ಮೂವರನ್ನು ಮಂತ್ರಿ ಮಾಡಲು ಮುಸ್ಲಿಮರು ಕಾಂಗ್ರೆಸ್‌ಗೆ ವೋಟ್ ಹಾಕಿಲ್ಲ ಎಂಬುದನ್ನು ಉಲಮಾಗಳು ತಿಳಿದುಕೊಳ್ಳಬೇಕು” ಎಂದರು.
“ಮುಸ್ಲಿಮರಿಗೆ ದೇಶದಲ್ಲಿ ಸದ್ಯ ಸಾಮಾಜಿಕ ಸುರಕ್ಷತೆ ಬೇಕಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸಾಕಷ್ಟು ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರವು ಮುಸ್ಲಿಮರಿಗೆ ಹಲವು ಅನುಕೂಲ ಮಾಡಿಕೊಟ್ಟಿದೆ. ಕೇವಲ ಒಂದು ಎಂಎಲ್‌ಎ ಇಲ್ಲವೆಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ಸಾರಾಸಗಟಾಗಿ ವಿರೋಧಿಸುವುದು ಸರಿಯಲ್ಲ. ಮುಸ್ಲಿಮರಿಗಾಗಿ ಕಾಂಗ್ರೆಸ್ ಯಾವುದೇ ಕಾರ್ಯವನ್ನು ಮಾಡಲಿಲ್ಲವೆಂದು ಬಿಂಬಿಸುವುದು ಸರಿಯಲ್ಲ” ಎಂದು ಹೇಳಿದರು.
“ಜಮೀರ್ ಅಹ್ಮದ್ ಸಚಿವರಾದ ಬಳಿಕ ಈವರೆಗೂ ಎಲ್ಲಿಯೂ ಅಲ್ಪಸಂಖ್ಯಾತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯೇ ನಡೆಸಿಲ್ಲ. ಒಬ್ಬ ಮುಸ್ಲಿಮರಿಗೂ ಗಂಗಾ ಕಲ್ಯಾಣ ಯೋಜನೆ ಫಲ ದೊರಕಿಲ್ಲ” ಎಂದು ಅಲ್ಪಸಂಖ್ಯಾತ ಮುಖಂಡ ಎಂ ಸಿ ಮುಲ್ಲಾ ಆರೋಪಿಸಿದರು.
“ಅಲ್ಪಸಂಖ್ಯಾತ ಶ್ರೇಯೋಭಿವೃದ್ಧಿ ಅನುದಾನವನ್ನು ಶಾಸಕ ಯತ್ನಾಳರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಹಂಚಿಕೆ ಮಾಡಿದ್ದಾರೆ, ಅಲ್ಪಸಂಖ್ಯಾತರಿಗೆ ಈ ಎಲ್ಲ ನಾಯಕರ ಕೊಡುಗೆ ಏನು? ಇವರು ತಮ್ಮ ಖಾತೆಯನ್ನೇ ಸಮರ್ಪಕವಾಗಿ ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ” ಎಂದರು.
ಇದನ್ನೂ ಓದಿ >ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ: ನೂರ್ ಶ್ರೀಧರ್
“ಸಚಿವ ರಹೀಂ ಖಾನ್ ಇದ್ದಾರೆ ಎಂಬುದೇ ನೆನಪಿಲ್ಲ. ಅವರು ಸಚಿವರು ಎಂಬುದೂ ಸಹ ನಮಗೆ ಅರಿವಿಲ್ಲ, ಅವರ ಹೆಸರೇ ನಮಗೆ ನೆನಪಿಲ್ಲದಂತಾಗಿದೆ’ ಎಂದು ವ್ಯಂಗ್ಯವಾಡಿದರು.
“ನಸೀರ್ ಅಹ್ಮದ್ ಬಾಗಲಕೋಟೆಯಲ್ಲಿ ಸಕ್ರಿಯವಾಗಿ ಪ್ರಚಾರ ಮಾಡಿದ್ದಾರೆ. ಅವರ ಮೇಲೆ ಕ್ರಮ ಬೇಡ. ರಾಜಕೀಯ ಕಾರ್ಯದರ್ಶಿ ಹುದ್ದೆಯನ್ನು ವಾಪಾಸ್ ನೀಡಬೇಕು” ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರಾದ ನಾಗರಾಜ ಲಂಬು, ಫಯಾಜ್ ಕಲಾದಗಿ, ವಸಂತಹೊನಮೋಡೆ ಇದ್ದರು.





