ರಾಜಕೀಯದಲ್ಲಿ ಎದುರಾಳಿಗಳನ್ನು ಮಣಿಸಲು ಅವರ ಕುಟುಂಬದ ಮಹಿಳೆಯರನ್ನು ಎಳೆದು ತರುವ ಗುವಾಹಟಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕೇವಲ ರಾಜಕೀಯ ಲಾಭಕ್ಕಾಗಿ ‘ಅಮಾಯಕ ಮಹಿಳೆ’ಯನ್ನು ವಿವಾದಕ್ಕೆ ಎಳೆದು ತಂದಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದು ಅತ್ಯಗತ್ಯ ಎಂದು ನ್ಯಾಯಾಲಯ ಆದೇಶ ನೀಡಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿಣಿಕಿ ಭುಯಾನ್ ಶರ್ಮಾ ವಿರುದ್ಧ ನಕಲಿ ದಾಖಲೆಗಳ ಆಧಾರದ ಮೇಲೆ ಗಂಭೀರ ಆರೋಪ ಮಾಡಿದ್ದ ಪ್ರಕರಣದಲ್ಲಿ, ಪವನ್ ಖೇರಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಪಾರ್ಥಿವ್ ಜ್ಯೋತಿ ಸೈಕಿಯಾ ಅವರಿದ್ದ ಪೀಠವು ಖೇರಾ ನಡೆಯನ್ನು ಖಂಡಿಸಿದ್ದು, ಇದೊಂದು ಕೇವಲ ಮಾನನಷ್ಟ ಮೊಕದ್ದಮೆಯಲ್ಲ, ಬದಲಾಗಿ ವ್ಯವಸ್ಥಿತ ಪಿತೂರಿ ಎಂಬ ಅರ್ಥದಲ್ಲಿ ತೀರ್ಪು ನೀಡಿದೆ.
ನ್ಯಾಯಾಲಯ ಹೇಳಿರುವುದೇನು?
“ಮುಖ್ಯಮಂತ್ರಿಗಳ ಪತ್ನಿ ರಾಜಕೀಯದಲ್ಲಿ ಸಕ್ರಿಯರಾಗಿಲ್ಲ. ಒಂದು ವೇಳೆ ಈ ಆರೋಪಗಳನ್ನು ನೇರವಾಗಿ ಮುಖ್ಯಮಂತ್ರಿಗಳ ವಿರುದ್ಧವೇ ಮಾಡಿದ್ದರೆ, ಅದನ್ನು ಕೇವಲ ರಾಜಕೀಯ ಹೇಳಿಕೆ ಎಂದು ಪರಿಗಣಿಸುವ ಅವಕಾಶವಿತ್ತು. ಆದರೆ, ತಮ್ಮ ರಾಜಕೀಯ ಲಾಭದ ಬೇಳೆ ಬೇಯಿಸಿಕೊಳ್ಳಲು ಓರ್ವ ಅಮಾಯಕ ಮಹಿಳೆಯನ್ನು ಉದ್ದೇಶಪೂರ್ವಕವಾಗಿ ವಿವಾದಕ್ಕೆ ಎಳೆದು ತರಲಾಗಿದೆ. ಹೀಗಾಗಿ ನಕಲಿ ದಾಖಲೆಗಳ ಅಸಲಿ ಮೂಲ ಪತ್ತೆಹಚ್ಚಲು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುವುದು ತನಿಖಾ ದೃಷ್ಟಿಯಿಂದ ಅನಿವಾರ್ಯ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ
ಗುವಾಹಟಿಯಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಖೇರಾ, ರಿಣಿಕಿ ಶರ್ಮಾ ಅವರು ಮೂರು ವಿದೇಶಿ ಪಾಸ್‌ಪೋರ್ಟ್‌ಗಳನ್ನು ಹಾಗೂ ಅಮೆರಿಕದಲ್ಲಿ ಕಂಪನಿಯೊಂದನ್ನು ಹೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಹಿನ್ನಲೆಯಲ್ಲಿ ಅಸ್ಸಾಂ ಕ್ರೈಮ್ ಬ್ರ್ಯಾಂಚ್ ವಂಚನೆ ಮತ್ತು ನಕಲಿ ದಾಖಲೆ ದಾಖಲೆ ಸೃಷ್ಟಿಯಡಿ(ಫೋರ್ಜರಿ) ಎಫ್‌ಐಆರ್ ದಾಖಲಿಸಿತ್ತು.
ವಿಚಾರಣೆ ವೇಳೆ, ನ್ಯಾಯಾಲಯದ ಮುಂದೆ ಈ ಆರೋಪಗಳನ್ನು ಸಾಬೀತುಪಡಿಸುವಂತಹ ಯಾವುದೇ ಪುರಾವೆ ಒದಗಿಸುವಲ್ಲಿ ಖೇರಾ ಸಂಪೂರ್ಣ ವಿಫಲರಾಗಿದ್ದಾರೆ. ಇದು, ಉದ್ದೇಶಪೂರ್ವಕವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಅನುಮಾನಗಳನ್ನು ಬಲಪಡಿಸಿದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.
ಈ ಆಧಾರರಹಿತ ಮತ್ತು ನಕಲಿ ದಾಖಲೆಗಳನ್ನು ಪವನ್ ಖೇರಾ ಅವರಿಗೆ ಪೂರೈಸಿದ ಅಸಲಿ ವ್ಯಕ್ತಿಗಳು ಯಾರು? ಇದರ ಹಿಂದಿನ ಪಿತೂರಿ ಏನು? ಎಂಬುದನ್ನು ಪತ್ತೆ ಹಚ್ಚಬೇಕಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.





